ಪಾಂಡವರಲ್ಲಿ ಮೂರನೆಯವನಾದ ಅರ್ಜುನನಿಗೆ ಒಮ್ಮೆ ತೀರ್ಥಯಾತ್ರೆ ಹೋಗುವ ಮನಸ್ಸಾಯಿತು. ತೀರ್ಥಯಾತ್ರೆಯನ್ನು ಮಾಡಿ ಆ ಸ್ಥಳದಲ್ಲಿ ಧ್ಯಾನ ಅಥವಾ ಪ್ರಾರ್ಥನೆಯನ್ನು ಮಾಡಿದ್ದಲ್ಲಿ ದೇವರು ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂತೆಯೇ ಅರ್ಜುನನು ತನ್ನ ಶತ್ರುಗಳನ್ನು ನಾಶಮಾಡಲು ಶಕ್ತಿಯನ್ನು ಸಂಪಾದಿಸುವುದಕ್ಕಾಗಿ ತೀರ್ಥಯಾತ್ರೆಯನ್ನು ಕೈಗೊಂಡನು.
ಅರ್ಜುನನು ತೀರ್ಥಯಾತ್ರೆ ಕೈಗೊಳ್ಳಲು ಅಪೇಕ್ಷೆಪಟ್ಟ ದಕ್ಷಿಣ ಸಮುದ್ರ ತೀರದಲ್ಲಿ ಐದು ಪವಿತ್ರ ತೀರ್ಥಕ್ಷೇತ್ರಗಳಿದ್ದವು. ಅರ್ಜುನನು ಈ ಎಲ್ಲಾ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದನು. ಆದರೆ ಅಲ್ಲಿ ಯಾವುದೇ ಜನರು ಕಂಡುಬರದ ಕಾರಣ ಅರ್ಜುನನು ಅತ್ಯಂತ ನಿರಾಶೆಗೊಂಡನು. ಈ ಪವಿತ್ರ ಕ್ಷೇತ್ರದಲ್ಲಿ ಏನೋ ತಪ್ಪು ನಡೆದು ಹೋಗಿದೆ ಅಥವಾ ನಾನು ಬೇರೆ ಯಾವುದೋ ಸ್ಥಳಕ್ಕೆ ಬಂದಿರಬಹುದೆಂದು ಅರ್ಜುನನು ಯೋಚಿಸಿದನು.
ಎಲ್ಲಾ ಐದೂ ತೀರ್ಥಕ್ಷೇತ್ರಗಳ ದರ್ಶನ ಮಾಡಿ ಅತ್ಯಂತ ಬೇಸರದಿಂದಲೇ ಅರ್ಜುನನು ಹಿಂತಿರುಗಿದನು. ಸ್ವಲ್ಪ ದೂರ ಸಾಗಿದಾಗ ಒಬ್ಬ ಋಷಿಯು ತಪಸ್ಸು ಮಾಡುತ್ತಿರುವುದನ್ನು ಅರ್ಜುನನು ಕಂಡನು. ಕೂಡಲೇ ಅವರ ಬಳಿಗೆ ಸಾಗಿ, ಮುನಿಗಳೇ ನಾನು ಈಗಾಗಲೇ ಐದು ಪವಿತ್ರ ಕ್ಷೇತ್ರಕ್ಕೆ ಹೋಗಿ ದೇವರ ದರ್ಶನ ಮಾಡಿ ಬಂದೆ, ಆದರೆ ಅಲ್ಲಿ ಯಾವನೇ ಒಬ್ಬನೂ ಪ್ರಾರ್ಥನೆಗೈಯುವುದಾಗಲಿ ಅಥವಾ ಧ್ಯಾನ ಮಾಡುವುದಾಗಲೀ ಕಾಣುತ್ತಿಲ್ಲವಲ್ಲ, ಯಾಕೆ ಹೀಗೆ ಎಂದು ಕೇಳಿದನು. ಅದಕ್ಕೊಂದು ವಿಶೇಷ ಕಾರಣವಿದೆ ಎಂದು ಮುನಿಗಳು ಉತ್ತರಿಸಿದರು. ಆ ರಹಸ್ಯವನ್ನು ತನಗೆ ತಿಳಿಸುವಂತೆ ಅರ್ಜುನನು ಅವರಿಗೆ ಒತ್ತಾಯಿಸಿದನು.
ನೀನು ಆ ಸ್ಥಳಕ್ಕೆ ಹೋದರೆ ದೇವರ ದರ್ಶನ ಮಾಡುವ ಮೊದಲು ಅಲ್ಲಿರುವ ನದಿಯಲ್ಲಿ ಸ್ನಾನಮಾಡಬೇಕು. ಆದರೆ ಜನರು ಆ ನದಿಗಿಳಿಯುತ್ತಿದ್ದಂತೆ ಭೀಕರ ಮೊಸಳೆಯೊಂದು ಅವರನ್ನು ತಿಂದು ಹಾಕುತ್ತದೆ. ಆ ಪ್ರಾಣಿಯು ನದಿ ನೀರಿನಲ್ಲಿ ವಾಸಿಸುತ್ತದೆ. ಒಮ್ಮೆ ನೀನು ಆ ನದಿಗೆ ಇಳಿದೆ ಅಂತಾದರೆ ನಿನಗೆ ಹಿಂದಕ್ಕೆ ಬರಲು ಸಾಧ್ಯವೇ ಇಲ್ಲ. ಈ ಎಲ್ಲಾ ಐದು ಪುಣ್ಯಕ್ಷೇತ್ರದಲ್ಲಿ ಇದೇ ಸಂಭವಿಸುತ್ತದೆ. ಅದಕ್ಕಾಗಿ ಯಾರೂ ಇಲ್ಲಿ ಧ್ಯಾನವನ್ನಾಗಲೀ ಪ್ರಾರ್ಥನೆಯನ್ನಾಗಲೀ ಮಾಡುವುದಿಲ್ಲ ಎಂದು ಆ ಋಷಿಯು ಕಾರಣವನ್ನು ತಿಳಿಸಿದನು.
ಓ ಹೀಗಾ ವಿಷಯ, ನಾನು ಹಿಂದಕ್ಕೆ ಹೋಗಿ ನದಿಯಲ್ಲಿ ಸ್ನಾನ ಮಾಡುತ್ತೇನೆ. ನಾನೇನು ಭಯಗೊಂಡಿಲ್ಲ ಎಂದು ಅರ್ಜುನನು ಹಿಂತಿರುಗಿ ಹೋಗಿ ನದಿಯಲ್ಲಿ ಸ್ನಾನಕ್ಕಿಳಿದನು. ಋಷಿಯು ಹೇಳಿದಂತೆ ಮೊಸಳೆಯೊಂದು ಅವನನ್ನು ನೀರಿನೊಳಕ್ಕೆ ಎಳೆಯಲು ಪ್ರಾರಂಭಿಸಿತು. ಮೊಸಳೆಯು ಅರ್ಜುನನನ್ನು ತಿನ್ನಲು ಪ್ರಯತ್ನಿಸಿತು. ಆದರೆ ಅರ್ಜುನನು ತನ್ನ ಅಸಾಧಾರಣ ಶಕ್ತಿಯಿಂದ ಮೊಸಳೆಯೊಂದಿಗೆ ಹೋರಾಟ ಪ್ರಾರಂಭಿಸಿದನು. ನೀರಿನಡಿಯಲ್ಲಿ ಇಬ್ಬರ ಮಧ್ಯೆಯೂ ಭೀಕರ ಸೆಣಸಾಟ ನಡೆದು ಕೊನೆಯಲ್ಲಿ ಅರ್ಜುನನು ಮೊಸಳೆಯನ್ನು ಸೋಲಿಸಿದನು. ನಂತರ ಆ ಮೊಸಳೆಯನ್ನು ಎಳೆದುಕೊಂಡು ನೀರಿನಿಂದ ಹೊರಗೆ ಬಂದನು. ನೀರಿನಿಂದ ಹೊರಗೆ ಬರುತ್ತಿದ್ದಂತೆಯೇ ಮೊಸಳೆಯು ಸುಂದರ ಅಪ್ಸರೆಯಾಗಿ ಬದಲಾಯಿತು.
ಇದನ್ನು ನೋಡಿ ಅರ್ಜುನ ಬಹಳ ದಿಗ್ಭ್ರಾಂತಗೊಂಡನು. ನೀನು ಮೊಸಳೆಯ ರೂಪದಲ್ಲಿ ನನ್ನೊಂದಿಗೆ ಸೆಣಸಾಡಿ ಈಗ ನೋಡಿದರೆ ಅಪ್ಸರೆಯಾಗಿ ಬದಲಾಗಿದ್ದೀಯ ಎಂದು ಅರ್ಜುನನು ಆಶ್ಚರ್ಯಚಕಿತನಾಗಿ ಕೇಳಿದನು.
ಆಗ ಅಪ್ಸರೆಯು ಅರ್ಜುನನಲ್ಲಿ, ನೀನು ನನ್ನನ್ನು ರಕ್ಷಿಸಿದ್ದೀಯ. ಇದಕ್ಕಾಗಿ ನಾನು ನಿನಗೆ ಚಿರಋಣಿಯಾಗಿದ್ದೇನೆ. ದಯವಿಟ್ಟು ಇತರ ನಾಲ್ಕು ಮೊಸಳೆಗಳನ್ನೂ ರಕ್ಷಿಸು. ಅವರು ನನ್ನ ಸ್ನೇಹಿತರು ಎಂದು ವಿನಂತಿಸಿದಳು. ಇದೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಅರ್ಜುನನು ಕೇಳಿದಾಗ ಅಪ್ಸರೆಯು ನಡೆದಿದ್ದ ಸಂಗತಿಯನ್ನು ಅರ್ಜುನನಿಗೆ ತಿಳಿಸಿದಳು.
ಒಮ್ಮೆ ಒಬ್ಬ ಪ್ರಸಿದ್ಧ ಋಷಿಯು ಪವಿತ್ರ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದನು. ಅವನು ಎಷ್ಟು ಘೋರವಾಗಿ ತಪಸ್ಸು ಮಾಡುತ್ತಿದ್ದನೆಂದರೆ ದೇವಾದಿದೇವತೆಗಳೆಲ್ಲ ಚಿಂತೆಗೊಳಗಾದರು. ಹೇಗಾದರೂ ಮಾಡಿ ಅವನ ತಪಸ್ಸಿಗೆ ಭಂಗ ತರಬೇಕೆಂದು ನಿರ್ಣಯಿಸಿ ನಮ್ಮನ್ನು ತಪಸ್ಸು ಮಾಡುವ ಸ್ಥಳಕ್ಕೆ ಕಳುಹಿಸಿದರು.
ಅದರಂತೆಯೇ ನಾವು ಆ ಋಷಿಯ ತಪಸ್ಸನ್ನು ಭಂಗಪಡಿಸಲು ಪ್ರಯತ್ನಿಸಿದೆವು. ಆದರೆ ಆ ಋಷಿಯು ಕುಪಿತಗೊಂಡು ಮೊಸಳೆಯ ರೂಪವನ್ನು ಹೊಂದುವಂತೆ ನಮಗೆ ಶಾಪವಿತ್ತನು. ಅಲ್ಲದೆ ನಾವು ಇಲ್ಲಿರುವ ಐದು ಪುಣ್ಯಕ್ಷೇತ್ರಗಳ ನದಿಯಲ್ಲಿ ವಾಸಿಸಿ ನದಿಗಿಳಿಯುವ ಭಕ್ತಾದಿಗಳನ್ನು ತಿಂದುಹಾಕುವಂತೆ ತಿಳಿಸಿದನು.
ಯಾವಾಗ ಬಲಶಾಲಿ ಹಾಗೂ ಧೈರ್ಯವಂತನಾದ ಶೂರನು ಬಂದು ನಮ್ಮೊಂದಿಗೆ ಸೆಣಸಾಡಿ ನಮ್ಮನ್ನು ಸೋಲಿಸಿ ನದಿಯಿಂದ ನಮ್ಮನ್ನು ಹೊರಗೆತರುತ್ತಾನೋ ಅಂದಿಗೆ ನಮ್ಮ ಶಾಪವಿಮೋಚನೆಯಾಗುತ್ತದೆ ಎಂಬುದಾಗಿ ತಿಳಿಸಿದ್ದರು ಎಂದು ಅತ್ಯಂತ ದುಃಖದಿಂದ ಈ ಅಪ್ಸರೆಯು ನಡೆದ ಸಂಗತಿಯನ್ನು ಅರ್ಜುನನಿಗೆ ತಿಳಿಸಿದಳು. ಅಂತಹ ವ್ಯಕ್ತಿಗಾಗಿ ನಾವು ಕಾಯುತ್ತಿದ್ದೆವು. ಇಂದು ನೀನು ನನ್ನನ್ನು ರಕ್ಷಿಸಿದ್ದಿ. ದಯವಿಟ್ಟು ಹೀಗೆಯೇ ನನ್ನ ಸ್ನೇಹಿತರನ್ನು ಕೂಡಾ ರಕ್ಷಿಸು ಎಂಬುದಾಗಿ ಅಪ್ಸರೆಯು ದೈನ್ಯದಿಂದ ಬೇಡಿಕೊಂಡಳು.
ಅಪ್ಸರೆಯ ವಿನಂತಿಯ ಮೇರೆಗೆ ಅರ್ಜುನನು ಉಳಿದ ಎಲ್ಲಾ ನಾಲ್ಕು ನದಿಗಳಿಗೂ ಇಳಿದು ಅದರಲ್ಲಿದ್ದ ಮೊಸಳೆಗಳೊಂದಿಗೆ ಸಣಸಾಡಿ ಅವುಗಳನ್ನು ನೀರಿನಿಂದ ಹೊರಗೆ ತಂದು ಶಾಪ ವಿಮೋಚನೆಗೊಳಿಸಿದನು.