Select Your Language

Notifications

webdunia
webdunia
webdunia
webdunia

ತಿರುಕ್ಕುರಳ್ ಕಂಠಪಾಠ ಹೇಳುವ 7ರ ಬಾಲಕಿ

ತಿರುಕ್ಕುರಳ್ ಕಂಠಪಾಠ ಹೇಳುವ 7ರ ಬಾಲಕಿ
ಕನ್ನಡದಲ್ಲಿ ಸರ್ವಜ್ಞನ ವಚನಗಳು ಇದ್ದಂತೆಯೇ ತಮಿಳಿನಲ್ಲಿ 'ತಿರುಕ್ಕುರಳ್' ಪ್ರಸಿದ್ಧವಾದ ಉಕ್ತಿಗಳು. ಈ ತಿರುಕ್ಕುರಳ್‌ನಲ್ಲಿ 1330 ದ್ವಿಪದಿಗಳಿವೆ.

ಈ ಎಲ್ಲಾ ದ್ವಿಪದಿಗಳನ್ನು ಕಂಠಪಾಠ ಮಾಡಿಕೊಂಡು ಸುಲಲಿತವಾಗಿ ಹೇಳಬಲ್ಲಳು ಕೇವಲ ಏಳು ವರ್ಷ ಪ್ರಾಯದ ಬಾಲೆ ಲವೀನಾಶ್ರೀ. ಅಚ್ಚರಿಯಾಗುತ್ತದೆಯೇ? ಹೌದು. ಆಕೆ ಇದೇ ಕಾರಣಕ್ಕಾಗಿ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ.

ಇದೀಗ ಆಕೆಯ ಈ ಹೆಮ್ಮೆಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ. ಅವಳೀಗ ರಾಷ್ಟ್ರೀಯ ಬಾಲ-ಪ್ರತಿಭೆ ಪ್ರಶಸ್ತಿಯ ಒಡತಿ.

ವಿಶೇಷ ಸಾಧನೆಗಾಗಿ ಇರುವ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ-2006 ಆಯ್ಕೆ ಸಮಿತಿಯು ಮದುರೈಯ ಶಾಲೆಯೊಂದರಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಎಂ.ಲವೀನಾಶ್ರೀಯನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಮೂರು ವರ್ಷದವಳಿರುವಾಗಲೇ ಲವೀನಾ ಈ ತಿರುಕ್ಕುರಳ್ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಳು ಎಂದು ಆಕೆಯ ತಂದೆ ಕೆ.ಮುನಿಸ್ವಾಮಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಈಕೆ ಪಡೆದ ಪ್ರಶಸ್ತಿಗಳಲ್ಲಿ ಪ್ರಮುಖವಾದದ್ದೆಂದರೆ, ತಮಿಳುನಾಡು ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲಾ ಮತ್ತು ತಮಿಳು ಇಲಾಖೆಯಿಂದ ದೊರೆತ 5000 ರೂ. ನಗದು ಪುರಸ್ಕಾರ. ಆಕೆ ಇತ್ತೀಚೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಮದುರೈಗೆ ಬಂದಿದ್ದಾಗ ಅವರನ್ನು ಭೇಟಿಯಾಗಿದ್ದಳು. ಕಲಾಂ ಅವರೂ ಅವಳ ಬೆನ್ನು ತಟ್ಟಿದ್ದರು.

ತಿರುಕ್ಕುರಳನ್ನು ನನ್ನ ಮಗಳು ಕಂಠಪಾಠ ಮಾಡಿಕೊಂಡಿದ್ದಾಳೆ. ಅದನ್ನು ತಪ್ಪಿಲ್ಲದೆ ಉಚ್ಚರಿಸುತ್ತಾಳೆ. ಇದೀಗ ರಾಷ್ಟ್ರೀಯ ಪುರಸ್ಕಾರ ದೊರೆತಿರುವುದು ಈ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಅವಳಿಗೆ ದೊರೆತ ಪ್ರೋತ್ಸಾಹ ಎಂದು ಉದ್ಗರಿಸುತ್ತಾರೆ ಮುನಿಸ್ವಾಮಿ.

ನವದೆಹಲಿಯಲ್ಲಿ ಮಕ್ಕಳ ದಿನವಾದ ನವೆಂಬರ್ 14ರ ಬುಧವಾರ ನಡೆಯುವ ಸಮಾರಂಭದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ರೇಣುಕಾ ಚೌಧುರಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Share this Story:

Follow Webdunia kannada