ಒಂದು ಊರಿನಲ್ಲಿ ಗುಂಡ ಎಂಬ ಹುಡುಗನಿದ್ದ. ಆತನಿಗೆ ತಂದೆ ತಾಯಿ ಯಾರು ಇರಲಿಲ್ಲ. ಆತ ಕೂಲಿ ಕೆಲಸ ಮಾಡಿ ಕಷ್ಟದಿಂದ ತನ್ನ ಜೀವನ ಸಾಗಿಸುತ್ತಿದ್ದ.
ಹೀಗೆ ಒಂದು ದಿನ ಗುಂಡ ಕೆಲಸ ಮುಗಿಸಿ ಆಟಿಕೆಯನ್ನು ತೆಗೆದುಕೊಳ್ಳಲು ಅಂಗಡಿಗೆ ಹೋಗುತ್ತಾನೆ. ಗುಂಡ ಅಲ್ಲಿ ಒಂದು ಅಯಸ್ಕಾಂತ ಕಲ್ಲನ್ನು ಕಂಡು ಅದನ್ನು 5 ರೂಪಾಯಿ ಕೊಟ್ಟು ಖರೀದಿಸುತ್ತಾನೆ.
ಆತ ಅಯಸ್ಕಾಂತ ಕಲ್ಲನ್ನು ಎಲ್ಲಿಗೂ ಹೋದರು ತನ್ನ ಜತೆ ತೆಗೆದುಕೊಂಡು ಹೋಗುತ್ತಿದ್ದ. ಹೀಗೆ ಒಂದು ದಿನ ಗುಂಡ ಕೆಲಸ ಮುಗಿಸಿ ನದಿಯ ಹತ್ತಿರ ತಿರುಗಾಡಲು ಹೋಗುತ್ತಾನೆ. ತಿರುಗಾಡುತ್ತಾ ನದಿ ತೀರದ ಹತ್ತಿರ ಹೋದಾಗ ಆತನಿಗೆ ಏನೋ ವಿಚಿತ್ರ ಅನುಭವವಾದಂತೆ ಆಗುತ್ತದೆ.
ನದಿ ತೀರದಲ್ಲಿ ಅನೇಕ ಅಯಸ್ಕಾಂತ ಕಲ್ಲುಗಳಿರುವುದನ್ನು ನೋಡುತ್ತಾನೆ. ಆ ಅಯಸ್ಕಾಂತ ಕಲ್ಲುಗಳು ಗುಂಡನ ಬಳಿ ಇದ್ದ ಕಲ್ಲಿಗೆ ಅಂಟಲು ಪ್ರಾರಂಭಿಸುತ್ತದೆ.
ಅದರಿಂದ ಗುಂಡ ತಪ್ಪಿಸಲು ಪ್ರಯತ್ನಿಸುತ್ತಾನೆ. ಆದರೆ ಗುಂಡನಿಗೆ ಈ ಅಯಸ್ಕಾಂತ ಕಲ್ಲುಗಳು ಅವನಲ್ಲಿದ್ದ ಅಯಸ್ಕಾಂತ ಕಲ್ಲಿಗೆ ಅಂಟುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಹೀಗೆ ಆತ ಎಷ್ಟೇ ಪ್ರಯತ್ನಿಸಿದರೂ ಅದರಿಂದ ತಪ್ಪಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ ಈ ಅಂಟಿದ ಅಯಸ್ಕಾಂತ ಕಲ್ಲುಗಳಿಂದಾಗಿ ಗುಂಡನ ಮೇಲೆ ಹೆಚ್ಚು ಭಾರ ಬೀಳುತ್ತದೆ. ಆತ ಆಯಾಸದಿಂದ ಅಲ್ಲೇ ಕೂರುತ್ತಾನೆ.
ಹೀಗೆ ಕೂರುವಾಗ ಕಾಪಾಡಿ ಕಾಪಾಡಿ ಎಂದು ಕೂಗುವ ಶಬ್ದ ಕೇಳುತ್ತದೆ. ಗುಂಡ ಶಬ್ದ ಬಂದ ಕಡೆ ನೋಡುತ್ತಾನೆ. ಮುದಿ ಕೊಕ್ಕರೆ ಒಂದು ರಭಸವಾಗಿ ಹರಿಯುತ್ತಿರುವ ನದಿಯ ಮಧ್ಯದಲ್ಲಿ ಸಿಕ್ಕಿಬಿದ್ದಿರುವುದನ್ನು ಕಾಣುತ್ತಾನೆ.
ಅದನ್ನು ರಕ್ಷಿಸುವುದು ಹೇಗೆ ಎಂದು ಯೋಚಿಸಲು ತೊಡಗುತ್ತಾನೆ. ಗುಂಡನಿಗೆ ಒಂದು ವಿಚಾರ ಹೊಳೆಯುತ್ತದೆ. ಆತ ಆ ಆಯಸ್ಕಾಂತ ಕಲ್ಲುಗಳನ್ನು ಒಂದೊಂದಾಗಿ ಜೋಡಿಸಿ ಮುದಿ ಕೊಕ್ಕರೆ ಇದ್ದ ಸ್ಥಳಕ್ಕೆ ಸೇತುವೆಯಂತೆ ಅವುಗಳನ್ನು ಜೋಡಿಸುತ್ತಾನೆ. ಮತ್ತು ಮುದಿ ಕೊಕ್ಕರೆಯನ್ನು ಅದರ ಮುಖಾಂತರ ದಡಕ್ಕೆ ಬರುವಂತೆ ಹೇಳುತ್ತಾನೆ. ಮುದಿ ಕೊಕ್ಕರೆ ನಿಧಾನವಾಗಿ ಅಯಸ್ಕಾಂತ ಕಲ್ಲಿನ ಸೇತುವೆ ಮುಖಾಂತರ ದಡಕ್ಕೆ ಸೇರುತ್ತದೆ.
ಮುದಿ ಕೊಕ್ಕರೆ ಗುಂಡನನ್ನು ಕೊಕ್ಕರೆ ರಾಜನ ಹತ್ತಿರ ಕರೆದುಕೊಂಡು ಹೋಗುತ್ತಾನೆ ಮತ್ತು ನಡೆದ ವಿಷಯವನ್ನು ಮುದಿ ಕೊಕ್ಕರೆ ಹೇಳುತ್ತದೆ. ಇದನ್ನು ಕೇಳಿದ ರಾಜ ಕೊಕ್ಕರೆ ಗುಂಡನಿಗೆ ಧನ್ಯವಾದ ಸಲ್ಲಿಸಿ ಒಂದು ಜಾದೂ ತಟ್ಟೆಯನ್ನು ಕೊಡುತ್ತದೆ. ಈ ಜಾದೂ ತಟ್ಟೆಯಲ್ಲಿ ನಿನಗೆ ಏನು ಬೇಕೋ ಅದನ್ನು ಕೇಳು, ಅದರಲ್ಲಿ ನೀನು ಕೇಳಿದ ವಸ್ತು ಪ್ರತ್ಯಕ್ಷವಾಗುತ್ತದೆ ಎಂದು ಹೇಳುತ್ತದೆ.
ಗುಂಡ ಅದನ್ನು ತನ್ನ ಜತೆಯಲ್ಲಿ ತೆಗೆದುಕೊಂಡು ಹೋಗಿ, ಮುಂದಿನ ದಿನವನ್ನು ಸುಖವಾಗಿ ಆನಂದದಿಂದ ಕಳೆಯುತ್ತಾನೆ.