Select Your Language

Notifications

webdunia
webdunia
webdunia
webdunia

ಗೊರಕೆಗಾರ ಶಣ್ಮುಗಂ

ಗೊರಕೆಗಾರ ಶಣ್ಮುಗಂ
WD
ಕಾಡಿನ ರಾಜನಾದ ಶಣ್ಮುಗಂ ಸಿಂಹ ತುಂಬಾ ಸೋಮಾರಿ. ಶಣ್ಮುಗಂಗೆ ತಿಳಿದಿರುವುದು ಮೂರೇ ಕೆಲಸ ತಿನ್ನುವುದು,ಮಲಗುವುದು ಮತ್ತು ಗೊರಕೆ ಹೊಡೆಯುವುದು.

ಹುತೋಕ್ಷಿ ಕುದುರೆಗೆ ಶಣ್ಮುಗಂ ಮೇಲೆ ಯಾವಾಗಲೂ ಸಿಟ್ಟು. ಎಂಥ ಸೋಮಾರಿ ಇವನು, ಇವನಿಗೆ ತಿನ್ನುವುದು ಮತ್ತು ಮಲಗುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಹುತೋಕ್ಷಿ ಯಾವಾಗಲೂ ಶಣ್ಮುಗಂಗೆ ಬೈಯುತ್ತಿದ್ದಳು. ಸಿಟ್ಟಾಗಬೇಡ ಸಾಧುಸಿಂಹ ರಾಜನಾಗಿರುವುದು ಒಳ್ಳೆಯದೇ ಬದಲಾಗಿ ಯಾವುದೋ ಕ್ರೂರ ಸಿಂಹ ರಾಜನಾಗಿರುತ್ತಿದ್ದರೆ ಎಂದು ಅಮ್ಮ ಆನೆ ಅವಳನ್ನು ಸಮಾಧಾನಪಡಿಸಿದಳು.

ಶಣ್ಮುಗಂ ಹೆಚ್ಚು ತಿಂದಷ್ಟೂ ಹೆಚ್ಚು ನಿದ್ದೆ ಮಾಡುತ್ತಿದ್ದ. ಅಲ್ಲದೆ ಬೆನ್ನ ಮೇಲೆ ಒರಗಿ ಖೊರ್ ರ್ ರ್ ರ್.... ಎಂಬ ಕರ್ಕಶ ಧ್ವನಿಯಿಂದ ಗೊರಕೆ ಹೊಡೆಯುತ್ತಿದ್ದ.

ಮನ್ನು ಮಂಗನಿಗಂತೂ ಶಣ್ಮುಗಂನ ಹೊಟ್ಟೆಯ ಮೇಲೆ ಕೂರುವುದಂದರೆ ಬಹಳ ಇಷ್ಟ. ಶಣ್ಮುಗಂ ದೀರ್ಘ ಉಸಿರೆಳೆದಾಗ ಅವನ ಹೊಟ್ಟೆ ಉರುಟಾಗುತ್ತಿತ್ತು ಮತ್ತು ಉಸಿರು ಬಿಟ್ಟಾಗ ಚಪ್ಪಟೆಯಾಗುತ್ತಿತ್ತು. ಮನ್ನು ಮಂಗನಿಗೆ ಇದೊಂತರಾ ಮೋಜಿನ ಸವಾರಿಯಾಗಿತ್ತು.

ಶಣ್ಮುಗಂನ ಗೊರಕೆ ಕೇಳಿ ಸುಸ್ತಾದಾಗ ಪ್ರಾಣಿಗಳಿಗೆ ಗೊರಕೆ ನಿಲ್ಲಿಸುವ ಸುಲಭ ಉಪಾಯವೂ ತಿಳಿದಿತ್ತು. ಶಣ್ಮುಗಂ ತನ್ನ ಬೆನ್ನ ಮೇಲೆ ಮಲಗಿದಾಗ ಮಾತ್ರ ಗೊರಕೆ ಹೊಡೆಯುತ್ತಿದ್ದ. ಅಮ್ಮ ಆನೆ ತನ್ನ ಬಲವಾದ ಸೊಂಡಿಲಿನಿಂದ ಅವನನ್ನು ಮೆತ್ತಗೆ ಬದಿಗೆ ಹೊರಳಿಸಿದಾಗ ಅವನು ಗೊರಕೆ ಹೊಡೆಯುವುದನ್ನು ನಿಲ್ಲಿಸುತ್ತಿದ್ದ.

ಆ ದಿನ ಶಣ್ಮುಗಂ ಬದಿಗೆ ಹೊರಳಿ ಸದ್ದು ಮಾಡದೆ ಮಲಗಿದ್ದರಿಂದ ಕಾಡು ಶಾಂತಿಯಿಂದಿತ್ತು.ಮನ್ನು ಮಂಗ ಮರ ಏರಿತ್ತು, ರಿತು ಮೊಲ ಬಿಲದೊಳಗೆ ನುಸುಳಿತ್ತು, ಚಂದು ಮೊಸಳೆ ನದಿಗೆ ಹಿಂತಿರುಗಿತ್ತು, ಹುತೋಕ್ಷಿ ಕುದುರೆ ಬಹಾದುರ್ ಮತ್ತು ಅಮ್ಮನೊಂದಿಗೆ ಹೊರಟು ಹೋಗಿದ್ದಳು.ಒಂಟೆ ಕಮಲನಯನ ಮರಳುಗಾಡಿನಿಂದ ವಾಪಾಸು ಬರುತ್ತಿದ್ದ.

ಇದ್ದಕ್ಕಿದ್ದಂತೆಯೇ ಕಮಲನಯನನಿಗೆ ಭಯಾನಕ ಸದ್ದು ಕೇಳಿಸಿತು. ಹೊಸ ಸಿಂಹದ ಗರ್ಜನೆ. ಕೆಟ್ಟ, ಸೊಟ್ಟ, ದುಷ್ಟ, ಗಬ್ಬರ್‌ಸಿಂಹ ಮನೆಗಾಗಿ ಕಾಡನ್ನು ಹುಡುಕುತ್ತಿದ್ದ. ಇಲ್ಲೆಲ್ಲೂ ಬೇರೆ ಸಿಂಹ ಇಲ್ಲವೇನೋ ಬೇರೆ ಬೇರೆ ಪ್ರಾಣಿಗಳ ವಾಸನೆ ಬೇರೆ ಬರುತ್ತಿದೆ. ಇದೇ ನನಗೆ ಸೂಕ್ತ ಜಾಗ ಎಂದು ಗಬ್ಬರ್ ಸಿಂಹ ಕೊಳಕಾಗಿ ನಕ್ಕ.

ಈ ಕೆಟ್ಟ ಸುದ್ದಿಯನ್ನು ತಿಳಿದು ಎಲ್ಲರಿಗೂ ತುಂಬಾ ಬೇಸರವಾಯಿತು. ಹುತೋಕ್ಷಿಯಂತೂ ಉಪಯೋಗವಿಲ್ಲದ ರಾಜ ಎಂದು ಶಣ್ಮುಗಂಗೆ ಬಯ್ಯತೊಡಗಿದಳು.ಎಲ್ಲರೂ ಶಣ್ಮುಗಂನನ್ನು ಎಬ್ಬಿಸಲು ಪ್ರಯತ್ನಿಸಿದರು. ಏಳು ಶಣ್ಮುಗಂ ಏಳು ಎಂದು ಮನ್ನು ಕಿರುಚಿತು. ಆದರೆ ಗಾಢ ನಿದ್ದೆಯಲ್ಲಿದ್ದ ಶಣ್ಮುಗಂಗೆ ಇದು ಕೇಳಿಸಲೇ ಇಲ್ಲ. ಎಲ್ಲರಿಗೂ ಏನು ಮಾಡುವುದೆಂದೇ ತೋಚದಾಯಿತು. ಅಷ್ಟೊತ್ತಿಗೆ ಬಹಾದುರನಿಗೆ ಒಂದು ಉಪಾಯ ಹೊಳೆಯಿತು. ಅವನು ಅಮ್ಮನ ಬಳಿ ಪಿಸುಗುಟ್ಟಿದನು.

ಅಮ್ಮ ಆನೆ ಮೆತ್ತಗೆ ಶಣ್ಮುಗಂನನ್ನು ಎಳೆದು ಬೆನ್ನ ಮೇಲೆ ಮಲಗುವಂತೆ ಮಾಡಿದಳು. ಶಣ್ಮುಗಂ ಬೆನ್ನ ಮೇಲೆ ಮಲಗಿದರೆ ಅವನು ಗೊರಕೆ ಹೊಡೆಯುತ್ತಾನೆ. ಖೊರ್ ರ್ ರ್ ರ್ ರ್.... ಗಬ್ಬರ್ ಸಿಂಗ್‌ಗೆ ಈ ಘರ್ಜನೆ ಕೇಳಿ ತುಂಬಾ ಹೆದರಿಕೆಯಾಯಿತು. ಬಹುಷ ಈ ಕಾಡಿನಲ್ಲಿ ಯಾವುದೋ ಬಲಶಾಲಿ ಸಿಂಹವಿರಬೇಕು. ಅವನು ನನ್ನನ್ನು ನೋಡುವ ಮೊದಲು ಇಲ್ಲಿಂದ ಕಾಲುಕೀಳಬೇಕು ಎಂದು ಓಡಿಹೋಗಿಬಿಟ್ಟ.

ಎಲ್ಲರಿಗೂ ತುಂಬಾ ಖುಶಿ. ಎಂತಹಾ ಜಾಣಮರಿ ಎಂದು ಎಲ್ಲರೂ ಬಹಾದುರನನ್ನು ಹೊಗಳತೊಡಗಿದರು. ಅಷ್ಟುಹೊತ್ತಿಗೆ ಶಣ್ಮುಗಂಗೆ ಎಚ್ಚರವಾಯಿತು. ಎಲ್ಲರೂ ಸುತ್ತ ಸೇರಿರುವುದನ್ನು ನೋಡಿ ಅವನಿಗೆ ಆಶ್ಚರ್ಯವಾಯಿತು. ಏನಾಯಿತು?ನನ್ನ ಗೊರಕೆಯಿಂದ ನಿಮಗೆ ತೊಂದರೆಯಾಯಿತೇ ಎಂದು ಕೇಳಿದ. ಖಂಡಿತಾ ಇಲ್ಲ ಶಣ್ಮುಗಂ ಇನ್ನೂ ಚೆನ್ನಾಗಿ ಗೊರಕೆ ಹೊಡಿ ಎಂದರು ಎಲ್ಲರೂ.

ಅಮ್ಮ ಆನೆಮರಿ ಶಣ್ಮುಗಂನ ಗೊರಕೆಯನ್ನು ನಿಲ್ಲಿಸಲು ಮಾಡುವ ಉಪಾಯ ಮತ್ತು ಗಬ್ಬರ್‌ಸಿಂಗ್ ಸಿಂಹವನ್ನು ಓಡಿಸಲು ಆನೆಮರಿ ಬಹಾದುರನ ಉಪಾಯಗಳು " ಅಪಾಯವನ್ನು ಉಪಾಯದಿಂದ ಎದುರಿಸಬೇಕು ' ಎಂಬ ನೀತಿಯನ್ನು ಈ ಕಥೆಯು ಮಕ್ಕಳಿಗೆ ತಿಳಿಸುತ್ತದೆ.

ಪ್ರಿಯಾ ಕುರಿಯನ್ ಅವರ ಚಿತ್ರಗಳು ಮೊಲ, ಸಿಂಹ, ಮೊಸಳೆ, ಕುದುರೆ, ಒಂಟೆ ಮುಂತಾದ ಪ್ರತಿಯೊಂದು ಮಕ್ಕಳು ಪ್ರಾಣಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಅಲ್ಲದೆ ಬಣ್ಣಬಣ್ಣಗಳಿಂದ ಕೂಡಿದ ಈ ಪುಸ್ತಕವು ಮಕ್ಕಳನ್ನು ಆಕರ್ಷಿಸುತ್ತದೆ.

ಪುಸ್ತಕದ ಹೆಸರು: ಗೊರಕೆಗಾರ ಶಣ್ಮುಗಂ

ಪ್ರಕಾಶಕರು: ತೂಲಿಕಾ ಪಬ್ಲಿಶರ್ಸ್, 13 ಪೃಥ್ವಿ ಅವೆನ್ಯೂ,ಅಭಿರಾಮಪುರಮ್, ಚೆನ್ನೈ- 18

ಲೇಖಕರು: ರಾಧಿಕಾ ಚಡ್ಢಾ

ಅನುವಾದ: ಅಶ್ವಿನಿ ಭಟ್

ಬೆಲೆ: 90 ರೂಪಾಯಿಗಳು




Share this Story:

Follow Webdunia kannada