Publish Date: Mon, 25 Feb 2008 (12:44 IST)
Updated Date: Mon, 25 Feb 2008 (12:43 IST)
ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿರುವಾಗ, ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಬೆವರು ಸುರಿಸಿ ದುಡಿಯಲಾಗುತ್ತಿದೆ, ಎರಡು ಶಿಫ್ಟ್‌ನ ಲ್ಲಿ ದುಡಿಯಲಾಗುತ್ತಿದೆ, ಆ ದೇವರು ನಮ್ಮ ಕೈಬಿಡೋದಿಲ್ಲ ಎಂಬ ನಂಬಿಕೆಯಿದೆ ಎಂಬರ್ಥದಲ್ಲಿ ಚಿತ್ರತಂಡದವರು ಮಾತನಾಡುವುದುಂಟು ಅಥವಾ ಸುದ್ದಿಗಳನ್ನು ಕಳಿಸುವುದುಂಟು. ಆದರೆ ಬೆವರು ಸುರಿಸುವುದರ ಜೊತೆಗೆ ಒಂದಷ್ಟು ವಿವೇಚನೆಯನ್ನೂ ಬಳಸಿದರೆ ಚಿತ್ರವನ್ನು ದಡ ಮುಟ್ಟಿಸಬಹುದಲ್ವಾ ಎಂಬುದರ ಕಡೆಗೆ ಹೆಚ್ಚಿನ ಜನ ಯೋಚಿಸುವುದಿಲ್ಲ. ಹೀಗಾಗಿ ಪಟ್ಟ ಶ್ರಮವೆಲ್ಲಾ ಗುಡ್ಡಕ್ಕೆ ಮಣ್ಣು ಹೊತ್ತಂತಾಗುತ್ತದೆ.
ಯು.ಎಚ್.ರಾಜಣ್ಣ ನಿರ್ದೇಶಿಸಿರುವ (ಅಥವಾ ಹಾಗೆಂದು ಪ್ರಚಲಿತದಲ್ಲಿರುವ!!) ಹೋಗಿ ಬಾ ಮಗಳೇ ಚಿತ್ರವನ್ನು ನೋಡಿದಾಗ ಏಕೋ ಏನೋ ಈ ಅಭಿಪ್ರಾಯ ಮನದಲ್ಲಿ ಮೂಡುತ್ತದೆ. ಚಿತ್ರೀಕರಣಕ್ಕಾಗಿ ಪಟ್ಟ ಶ್ರಮದಂತೆಯೇ ಚಿತ್ರಕ್ಕಾಗಿ ಆಯ್ದುಕೊಂಡ ಕಥೆ ಹಾಗೂ ನಿರೂಪಣೆಯಲ್ಲಿ ಕೊಂಚ ನಾವೀನ್ಯತೆ ತೋರಿದ್ದರೆ ಪ್ರಾಯಶಃ ಈ ಚಿತ್ರದ ದಡ ಸೇರುತ್ತಿತ್ತು ಎನಿಸುತ್ತದೆ.
ತನ್ನ ಪತಿಯನ್ನು ಕೊಂದವರ ವಿರುದ್ಧ ಹುಡುಗಿಯೋರ್ವಳು ಸೇಡು ತೀರಿಸಿಕೊಳ್ಳುವುದು ಚಿತ್ರದ ಕಥೆ. ಸಂತೋಷದಿಂದಿರಬೇಕಿದ್ದ ಯುವ ಜೋಡಿಗಳ ಮಧ್ಯೆ ವಿನಾಕಾರಣ ಮೂರನೆಯವರ ಕುರಿತಾದ ದ್ವೇಷ ಸೇರಿಕೊಂಡು ಕೊನೆಗೆ ಅವರ ಜೀವನ ಇಹಕ್ಕೂ ಇಲ್ಲ, ಪರಕ್ಕೂ ಇಲ್ಲ ಎಂಬಂತಾಗುತ್ತದೆ. ಕೊನೆಗೆ ಚಿತ್ರದಲ್ಲಿ ಸಾಕಷ್ಟು ಸೀರಿಯಲ್ ಕೊಲೆಗಳಾದ ಮೇಲೆ ಹಲವು ನಾಟಕೀಯ ಬದಲಾವಣೆಗಳಾಗಿ ಕಥಾನಾಯಕಿ ನದಿಯಲ್ಲಿ ಹಾರಿ ಪ್ರಾಣ ಬಿಡುತ್ತಾಳೆ. ಇದು ಒಟ್ಟಾರೆ ಸಿನಿಮಾದ ಎಳೆ.
ಚಿತ್ರಗಳಲ್ಲಿ ಕೊಲೆ-ಸೇಡಿನ ಕಥೆಯನ್ನು ಇಟ್ಟುಕೊಳ್ಳಬಾರದು ಎಂದೇನೂ ಕಾನೂನಿಲ್ಲ. ವಿ.ಸೋಮಶೇಖರ್‌ರಿಂದ ಮೊದಲ್ಗೊಂಡು ವಿಜಯ್‌ವರೆಗೆ, ತಿಪಟೂರು ರಘುರವರಿಂದ ಮೊದಲ್ಗೊಂಡು ಎ.ಟಿ.ರಘುವರೆಗೆ ಹಲವು ನಿರ್ದೇಶಕರು ಸೇಡಿನ ಕಥೆಯುಳ್ಳ ಚಿತ್ರಗಳನ್ನು ತೆಗೆದಿದ್ದಾರೆ. ಆದರೆ ಇಂಥ ಚಿತ್ರಗಳ ಕಟ್ಟುವಿಕೆಯಲ್ಲೂ ಒಂದಷ್ಟು ಶ್ರದ್ದೆಯಿರುತ್ತಿತ್ತು ಎಂಬುದನ್ನು ನಮ್ಮ ಕೆಲ ನಿರ್ದೇಶಕರು ಮರೆಯಬಾರದು. ಚಿತ್ರದಲ್ಲಿ ನಟಿ ದೀಪಾಚಾರಿಯವರ ಅಭಿನಯವನ್ನು ಬಿಟ್ಟರೆ ಉಳಿದೆಲ್ಲರೂ, ಉಳಿದ ವಿಭಾಗಗಳೆಲ್ಲವೂ ಎಡವಿರುವುದು ಸ್ಪಷ್ಟವಾಗಿ ತೋರುತ್ತದೆ. ಎಲ್.ಎನ್.ಶಾಸ್ತ್ತ್ರಿಯವರಿಗಿರುವ ಪ್ರತಿಭೆಯನ್ನು ಗಮನಿಸಿದರೆ, ಅವರು ಇನ್ನೂ ಉತ್ತಮವಾದ ರೀತಿಯಲ್ಲಿ ಸಂಗೀತ ನೀಡಬಹುದಿತ್ತು ಎನಿಸುತ್ತದೆ.
ಪತ್ರಕರ್ತರು ಚಿತ್ರಗಳಿಗೆ ಪ್ರೋತ್ಸಾಹದಾಯಕ ವಿಮರ್ಶೆ ಬರೆಯುವುದಿಲ್ಲ ಎಂಬುದೊಂದು ಆರೋಪ ಬಡಪಾಯಿ ಪತ್ರಕರ್ತರ ಮೇಲಿದೆ. ಆದರೆ ಎಷ್ಟೂಂತ ಪ್ರಮೋಟ್ ಮಾಡೋದು ಹೇಳಿ? ರೀಲು ಸುತ್ತುವುದಕ್ಕೆ ಮುಂಚೆ ಒಂದಷ್ಟು ಪೇಪರ್ ಖರ್ಚಾದರೂ ಪರವಾಗಿಲ್ಲ ಅಂತ ಒಂದು ಉತ್ತಮ ಚಿತ್ರಕಥೆಯನ್ನಾದರೂ ಸಿದ್ಧಮಾಡಿಟ್ಟುಕೊಂಡರೆ ಉತ್ತಮ ಚಿತ್ರ ರೂಪಿಸುವ ಅರ್ಧ ಯತ್ನವಾದರೂ ಸಂಪೂರ್ಣವಾದಂತೆ. ಆದರೆ ಅದೂ ಇಲ್ಲದಿದ್ದರೆ?
ಮತ್ತಿನ್ನೇನು? ಹೋಗಿ ಬಾ ಮಗಳೇ ಎಂದು ಚಿತ್ರದ ಬಾಕ್ಸ್ ಅನ್ನು ಚಿತ್ರಮಂದಿರದಿಂದ ಕಳಿಸಿಕೊಡುತ್ತಾರೆ, ಅಷ್ಟೇ!