ಸ್ನೇಹಿತರು ಚಿತ್ರವಿಮರ್ಶೆ: ಕಿತಾಪತಿಯ ನಗೆ ರಸಾಯನ
ಚಿತ್ರ: ಸ್ನೇಹಿತರುತಾರಾಗಣ: ದರ್ಶನ್, ನಿಖಿತಾ, ಮಾಸ್ಟರ್ ಸ್ನೇಹಿತ್, ವಿಜಯ ರಾಘವೇಂದ್ರ, ಸೃಜನ್ ಲೋಕೇಶ್, ತರುಣ್ ಚಂದ್ರ, ಪ್ರಣೀತಾ, ರವಿಶಂಕರ್ನಿರ್ದೇಶನ: ರಾಮನಾರಾಯಣ್ಸಂಗೀತ: ವಿ. ಹರಿಕೃಷ್ಣಒಂದೊಳ್ಳೆ ಕಥೆ ಇಲ್ಲದೇ ಇದ್ದರೂ, ನಿರೂಪಣೆಯಿಂದಲೇ ಪ್ರೇಕ್ಷಕರನ್ನು ಹೇಗೆ ನಗೆಗಡಲಲ್ಲಿ ತೇಲಿಸಬಹುದು ಎಂದು ನವ ನಿರ್ದೇಶಕ ರಾಮನಾರಾಯಣ್ ತೋರಿಸಿಕೊಟ್ಟಿದ್ದಾರೆ. ಮತ್ತೆ ಮತ್ತೆ ನೆನಪಿಸಿಕೊಂಡು ನಗುವ ದೃಶ್ಯಗಳು ಇಲ್ಲವಾದರೂ, ಒಂದೊಳ್ಳೆ ಹಾಸ್ಯ ಕನ್ನಡ ಚಿತ್ರ ಎಂದು ಗಟ್ಟಿಯಾಗಿ ಹೇಳಬಹುದು.ಅನಾಥ ಮಗು ಮತ್ತು ನಾಲ್ವರು ಉಂಡಾಡಿ ಗುಂಡರ ನಡುವಿನ ಕಥೆಯಿದು. ನಾಲ್ವರು ಸ್ನೇಹಿತರು ಏನೋ ಮಾಡಲು ಹೋಗಿ ಇನ್ನೇನೋ ಆಗುವುದು, ಅವರ ಕಿತಾಪತಿಯನ್ನೇ ಮಜಬೂತಾಗಿ ನಿರ್ದೇಶಕರು ಪ್ರಸ್ತುತಪಡಿಸಿದ್ದಾರೆ. ಆಕ್ಷನ್‌ಗೆ ದರ್ಶನ್, ಹಾಸ್ಯಕ್ಕೆ ಹತ್ತಾರು ಮಂದಿ, ಐಟಂಗೆ ನಿಖಿತಾ ಇರುವಾಗ ಬೇರೇನು ಕೊರತೆ?ಚಿತ್ರದ ತುಂಬೆಲ್ಲ ಹಾಸ್ಯ. ಅನಾಥ ಮಕ್ಕಳನ್ನು ಪ್ರೀತಿಸಬೇಕು ಎಂಬ ಸಂದೇಶ ರವಾನಿಸುವ ಚಿತ್ರದಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್ ಹಾಕಿದ ಗೆರೆಯನ್ನು ರಾಮನಾರಾಯಣ್ ದಾಟಿದಂತಿಲ್ಲ. ಹಾಗಾಗಿಯೇ ಒಂದಿಷ್ಟು ಹೆಚ್ಚೇ ತರ್ಲೆಗಳನ್ನು ತೋರಿಸಿದ್ದಾರೆ. ದರ್ಶನ್ ಇಲ್ಲಿ ಎಸಿಪಿಯಾಗಿ ಮಿಂಚಿದ್ದಾರೆ. ಅವರದ್ದು ಆರಂಭದಲ್ಲಿ ಬಂದು ಮಾಯವಾಗಿ ಕೊನೆಯಲ್ಲಿ ಪ್ರತ್ಯಕ್ಷವಾಗುವ ಪಾತ್ರ. ಆದರೆ ಅಷ್ಟರಲ್ಲೇ ಅಭಿಮಾನಿಗಳು ಶಿಳ್ಳೆ ಹೊಡೆಸುವಷ್ಟು ಸರಕು ಚಿತ್ರದಲ್ಲಿದೆ. ಎಸಿಪಿ ನೇಮಿಸುವ ಶಿಕ್ಷಕಿ ಪಾತ್ರದಲ್ಲಿ ಪ್ರಣೀತಾ ಗಮನ ಸೆಳೆಯುತ್ತಾರೆ.ಚಿತ್ರದ ನಿಜವಾದ ಬೆನ್ನೆಲುಬುಗಳು ವಿಜಯ ರಾಘವೇಂದ್ರ, ರವಿಶಂಕರ್, ಸೃಜನ್ ಲೋಕೇಶ್ ಮತ್ತು ತರುಣ್ ಚಂದ್ರ. ಅವರ ಪೀಕಲಾಟಗಳೇ ಪ್ರೇಕ್ಷಕರಿಗೆ ಮನರಂಜನೆ. ತರುಣ್ ಒಂಚೂರು ಸಪ್ಪೆಯಾಗಿ ಕಾಣಿಸುವುದು ಬಿಟ್ಟರೆ, ಉಳಿದೆಲ್ಲರದ್ದೂ ಪಾದರಸದ ಚಲನೆ. ಹಾಸ್ಯ ಚಿತ್ರಕ್ಕೆ ಪ್ರಮುಖವೆನಿಸುವ ಸಂಭಾಷಣೆ ಚಿತ್ರದ ಹೈಲೈಟ್.ಇನ್ನು ನಿಖಿತಾ ಹಾಡೊಂದರಲ್ಲಿ ಸೊಂಟ ಕುಲುಕಿಸಿ ಸಂಬಂಧವೇ ಇಲ್ಲದವರಂತೆ ಬಂದು ಹೋಗುತ್ತಾರೆ. ಅದಕ್ಕೆ ಸರಿಯೆಂಬಂತೆ ವಿ. ಹರಿಕೃಷ್ಣ ಸಂಗೀತದ ಹಾಡುಗಳು. ಎಂ.ಆರ್. ಸೀನು ಕ್ಯಾಮರಾವಂತೂ ಶ್ರೀಮಂತ ದೃಶ್ಯಗಳನ್ನು ತುಂಬಾ ಚೆನ್ನಾಗಿ ಸೆರೆ ಹಿಡಿದಿದೆ.ಉಳಿದಂತೆ ರಮೇಶ್ ಭಟ್, ಗಿರಿಜಾ ಲೋಕೇಶ್ ಗಮನ ಸೆಳೆಯುತ್ತಾರೆ. ಬುಲೆಟ್ ಪ್ರಕಾಶ್, ಸಾಧು ಕೋಕಿಲಾ, ಸಿಹಿಕಹಿ ಚಂದ್ರು ಹಳೆ ರಸಾಯನ ಬಡಿಸಿದರೂ ನಗದಿರಲು ಸಾಧ್ಯವಿಲ್ಲ. ಕೆಲವು ಲೋಪಗಳನ್ನು ಬಿಟ್ಟರೆ, ಥಿಯೇಟರಿಗೆ ಹೋದವರಿಗೆ ಒಂದೊಳ್ಳೆ ಹಾಸ್ಯ ರಸಾಯನ ಖಚಿತ.