Select Your Language

Notifications

webdunia
webdunia
webdunia
webdunia

ಸ್ಟಾರ್ ನಟರಿದ್ದರೂ 'ಶ್ರೀಮತಿ'ಯಲ್ಲಿ ಕಾಣುವುದು ನಿರ್ದೇಶನದ ದೋಷ

ಸ್ಟಾರ್ ನಟರಿದ್ದರೂ 'ಶ್ರೀಮತಿ'ಯಲ್ಲಿ ಕಾಣುವುದು ನಿರ್ದೇಶನದ ದೋಷ
EVENT
ಯಾವುದಾದರೊಂದು ರಿಮೇಕ್‌ ಚಿತ್ರವು ಸೆಟ್ಟೇರುವಾಗ, "ಮ‌ೂಲ ಚಿತ್ರದ ಎಳೆಯನ್ನಷ್ಟೇ ತೆಗೆದುಕೊಂಡು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ" ಎಂದು ಸದರಿ ಚಿತ್ರಕ್ಕೆ ಸಂಬಂಧಪಟ್ಟವರು ಮಾಧ್ಯಮದವರ ಮುಂದೆ ಹೇಳುವುದು ವಾಡಿಕೆ. ಆದರೆ ಅದು ಯಾವರೀತಿಯಲ್ಲೂ ತೆರೆಯ ಮೇಲೆ ಸಾಕಾರಗೊಳ್ಳದಿದ್ದಾಗ ಚಿತ್ರನಿರ್ಮಾಣದ ಉದ್ದೇಶವನ್ನೇ ಅನುಮಾನಿಸುವಂತಾಗುತ್ತದೆ. 'ಶ್ರೀಮತಿ' ಚಿತ್ರದಲ್ಲಿ ಆಗಿರುವುದೂ ಅದೇ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಗಂತ 'ಶ್ರೀಮತಿ' ಕಳಪೆ ಚಿತ್ರವಲ್ಲ. ಆದರೆ 'ಐತ್‌ರಾಜ್‌' ಎಂಬ ಮ‌ೂಲ ಹಿಂದಿ ಚಿತ್ರದ ಅನುಭೂತಿಯನ್ನು ಕಟ್ಟಿಕೊಡುವಲ್ಲಿ ಇದು ವಿಫಲವಾಗಿದೆ ಎಂದಷ್ಟೇ ಹೇಳಬಹುದೇನೋ. ಸುಖವಾಗಿ ಸಂಸಾರ ನಡೆಸುತ್ತಿರುವ ರಾಜಕುಮಾರ್ ಮತ್ತು ಪ್ರಿಯಾರ ಜೀವನದಲ್ಲಿ ಸೋನಿಯಾ ಎಂಬಾಕೆ ಬಿರುಗಾಳಿಯಂತೆ ಪ್ರವೇಶಿಸುತ್ತಾಳೆ. ಈಕೆ ಬೇರಾರೂ ಆಗಿರದೆ ರಾಜಕುಮಾರ್‌ನ ಹಿಂದಿನ ಪ್ರೇಯಸಿಯಾಗಿದ್ದು ಅವನಿಂದ ಒಂದು ಮಗುವಿಗೆ ತಾಯಿಯಾಗುವ ಹಾದಿಯಲ್ಲಿರುತ್ತಾಳೆ.

ಆದರೆ ಹಣ-ಅಂತಸ್ತು-ಖ್ಯಾತಿಯ ಹಿಂದೆ ಬೀಳುವ ಆಕೆ ತನ್ನ ಮಾಡೆಲಿಂಗ್‌ ವೃತ್ತಿಜೀವನಕ್ಕೆ ತೊಂದರೆಯಾಗುವುದೆಂಬ ಕಾರಣದಿಂದ ಮಗುವನ್ನು ತೆಗೆಸಲು ಬಯಸಿರುತ್ತಾಳೆ. ಇದಕ್ಕೆ ರಾಜಕುಮಾರ್ ಅಸಮ್ಮತಿಯನ್ನು ವ್ಯಕ್ತಪಡಿಸಿದಾಗ ಅವರಿಬ್ಬರ ನಡುವೆ ವಾಗ್ವಾದ ನಡೆದು ಬೇರ್ಪಡುವಂತಾಗಿರುತ್ತದೆ. ನಂತರ ಆತ ಪ್ರಿಯಾಳನ್ನು ಮದುವೆಯಾಗಿರುತ್ತಾನೆ.

ಈ ನಡುವೆ ಸೋನಿಯಾ ಮತ್ತು ರಾಜಕುಮಾರ್ ಮತ್ತೊಮ್ಮೆ ಭೇಟಿಯಾಗುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಹಣ-ಅಂತಸ್ತಿನ ಹಿಂದೆ ಬಿದ್ದಿದ್ದ ಸೋನಿಯಾ ಮದುವೆಯಾಗಿದ್ದ ಮುದುಕನೊಬ್ಬನ ಕಂಪನಿಯಲ್ಲೇ ತಾನು ಕೆಲಸ ಮಾಡುತ್ತಿರುವುದು ಎಂದು ರಾಜಕುಮಾರ್‌ಗೆ ಅರಿವಾಗುತ್ತದೆ.

ಹಣ ಮತ್ತು ಅಂತಸ್ತುಗಳು ತನಗೆ ದೊರಕಿದ್ದರೂ ತನಗೆ ದಕ್ಕಿರದ ದೈಹಿಕ ತೃಪ್ತಿಯನ್ನು ಈಡೇರಿಸಿಕೊಳ್ಳಲು ಸೋನಿಯಾ ರಾಜಕುಮಾರ್‌ನ ಬೆನ್ನು ಹತ್ತುತ್ತಾಳೆ. ಇದಕ್ಕೆ ಆತ ನಿರಾಕರಿಸಿದಾಗ ವಿಲಕ್ಷಣ ಸನ್ನಿವೇಶವೊಂದರಲ್ಲಿ ಆತ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ.

ಆತ ಸೋನಿಯಾಳ ಅತ್ಯಾಚಾರಕ್ಕೆ ಪ್ರಯತ್ನಿಸಿದ ಎಂಬ ಆರೋಪಕ್ಕೊಳಗಾಗುತ್ತಾನೆ ಮತ್ತು ಕೆಲಸಕ್ಕೆ ರಾಜೀನಾಮೆ ನೀಡಬೇಕು ಎಂಬ ನಿರ್ಬಂಧಕ್ಕೊಳಗಾಗುತ್ತಾನೆ. ವಕೀಲರ ಸಲಹೆಯ ಮೇರೆಗೆ ಇದಕ್ಕಾತ ನಿರಾಕರಿಸಿದಾಗ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತದೆ.

ಪರಿಸ್ಥಿತಿಯೇ ಆತನ ವಿರುದ್ಧವಾಗಿ ನಿಲ್ಲುತ್ತದೆ. ಆಗ ಅವನ ಶ್ರೀಮತಿಯಾದ ಪ್ರಿಯಾ ಗಂಡನ ಪರ ವಕಾಲತ್ತು ವಹಿಸಿ, ತನ್ನ ಬುದ್ಧಿವಂತಿಕೆಯಿಂದ ಹೇಗೆ ಪ್ರಕರಣವನ್ನು ನಿಭಾಯಿಸುತ್ತಾಳೆ ಎಂಬುದು ಕ್ಲೈಮ್ಯಾಕ್ಸ್‌ನಲ್ಲಿ ನಿರೂಪಿಸಲ್ಪಡುತ್ತದೆ. ಇದು ಕಥೆಯ ಎಳೆ.

ಕನ್ನಡಕ್ಕೆ ಇದು 'ಬೇರೆಯದೇ' ರೀತಿಯ ಕಥೆ. ಚಿತ್ರವನ್ನು ಉತ್ತಮವಾಗಿಸಲು ಸಾಕಷ್ಟು ಅವಕಾಶಗಳಿದ್ದರೂ ಕೈಯಾರೆ ಹಾಳುಮಾಡಿಕೊಂಡಿರುವುದು ಇದರ ಎದ್ದುಕಾಣುವ ದೋಷ. ಮೇಲಾಗಿ ಮೊದಲ ನಿರ್ದೇಶಕರು ಅರ್ಧಕ್ಕೇ ಬಿಟ್ಟು ಹೋಗಿದ್ದರಿಂದ ಅವರ ಸಹಾಯಕರಾದ ರವಿ ಇದನ್ನು ನಿರ್ದೇಶಿಸಿದ್ದಾರೆ.

ಇಬ್ಬರು ಕೈಯಾಡಿಸಿರುವುದರಿಂದ ಚಿತ್ರದಲ್ಲಿ ಒಂದು ಬಂಧವನ್ನು ಕಾಪಾಡಿಕೊಳ್ಳಲಾಗಿರುವುದಕ್ಕೆ ಇದೂ ಕಾರಣವಿರಬಹುದು. ಉಪೇಂದ್ರ ಮೀಸೆ ತೆಗೆದಿರುವುದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಮತ್ತು ಚಿತ್ರದ ಪ್ರಧಾನ ಕಲಾವಿದರ ಭಾವಾಭಿನಯವೂ ಹೇಳಿಕೊಳ್ಳುವಂತಿಲ್ಲ.

ಮ‌ೂಲ ಚಿತ್ರವಾದ 'ಐತ್‌ರಾಜ್‌' 2004ರಲ್ಲಿ ಬಂತು, ಕನ್ನಡದ 'ಶ್ರೀಮತಿ'ಯನ್ನು 2009ರಲ್ಲಿ ಪ್ರಾರಂಭಿಸಿ 2011ರಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಉಪೇಂದ್ರರ 'ಸೂಪರ್‌' ಚಿತ್ರದ ಯಶಸ್ಸು ಇನ್ನೂ ಕಣ್ಣಲ್ಲಿ ತುಂಬಿರುವಾಗಲೇ ಅದನ್ನು ಮುಂದುವರೆಸಬೇಕಾಗಿದ್ದ ಈ ಚಿತ್ರ ಅಂಥ ನಿರೀಕ್ಷೆಯನ್ನೇನೂ ಮ‌ೂಡಿಸುವುದಿಲ್ಲ ಎಂದು ವಿಷಾದದಿಂದಲೇ ಹೇಳಬೇಕಿದೆ.

"ಸ್ವಮೇಕ್‌ ಚಿತ್ರವನ್ನಂತೂ ಮಾಡೋಕ್ಕೆ ಬರಲ್ಲ, ಉತ್ತಮವಾದ ಮತ್ತು ಯಶಸ್ವಿಯಾದ ಚಿತ್ರಕಥೆಯಿದ್ದರೂ ಚೆನ್ನಾಗಿ ತೆಗೆಯೋಕೆ ಬರ್ಲಿಲ್ಲ ಅಂದರೆ ಏನು ಹೇಳೋದು, ಅಲ್ವಾ?' ಎಂದು ಓರ್ವ ಪ್ರೇಕ್ಷಕ ಮಹಾಶಯ ಚಿತ್ರ ಬಿಟ್ಟ ನಂತರ ಗೆಳೆಯನೊಂದಿಗೆ ಮಾತನಾಡಿಕೊಂಡು ಬರುತ್ತಿದ್ದ. ಇದನ್ನು ಸಂಬಂಧಪಟ್ಟವರು ಅರಿತುಕೊಳ್ಳುವುದು ಒಳ್ಳೆಯದು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada