ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ವಿಮರ್ಶೆ: ಮಾತೇ ಬಂಡವಾಳ!
ಚಿತ್ರ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿತಾರಾಗಣ: ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್, ಶ್ರೀನಗರ ಕಿಟ್ಟಿ, ರಚನಾನಿರ್ದೇಶನ: ಸುನಿಸಂಗೀತ: ಭರತ್ ಬಿ.ಜೆ.ಕನ್ನಡ ಚಿತ್ರರಂಗದಲ್ಲಿ ಮಾತಿಗೆ ಮಣೆ ಹಾಕಿದವರಲ್ಲಿ ಗುರುಪ್ರಸಾದ್, ಯೋಗರಾಜ್ ಭಟ್ ಮತ್ತು ಉಪೇಂದ್ರ ಮುಂಚೂಣಿಯಲ್ಲಿ ಇರುವವರು. ಅವರು ಹಾಕಿಕೊಟ್ಟ ದಾರಿಯಲ್ಲೇ ಸಾಗುವ ಲಕ್ಷಣಗಳನ್ನು ತೋರಿಸಿದ್ದಾರೆ ನಿರ್ದೇಶಕ ಸುನಿಲ್ ಆಲಿಯಾಸ್ ಸುನಿಲ್.ಪ್ರೇಕ್ಷಕರನ್ನು, ಅದರಲ್ಲೂ ಕಾಲೇಜು ಹೋಗುವ ಹಂತದವರನ್ನು ಸೆಳೆಯಲು ಏನು ಕೊಡಬೇಕು ಎನ್ನುವುದನ್ನು ಅರಿತಿರುವ ಸುನಿ, ಟ್ರೇಲರ್‌ಗಳಿಂದಲೇ ಭಾರೀ ಕ್ರೇಜ್ ಹುಟ್ಟು ಹಾಕಿದ್ದರು. ಬಹುಶಃ ಇತ್ತೀಚಿನ ದಿನಗಳಲ್ಲಿ ಹೊಸಬರ ಬೇರೆ ಯಾವುದೇ ಚಿತ್ರಕ್ಕೂ ಇಷ್ಟು ಪ್ರಚಾರ ಸಿಕ್ಕಿರುವ ಉದಾಹರಣೆಗಳಿಲ್ಲ. ಆ ಕಾರಣದಿಂದಲೇ ಬಹುತೇಕ ಎಲ್ಲ ಕಡೆ ಚಿತ್ರಮಂದಿರಗಳ ಮುಂದೆ ಹೌಸ್‌ಫುಲ್ ಬೋರ್ಡ್ ಬಿದ್ದಿತ್ತು. ಆ ಪರಿಯ ಮ್ಯಾಜಿಕ್ ಸೃಷ್ಟಿಸುವಲ್ಲಿ ಸುನಿ ಯಶಸ್ವಿಯಾಗಿದ್ದಾರೆ. ಆದರೆ ಸಾಕಷ್ಟು ನಿರೀಕ್ಷೆಯಿಂದ ಬರುವ ಪ್ರೇಕ್ಷಕರು ಚಿತ್ರಮಂದಿರದಿಂದ ಹೋಗುವಾಗಲೂ ಖುಷಿಯಿಂದಲೇ ಹೋಗುತ್ತಾರಾ? ಇದು ಪ್ರಶ್ನೆ.ಮಾತುಗಳಿಂದಲೇ ಗಮನ ಸೆಳೆದು ಸಿನಿಮಾ ಮಾತಿಗೇ ಸೀಮಿತವಾಗುತ್ತದೆ ಎನ್ನುವುದು ಪಕ್ಕಾ ಟೀಕೆ. ಅದೇ ಈ ಚಿತ್ರದ ಬೋನಸ್ ಕೂಡ ಹೌದು. ಸಿಂಪಲ್ ಮಾತುಗಳೇ ಇಲ್ಲಿ ಬಂಡವಾಳ. ಸಂಭಾಷಣೆಗೆ ಹೇಗೆ ಚುರುಕು ಮುಟ್ಟಿಸಬಹುದು ಎಂಬ ಗೋಜಿನಲ್ಲಿ ನಿರ್ದೇಶಕರು ಕಥೆಯನ್ನು ಮರೆತೇ ಬಿಟ್ಟಿದ್ದಾರೆ. ಅಥವಾ ಕಥೆಯ ಬಗ್ಗೆ ಶೀರ್ಷಿಕೆಯಲ್ಲೇ ಹೇಳಿದಂತೆ (ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ) ಬೇಡ ಎಂದು ನಿರ್ಧರಿಸಿದರೋ ಏನೋ.. ಅವರ ಮಿತಿಯಲ್ಲೇ ಪ್ರೇಕ್ಷಕರನ್ನು ರಂಜಿಸಲು ಯತ್ನಿಸಿದ್ದಾರೆ.ಬಿಗುತನವಿಲ್ಲದ ಕಥೆಯ ನಿರೂಪನೆ ನಿರ್ದೇಶಕರ ಕೈ ತಪ್ಪಿದೆ. ಆದರೆ ಇತರೆ ವಿಭಾಗಗಳಾದ ಛಾಯಾಗ್ರಹಣ ಮತ್ತು ಸಂಗೀತ ಹುಳುಕು ಮುಚ್ಚಲು ಸಹಕಾರ ನೀಡಿದೆ. ಉತ್ತಮ ಸಾಹಿತ್ಯವನ್ನು ತುಂಬಿಕೊಂಡು ಇಂಪಾದ ಹಾಡುಗಳು ಹೊರ ಬಂದಿವೆ. ಛಾಯಾಗ್ರಹಣ ಕಣ್ಣಿಗೆ ಹಬ್ಬವಾಗುತ್ತದೆ.ತಮ್ಮ ಕಿತ್ತು ಹೋದ ಲವ್ ಸ್ಟೋರಿ ಪರಸ್ಪರ ಹೇಳುತ್ತಲೇ ಇಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಆ ಪ್ರೀತಿಗೊಂದು ಚೌಕಟ್ಟು ಸಿಗುವ ಹಂತದಲ್ಲೇ ತಿರುವು ಸಿಗುತ್ತದೆ. ಈ ಕಥೆಯ ಮೂಲ ಹಾಲಿವುಡ್‌ನ '50 ಫಸ್ಟ್ ಡೇಟ್ಸ್'ನದ್ದು. ಅಲ್ಲಿಂದ ಸುನಿಲ್ ಎತ್ತಿಕೊಂಡಿರುವುದು ಸ್ಪಷ್ಟ. ಆದರೆ ಅವರ ಆಯ್ಕೆ ಮಾತಿನ ಮಾರ್ಗವಾಗಿದ್ದರಿಂದ, ಮಾತಿಗೆ ಸ್ಫೂರ್ತಿಯ ಆರೋಪ ಸಲ್ಲುವುದಿಲ್ಲ.ನಾಯಕ ರಕ್ಷಿತ್ ಶೆಟ್ಟಿ ಲವರ್ ಬಾಯ್ ಎನಿಸುತ್ತಾರೆ. ಎಲ್ಲೋ ನೋಡಿಕೊಂಡು ಅವರು ಮಾತನಾಡುವ ಶೈಲಿ ಇಷ್ಟವಾಗುತ್ತದೆ. ನಾಯಕಿ ಶ್ವೇತಾ ಶ್ರೀವಾತ್ಸವ್ ಡಬಲ್ ಮುದ ನೀಡುತ್ತಾರೆ. ಅವರ ರಂಗಭೂಮಿ ಹಿನ್ನೆಲೆ ಭಾವನೆಗಳಲ್ಲಿ ಸ್ಪಷ್ಟವಾಗುತ್ತದೆ. ಹೀಗೂ ಇರುತ್ತಾರಾ ಎಂಬಷ್ಟು ಅಚ್ಚರಿಗೆ ಕಾರಣರಾಗುತ್ತಾರೆ.ಡಬ್ಬಲ್ ಮೀನಿಂಗ್ ಸೇರಿದಂತೆ ಚಿತ್ರದಲ್ಲಿರುವುದು ಮಾತು ಮಾತು ಮಾತು ಬರೀ ಮಾತು. ಡೈಲಾಗುಗಳನ್ನೇ ನೆಚ್ಚಿಕೊಂಡು ಸಿನಿಮಾ ನೋಡುವ ವಿಭಾಗದವರು ತಪ್ಪದೆ ಚಿತ್ರಮಂದಿರಕ್ಕೆ ಹೋಗಬಹುದು.