Select Your Language

Notifications

webdunia
webdunia
webdunia
webdunia

ಸಂಕ್ರಾಂತಿ ವಿಮರ್ಶೆ; ಅಮವಾಸ್ಯೆಯ ಅನುಭವ

ಸಂಕ್ರಾಂತಿ ವಿಮರ್ಶೆ; ಅಮವಾಸ್ಯೆಯ ಅನುಭವ
ಚಿತ್ರ: ಸಂಕ್ರಾಂತಿ
ತಾರಾಗಣ: ಗುರುರಾಜ್ ಜಗ್ಗೇಶ್, ರೂಪಶ್ರೀ, ಶ್ರೀನಿವಾಸ ಮೂರ್ತಿ, ಭವ್ಯಾ
ನಿರ್ದೇಶನ: ಮುಸ್ಸಂಜೆ ಮಹೇಶ್
ಸಂಗೀತ: ಶ್ರೀಧರ್ ಸಂಭ್ರಮ್
SUJENDRA

'ಮುಸ್ಸಂಜೆ ಮಾತು'ವಿನಂತಹ ಸಿನಿಮಾ ನೀಡಿದ್ದ ಮಹೇಶ್ ನಿರ್ದೇಶಿಸಿದ ಚಿತ್ರ ಇದೇನಾ ಎಂಬಷ್ಟು ಕೆಟ್ಟದಾಗಿದೆ 'ಸಂಕ್ರಾಂತಿ'. ಯಾವ ನಿಟ್ಟಿನಲ್ಲೂ ನಿರ್ದೇಶಕರು ಅಪ್‌ಡೇಟ್ ಆಗಿಲ್ಲ ಮತ್ತು ನಿರುದ್ಯೋಗಿ ಎನಿಸಿಕೊಳ್ಳುವುದರ ಬದಲು ಚಿತ್ರವೊಂದನ್ನು ನಿರ್ದೇಶಿಸೋಣ ಎಂದು ಹೊರಟಂತಿದೆ.

ಮದುವೆಯ ಕಾರಣದಿಂದಲೇ ಬೇರೆಯಾದ ದೊಡ್ಡ ಕುಟುಂಬವೊಂದರ ಪುರಾತನ ಕಥೆಯಿದು. ಹೆಚ್ಚುವರಿಯಾಗಿ ಕಾಣಲು ಸಿಗುವುದು ನಾಯಕ ಸೂರ್ಯ ಪ್ರಕಾಶ್ (ಗುರುರಾಜ್) ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಅನ್ನೋದು ಮಾತ್ರ. ಅಲ್ಲಿದ್ದವನು ಭೂಮಿಕಾಳನ್ನು (ರೂಪಶ್ರೀ) ಪ್ರೀತಿಸುತ್ತಾನೆ. ಡುಯೆಟ್ ಹಾಡುತ್ತಾರೆ.

ಊರಿಗೆ ಬಂದ ನಾಯಕನಿಗೆ ತನ್ನ ಕುಟುಂಬದ ಹಿನ್ನೆಲೆ ತಿಳಿಯುತ್ತದೆ. ತನ್ನ ಜತೆಗಿದ್ದವರು ಯಾರು ಎಂಬುದು ಗೊತ್ತಾಗುತ್ತದೆ. ಗೆಳೆಯನಾಗಿದ್ದ ಚಂದ್ರ (ಸ್ಕಂದ ಅಶ್ವತ್ಥ್) ಅದೇ ಕುಟುಂಬಕ್ಕೆ ಸೇರಿರುತ್ತಾನೆ. ಇಬ್ಬರೂ ಸೇರಿ ಹೊರಟಾಗ ಎದುರಾಗುವ ಆಘಾತ, ಚಂದ್ರನೂ ಭೂಮಿಕಾಳನ್ನು ಪ್ರೀತಿಸುತ್ತಿದ್ದಾನೆ ಅನ್ನೋದು.

ಕೊನೆಗೆ ಸೂರ್ಯ ಮತ್ತು ಚಂದ್ರನ ಕುಟುಂಬ ಒಂದಾಗುತ್ತದೆಯೇ? ಸೂರ್ಯನಿಗೆ ಭೂಮಿಕಾ ಸಿಗುತ್ತಾಳೆಯೇ? ಇದು ಚಿತ್ರದ ಉಳಿದ ಕಥೆ.

ಎಲ್ಲೂ ಅನಿರೀಕ್ಷಿತತೆಗಳೇ ಇಲ್ಲ. ಸಾಕಷ್ಟು ಬಾರಿ ನೋಡಿದ ಕಥೆಯನ್ನೇ ಮುಸ್ಸಂಜೆ ಮಹೇಶ್ ಇನ್ನೊಮ್ಮೆ ಕೆಟ್ಟದಾಗಿ ಬಡಿಸಿದ್ದಾರೆ. ಒಂದರ್ಥದಲ್ಲಿ ಪ್ರೇಕ್ಷಕರಿಗೆ ಮಾನಸಿಕ ಚಿತ್ರಹಿಂಸೆಯನ್ನೇ ನಿರ್ದೇಶಕರು ನೀಡುತ್ತಾರೆ. ತೀರಾ ದುರ್ಬಲ ಚಿತ್ರಕತೆ, ಪಾತ್ರಗಳ ವಿವರಣೆಗೆ ಸಾಕಷ್ಟು ಸಮಯವನ್ನು ನಿರ್ದೇಶಕರು ವ್ಯಯಿಸಿರುವುದು ಬೇಸರ ಹುಟ್ಟಿಸುತ್ತದೆ.

ಇನ್ನು ನಾಯಕ ಗುರುರಾಜ್ ಬಗ್ಗೆ ಹೇಳುವುದಾದರೆ, ಜಗ್ಗೇಶ್ ಪುತ್ರ ಅನ್ನೋದನ್ನು ಬಿಟ್ಟರೆ ಅವರಲ್ಲಿ ಏನೂ ಇಲ್ಲ. ಈ ಹಿಂದಿನ 'ಗಿಲ್ಲಿ'ಗಿಂತ ಕೊಂಚ ಸುಧಾರಣೆಯಾಗಿರುವುದು ಕಂಡು ಬಂದರೂ, ನಟನೆಯಲ್ಲಿ ಅವರು ಜಸ್ಟ್ ಪಾಸ್ ಕೂಡ ಆಗಿಲ್ಲ. ಅವರಿಗಿಂತ ರೂಪಶ್ರೀ ಎಷ್ಟೋ ವಾಸಿ. ಎಲ್ಲರಿಗಿಂತ ಹೆಚ್ಚು ಗಮನ ಸೆಳೆಯೋದು ಸ್ಕಂದ ಅಶ್ವತ್ಥ್. ಅವರ ದನಿಯಿಂದ ಹಿಡಿದು ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಶ್ರೀಧರ್ ಸಂಭ್ರಮ್ ಸಂಗೀತದ ನೆನಪೇ ನೆನಪಾಗಲಿ ಎಂಬೊಂದು ಹಾಡು ಬಿಟ್ಟರೆ ಉಳಿದವು ಸಂಭ್ರಮ ಹುಟ್ಟಿಸುವುದಿಲ್ಲ.

Share this Story:

Follow Webdunia kannada