Select Your Language

Notifications

webdunia
webdunia
webdunia
webdunia

ಶೈಲೂ ಚಿತ್ರವಿಮರ್ಶೆ; ಒರಿಜಿನಲ್ ಪ್ರೀತಿಯ ರಿಮೇಕ್

ಶೈಲೂ ಚಿತ್ರವಿಮರ್ಶೆ; ಒರಿಜಿನಲ್ ಪ್ರೀತಿಯ ರಿಮೇಕ್
ಚಿತ್ರ: ಶೈಲೂ
ತಾರಾಗಣ: ಗಣೇಶ್, ಭಾಮಾ, ರಂಗಾಯಣ ರಘು, ಸುಚೇಂದ್ರ ಪ್ರಸಾದ್
ನಿರ್ದೇಶನ: ಎಸ್. ನಾರಾಯಣ್
ಸಂಗೀತ: ಜೆಸ್ಸಿ ಗಿಫ್ಟ್
SUJENDRA

ಕಲಾ ಸಾಮ್ರಾಟ್ ಅಂತ ಕರೆಸಿಕೊಳ್ಳುತ್ತಿರುವ ಎಸ್. ನಾರಾಯಣ್ ಸಾಮರ್ಥ್ಯವೇ ಅಂತಹದ್ದು. ಅವರು ರಿಮೇಕ್, ಅದರಲ್ಲೂ ಈ ರೀತಿ ಭಾವನಾತ್ಮಕವಾಗಿ ಹೃದಯವನ್ನು ಬಲವಾಗಿ ತಟ್ಟುವ ಚಿತ್ರಗಳಿದ್ದರೆ ಲಯ ತಪ್ಪದಂತೆ ನಿರ್ದೇಶಿಸುತ್ತಾರೆ. ರಿಮೇಕ್ ರಾಜ ಅನ್ನೋ ಬಿರುದು ಅವರಿಗೆ ಬಂದಿರುವುದು ಕೂಡ ಇದಕ್ಕೇ ಇರಬೇಕು!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅದೇನೇ ಇದ್ದರೂ, 'ಶೈಲೂ'ವನ್ನು ನೋಡಲೇಬೇಕಾದ ಚಿತ್ರಗಳ ಪಟ್ಟಿಗೆ ಸೇರಿಸಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಚಿತ್ರದ ಕಥೆ. ಆತ ಮಂಜ (ಗಣೇಶ್). ಆಕೆ ಶೈಲೂ (ಭಾಮಾ). ಶೈಲೂವನ್ನು ಬೆಳೆಸಿದ್ದು, ಓದಿಸಿದ್ದು ಎಲ್ಲವೂ ಮಂಜ. ಹೀಗಿದ್ದವನು ಶೈಲೂವನ್ನು ಅಪಾರವಾಗಿ ಪ್ರೀತಿಸುತ್ತಿರುತ್ತಾನೆ. ಶೈಲೂ ಕೂಡ ಅಷ್ಟೇ.

ಆದರೆ ಶೈಲೂ ತಾಯಿ ಮುನಿಯಮ್ಮ ಉಪಕಾರ ಮರೆಯುತ್ತಾಳೆ. ಮಂಜನಲ್ಲೇನಿದೆ ಅಂತ ಯಾವುದೋ ಸಾಹುಕಾರನಿಗೆ ಗಂಟು ಹಾಕಲು ಹೊರಡುತ್ತಾಳೆ. ಪಿತ್ತ ನೆತ್ತಿಗೇರಿಸಿಕೊಂಡ ಮಂಜನದ್ದು ರೌದ್ರಾವತಾರ. ಪರಿಣಾಮ ಜೈಲು ಸೇರುತ್ತಾನೆ. ಇಲ್ಲಿಂದ ಕಥೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ. ತಮಿಳಿನ 'ಮೈನಾ'ವನ್ನು ನೋಡದ ಪ್ರೇಕ್ಷಕರಾಗಿದ್ದರೆ, ಕಥೆ ನಿರೀಕ್ಷೆಗಳನ್ನು ಮೀರಿ ಪ್ರತ್ಯೇಕವಾಗಿ ನಿಲ್ಲುತ್ತದೆ.

ನಿಮ್ಮಲ್ಲೊಂದು ಆರ್ದ್ರ ಹೃದಯವಿದ್ದರೆ, ಅದರಲ್ಲಿ ಪ್ರೀತಿಯ ಹಪಹಪಿಯಿದ್ದರೆ, ನೀವು ಚಿತ್ರಮಂದಿರದಲ್ಲಿ ತೋಯ್ದು ಹೋಗುವುದು ಖಚಿತ. ಅಷ್ಟೊಂದು ತೀವ್ರವಾಗಿ ಪಾತ್ರಗಳು ತಟ್ಟುತ್ತವೆ. ಪ್ರತಿ ಫ್ರೇಮುಗಳು ನಮ್ಮ ದುರಾದೃಷ್ಟದ ಕಥೆಯನ್ನು ಹೇಳುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ನಾರಾಯಣ್ ಯಶಸ್ವಿಯಾಗಿದ್ದಾರೆ.

ನಾರಾಯಣ್ ಗೆದ್ದಿರುವುದು ನಿರ್ದೇಶನದಲ್ಲಿ ಎಂದು ಹೇಳುವಂತಿಲ್ಲ. ಯಾಕೆಂದರೆ, ಇದು ರಿಮೇಕ್ ಚಿತ್ರ. ಸಮರ್ಪಕವಾಗಿ ಝೆರಾಕ್ಸ್ ಮಾಡಿದ್ದಾರೆ ಅಂತ ಗಟ್ಟಿಯಾಗಿ ಹೇಳುತ್ತಲೇ, ಅವರು ಪಾತ್ರಗಳ ಆಯ್ಕೆಯಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇದಕ್ಕಿಂತ ಉತ್ತಮ ಪಾತ್ರ ಬೇರೆ ಯಾರೂ ಕೊಡಲು ಸಾಧ್ಯವೇ ಇಲ್ಲ ಅಂತ ಈ ಕ್ಷಣಕ್ಕೆ ಹೇಳಿ ಬಿಡಬಹುದು. ಅವರ ಅಭಿನಯದಲ್ಲಿ ಈ ಹಿಂದೆಂದೂ ಇರದ ತನ್ಮಯತೆಯಿದೆ. ಚೆಲುವಿನ ಚಿತ್ತಾರದ ಪ್ರೇಮಿಗಿಂತ ದರಿದ್ರನಾಗಿ ಅವರು ಪ್ರತಿಯೊಬ್ಬರನ್ನೂ ಗೆಲ್ಲುತ್ತಾರೆ. ಇವರಿಗೆ ನಾಯಕಿ ಭಾಮಾ ಪೈಪೋಟಿ. ಭಾವುಕ ಕ್ಷಣಗಳಲ್ಲಿ ಪ್ರೀತಿಯನ್ನು ಆರಾಧಿಸುತ್ತಾರೇನೋ ಎಂಬಂತೆ ಮೈ ಮರೆತಿದ್ದಾರೆ.

ಸುಚೇಂದ್ರ ಪ್ರಸಾದ್ ಮತ್ತು ರಂಗಾಯಣ ರಘು ಜೋಡಿಯದ್ದು ಕೂಡ ಸೂಪರ್ ಸೆಲೆಕ್ಷನ್. ಅವರಿಬ್ಬರೂ ವಿಲಕ್ಷಣವಾಗಿ ಗಮನ ಸೆಳೆಯುತ್ತಾರೆ. ಥಿಯೇಟರಿನಿಂದ ಹೊರಗೆ ಬಂದ ನಂತರ ನಾಯಕ-ನಾಯಕಿಯ ಜತೆ ಇವರೂ ಕಾಡುತ್ತಾರೆ.

ಜೆಸ್ಸಿ ಗಿಫ್ಟ್ ಸಂಗೀತದ ಹಾಡುಗಳಲ್ಲಿ ಮೂರು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿವೆ. 'ಶೈಲೂ ಓ ಶೈಲೂ.. ನನಗೇನಾಯ್ತು ಹೇಳು...' ಹಾಡಂತೂ ಮೋಹಕ. ಸುಂದರ ತಾಣಗಳು ಪ್ಲಸ್ ಪಾಯಿಂಟ್. ಅದನ್ನು ಸುಂದರವಾಗಿ ತೋರಿಸಲು ಹೋಗಿರುವ ಜಗದೀಶ್ ವಾಲಿ ಕಲಾಕೃತಿಯನ್ನೇ ಅರ್ಪಿಸಿದ್ದಾರೆ.

ಮೂಲ ಚಿತ್ರ ನೋಡದೇ ಇದ್ದರೆ, ಟಿಕೆಟಿನ ಹಣಕ್ಕೆ ಎರಡು ಪಟ್ಟು ಲಾಭ ಕೊಡುವಂತಹ ಚಿತ್ರವಿದು. ಮಿಸ್ ಮಾಡ್ಬೇಡಿ!

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada