ರವಿಪ್ರಕಾಶ್ ರೈಹಾಸ್ಯ ಚಿತ್ರ ಮಾಡುವುದರಲ್ಲಿ ತಾವು ಸಿದ್ಧಹಸ್ತರೆಂಬುದನ್ನು ನಟ, ನಿರ್ದೇಶಕ ರಮೇಶ್ ಅರವಿಂದ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ನಿರ್ದೇಶನದ `ವೆಂಕಟ ಇನ್ ಸಂಕಟ' ಚಿತ್ರ ಈ ವಾರ ಬಿಡುಗಡೆಯಾಗಿದೆ. ಚಿತ್ರ ನೋಡಿ ಹೊರಬಂದವರು ಚಿತ್ರವನ್ನು ಬಾಯ್ತುಂಬ ಹೊಗಳುತ್ತಿದ್ದಾರೆ. ಸಾಮಾನ್ಯವಾಗಿ ಹಾಸ್ಯ ಚಿತ್ರಗಳು ಬರುತ್ತಲೇ ಇರುತ್ತವೆ. ಆದರೆ ಅವುಗಳನ್ನು ನೋಡುತ್ತಿದ್ದಂತೆ ಸಣ್ಣದಾಗಿ ಟಾರ್ಚರ್ ನೀಡಿದ ಅನುಭವವಾಗುತ್ತದೆ. ಆದರೆ ರಮೇಶ್ ತಮ್ಮ ನಿರ್ದೇಶನದಲ್ಲಿ ಎಲ್ಲೂ ಎಡವಿಲ್ಲ. ಎಲ್ಲ ವಿಭಾಗದಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.ಇಲ್ಲಿ ರಮೇಶ್ ಪೊಲೀಸ್. ಶೌರ್ಯವಂತ. ಆದರೆ ಬುದ್ದಿ ಕಡಿಮೆ. ಎಡವಟ್ಟುಗಳನ್ನು ಮಾಡಿಕೊಂಡು ಪೊಲೀಸ್ ಇಲಾಖೆಯಿಂದ ಹಿಂಬಡ್ತಿ ಪಡೆಯುತ್ತಾರೆ. ಇದೇ ವೇಳೆ ವೈಯ್ಯಾರಿ ಶರ್ಮಿಳಾ ಮಾಂಡ್ರೆಯ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ. ನಂತರ
ಪೊಲೀಸ್ ಇಲಾಖೆಯ ಆದೇಶದ ಮೇರೆಗೆ ವಿದ್ಯಾರ್ಥಿ ಸೋಗಿನಲ್ಲಿ ಕಾಲೇಜಿಗೆ ಹೋಗಿ ಭಯೋತ್ಪಾದಕರನ್ನು ಕಂಡುಹಿಡಿಯುತ್ತಾರೆ. ಚಿತ್ರದಲ್ಲಿ ರಮೇಶ್ ಅಭಿನಯ ಅದ್ಬುತವಾಗಿ ಮೂಡಿಬಂದಿದೆ. ಈ ಹಿಂದೆ ತ್ಯಾಗರಾಜನಾಗಿ ಕಂಗೊಳಿಸುತ್ತಿದ್ದ ರಮೇಶ್ ಈ ಬಾರಿ ಪ್ರೇಕ್ಷಕರು ಹುಬ್ಬೇರಿಸುವ ರೀತಿಯಲ್ಲಿ ಫೈಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಇಲ್ಲಿ ಎಲ್ಲವನ್ನು ಮಿತವಾಗಿ ಬಳಸಿದ್ದಾರೆ. ಅನಾವಶ್ಯಕವಾಗಿ ಹಾಡುಗಳು, ದೃಶ್ಯಗಳು ಬರುವುದಿಲ್ಲ. ಚಿತ್ರದಲ್ಲಿ ಎಲ್ಲೂ ನೀರಸ ಡೈಲಾಗ್‌ಗಳಿಲ್ಲ. ಎರಡು ಹಾಡುಗಳಲ್ಲಿ ಮಳೆಯ ಹಾಡು ಇಷ್ಟವಾಗುತ್ತದೆ. ಚಿತ್ರದ ಇತರ ಕಲಾವಿದರಾದ ದತ್ತಣ್ಣ, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ದೇವದಾಸ್ ಕಾಪಿಕಾಡ್ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಅಜ್ಜಿ ಪಾತ್ರದಲ್ಲಿ ನಟಿಸಿದ ಹಿರಿಯ ನಟ ಉಮೇಶ್ ಅಭಿನಯ ಸೂಪರ್. ರಿಕ್ಕಿ ಕೇಜ್ ಅವರ ಸಂಗೀತ ಮಧುರವಾಗಿದೆ.
ನೊಂದ ಮನಸ್ಸು ಒಂದಿಷ್ಟು ರಿಲ್ಯಾಕ್ಸ್ ಬಯಸಿದರೆ, ಮನಸ್ಸು ತುಂಬ ನಕ್ಕು ಹಗುರಾಗಬೇಕಿದ್ದರೆ, `ವೆಂಕಟ ಇನ್ ಸಂಕಟ'ಕ್ಕೆ ಹೋಗಿ. ಕೊಟ್ಟ ದುಡ್ಡಿಗೆ ಖಂಡಿತ ಮೋಸವಾಗುವುದಿಲ್ಲ. ಅಂತು ವರ್ಷದ ಮೊದಲಿಗೆ ಒಂದು ಉತ್ತಮ ಹಾಸ್ಯ ಚಿತ್ರವನ್ನು ಕೊಟ್ಟ ರಮೇಶ್‌ಗೆ ಥ್ಯಾಂಕ್ಸ್.