ಬಹುದಿನಗಳ ನಂತರ ಕನ್ನಡದಲ್ಲಿ ಒಂದು ಉತ್ತಮ ಸಿನಿಮಾ ಬಂದಿದೆ. ಬರೀ ಪ್ರೀತಿ ಪ್ರೇಮದ ಸುತ್ತಲೇ ಗಿರಾಕಿ ಹೊಡೆಯುವ ಚಿತ್ರಗಳ ನಡುವೆ ವಿಶಿಷ್ಟವಾದ ನಿರೂಪಣೆ ಮನ ಮುಟ್ಟುವ ಸಂಭಾಷಣೆಯೊಂದಿಗೆ ಬಂದ ಸ್ಲಂ ಬಾಲ ಇಷ್ಟವಾಗುತ್ತದೆ. ಅದರಲ್ಲೂ ಒಬ್ಬ ಮಹಿಳಾ ನಿರ್ದೇಶಕಿ ಒಂದು ಅಂಡರ್‌ವಲ್ಡ್ ಕಥೆಯನ್ನು ಇಷ್ಟು ಅಚ್ಚುಕಟ್ಟಾಗಿ ಮಾಡಬಲ್ಲರೇ ಎಂಬುದಕ್ಕೆ ನಿರ್ದೇಶಕಿ ಸುಮನಾ ಕಿತ್ತೂರು ಸೂಕ್ತ ಉತ್ತರ ನೀಡಿದ್ದಾರೆ.ಪೊಲೀಸರು ಹಾಗೂ ರಾಜಕೀಯ ವ್ಯಕ್ತಿಗಳು ತಮ್ಮ ದಾಳವನ್ನಾಗಿ ವ್ಯಕ್ತಿಯೊಬ್ಬನನ್ನು ಬಳಸಿ ನಂತರ ಆತನನ್ನು ಯಾವ ರೀತಿ ಮುಗಿಸುತ್ತಾರೆ ಎಂಬುದನ್ನು ಚಿತ್ರದಲ್ಲಿ ಬಿಂಬಿಸಿದ್ದಾರೆ. ಇದು ಭೂಗತ ಲೋಕದ ಕಥೆಯಾಗಿದ್ದರೂ ಎಲ್ಲೂ ರಕ್ತಪಾತ ಹರಿಸಿಲ್ಲ, ವಿಜಯ್ ಫೈಟ್ ಮಾಡಿಲ್ಲ. ಏನಿದ್ದರೂ ಶೂಟ್. ಆದರೂ ಚಿತ್ರ ನೋಡುವಾಗ ಪ್ರೇಕ್ಷಕರಿಗೆ ತಣ್ಣನೆಯ ಅನುಭವ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಗ್ನಿ ಶ್ರೀಧರ್ ಆ ದಿನಗಳು ಚಿತ್ರವನ್ನು ನೆನಪಿಸುವಂತಹ ಮತ್ತೊಂದು ಚಿತ್ರ ನೀಡಿದ್ದಾರೆ.
ಸ್ಲಂ ಬಾಲನಾಗಿ ವಿಜಯ್ ಅಭಿನಯ ಮನೋಜ್ಞವಾಗಿ ಮೂಡಿ ಬಂದಿದೆ. ಒಬ್ಬ ಸಾಮಾನ್ಯ ಹುಡುಗ ಬಾಲಕೃಷ್ಣ ಬಾಲ ಅಲಿಯಾಸ್ ಸ್ಲಂ ಬಾಲನಾಗಿ ಯಾವ ರೀತಿ ಬದಲಾಗುತ್ತಾನೆ ಹಾಗೂ ಆತನ ಪ್ರಭಾವವನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಇಲ್ಲಿ ಚುನಾವಣೆಯೊಂದು ಮಹತ್ವದ ಪಾತ್ರ ವಹಿಸುತ್ತದೆ. ಅದಕ್ಕೂ ತನಗೂ ಸಂಬಂಧವಿಲ್ಲದಿದ್ದರೂ ಬಾಲ ಕಾರಣಾಂತರಗಳಿಂದ ಗಡಿಪಾರು ಶಿಕ್ಷೆಗೆ ಗುರಿಯಾಗುತ್ತಾನೆ. ಆ ಗಡಿಪಾರಿನಲ್ಲೂ ಆತ ಸುಖವಾಗಿರುವುದಿಲ್ಲ. ಆತನನ್ನು ರಾಜಕೀಯ ಮತ್ತೆ ವಾಪಸ್ಸು ಕರೆಯುತ್ತದೆ. ಮುಂಬೈಗೆ ಕಳುಹಿಸಿದ ಪೊಲೀಸರೇ ಆತನನ್ನು ವಾಪಸ್ ಕರೆಸಿ ಒಬ್ಬ ರಾಜಕೀಯ ವಿರೋಧಿಯನ್ನು ಕೊಲ್ಲಲು ಬಳಸಿಕೊಂಡು ಮತ್ತೆ ಅದೇ ಮುಂಬೈಗೆ ಕಳುಹಿಸುವುದು ಚಿತ್ರದ ಕಥೆ.
ಅಗ್ನಿ ಶ್ರೀಧರ್ ಹಾಗೂ ಸುಮನಾ ಕಿತ್ತೂರು ಚಿತ್ರದಲ್ಲಿ ನೈಜತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಚಿತ್ರದಲ್ಲಿ ರಕ್ತಪಾತವಿಲ್ಲದಿದ್ದರೂ ಪ್ರತಿಯೊಂದು ದೃಶ್ಯ ಕೂಡಾ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೋ ಎಂಬ ಭಾವನೆ ಬರುವಂತೆ ಚಿತ್ರಿಸಿದ್ದಾರೆ. ಚಿತ್ರದಲ್ಲಿ ಮಧ್ಯಪಾನ, ಸಿಗರೇಟುಗಳನ್ನು ತೋರಿಸಿರುವುದು ಸ್ವಲ್ಪ ಹೆಚ್ಚಾಗಿದೆ. ಬಾರೊಂದರ ಡ್ಯಾನ್ಸರ್ ಪಾತ್ರದಲ್ಲಿ ಶುಭಾ ಪೂಂಜಾ ಮಿಂಚಿದ್ದಾರೆ. ಪೊಲೀಸ್ ಪಾತ್ರಕ್ಕೆ ಶಶಿಕುಮಾರ್ ನ್ಯಾಯ ಒದಗಿಸಿದ್ದಾರೆ.
ಅಚ್ಯುತರಾವ್ ಅವರ ಶಂಕರನ ಪಾತ್ರವನ್ನು ಮೆಚ್ಚಬೇಕು. ಉಮಾಶ್ರೀ ಮತ್ತೊಮ್ಮೆ ತಮ್ಮ ಅಭಿನಯ ಏನೆಂಬುದನ್ನು ತೋರಿಸಿದ್ದಾರೆ. ಸಂಗೀತ ಪರ್ವಾಗಿಲ್ಲ. ಉಳಿದಂತೆ ಇದೊಂದು ಉತ್ತಮ ಚಿತ್ರ ಎನ್ನುವುದರಲ್ಲಿ ಸಂದೇಹವಿಲ್ಲ.