ಚಿತ್ರ: ವಿಲನ್
ತಾರಾಗಣ: ಆದಿತ್ಯ ಬಾಬು, ರಾಗಿಣಿ ದ್ವಿವೇದಿ, ರಂಗಾಯಣ ರಘು, ಅವಿನಾಶ್
ನಿರ್ದೇಶನ: ಎಂ.ಎಸ್. ರಮೇಶ್
ಸಂಗೀತ: ಗುರುಕಿರಣ್
ಆದಿತ್ಯ ಬಾಬುನಂತಹ ನಾಯಕನನ್ನಿಟ್ಟುಕೊಂಡು ಯಾರಾದರೂ ಎಂತಹ ಸಿನಿಮಾ ನಿರ್ಮಿಸಬಹುದು ಎನ್ನುವುದನ್ನು ಮರೆತು ನಿರ್ದೇಶಿಸಿದ ಚಿತ್ರ 'ವಿಲನ್'. ಒಬ್ಬ ನುರಿತ ಸಂಭಾಷಣೆಕಾರನಾಗಿದ್ದುಕೊಂಡು ಎಂ.ಎಸ್. ರಮೇಶ್ ಇದನ್ನು ನಿರ್ದೇಶಿಸಿದ್ದಾರೆ ಎಂದರೆ ನಂಬುವವರು ತುಂಬಾ ಕಡಿಮೆ.ಇಡೀ ಚಿತ್ರದಲ್ಲಿರುವುದು ಕಥೆಯೇ ಅಲ್ಲ. ಇಂತಹ ಹತ್ತಾರು ಚಿತ್ರಗಳು ಬಂದು ಹೋಗಿವೆ. ಅವೆಲ್ಲವನ್ನೂ ಹರವಿಕೊಂಡು ಬಿಡಿ ಬಿಡಿ ದೃಶ್ಯಗಳಿಗೆ ಕತ್ತರಿ ಹಾಕಿ ಒಂದು ಸಿನಿಮಾ ಮಾಡಲಾಗಿದೆ ಎಂಬಂತಿದೆ. ಅನಾಥ ಮಗುವೊಂದು ರೌಡಿಗೆ ಸಿಗುವುದು, ಆತನ ಗರಡಿಯಲ್ಲಿ ರೌಡಿಯಾಗುವುದು, ರಾಜಕಾರಣಿಗಳ ಸಂಗ, ಕೊನೆಗೆ ಯಾವುದೋ ಹಂತದಲ್ಲಿ ಆತನ ವಿರುದ್ಧವೇ ಅವರು ತಿರುಗಿ ಬೀಳುವುದು, ನಾಯಕಿಯ ಕಣ್ಣಲ್ಲಿ ಖಳನಾಗುವುದು, ಕೊನೆಗೆ ನಾಯಕಿಗೆ ಜ್ಞಾನೋದಯ -- ಹೀಗೆ ಆಕಳಿಸುವಂತಹ ಕಥೆ.ಇದಕ್ಕೊಂದು ಚುರುಕಾದ ನಿರೂಪನೆಯಾದರೂ ಇದ್ದಿದ್ದರೆ, ನೋಡಿಸಿಕೊಂಡಾದರೂ ಹೋಗುತ್ತಿತ್ತು. ಅದೂ ಇಲ್ಲ. ದೃಶ್ಯಗಳನ್ನು ಸಂಯೋಜಿಸಿರುವ ರೀತಿಯಂತೂ ಅಯ್ಯೋ ಎನ್ನುವಂತಿದೆ. ಹಾಡುಗಳು ಎಲ್ಲೆಲ್ಲೋ ಯಾವಾಗ ಎಂದರೆ ಆವಾಗ ದಿಕ್ಕುದೆಸೆಯಿಲ್ಲದೆ ಹುಟ್ಟಿಕೊಳ್ಳುತ್ತವೆ.ಆದರೆ ನಿರ್ದೇಶಕ ರಮೇಶ್ ಸಂಭಾಷಣೆ ಕೊಂಚ ರಿಲೀಫ್ ಕೊಡುತ್ತದೆ. ಆದರೂ ಆದಿತ್ಯನಂತಹ ನಾಯಕನಿಗೆ ಹೊಂದುವ ಪಂಚಿಂಗ್ ಡೈಲಾಗ್, ಪವರ್ ಎಲ್ಲೂ ಕಾಣಿಸುವುದಿಲ್ಲ. ಇಷ್ಟರ ಹೊರತಾಗಿಯೂ ಆದಿತ್ಯ ತನಗೆ ಸಿಕ್ಕ ಅವಕಾಶದಲ್ಲಿ ಮಿಂಚಿದ್ದಾರೆ. ಅವರು ಸಂಭಾಷಣೆ ಹೇಳುವ ಶೈಲಿ, ಮುಖದಲ್ಲಾಗುವ ಬದಲಾವಣೆ ಗಮನ ಸೆಳೆಯುತ್ತದೆ.ಆದರೆ ರೇಡಿಯೋ ಜಾಕಿಯೆಂದು ಹೇಳುವ ರಾಗಿಣಿಗೆ ನಟಿಸಲು ಅವಕಾಶವೇ ಕಡಿಮೆ. ಹಾಡುಗಳಲ್ಲಿ ಕುಣಿಯುವುದರಲ್ಲೇ ಅವರು ತನ್ನ ಪಾತ್ರವನ್ನು ಮುಗಿಸಿ ಬಿಡುತ್ತಾರೆ. ಅಂಗಾಂಗ ಪ್ರದರ್ಶನಕ್ಕಷ್ಟೇ ಸೀಮಿತವಾಗಿ ಬಿಡುತ್ತಾರೆ.ಎಲ್ಲರಿಗಿಂತ ಗಮನ ಸೆಳೆಯುವುದು ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಧರ್ಮ. ಹಿರಿಯ ಕಲಾವಿದೆ ಪುಷ್ಪಾ ಸ್ವಾಮಿಯವರನ್ನು ಮೆಚ್ಚಿಕೊಳ್ಳಲೇಬೇಕು. ರಂಗಾಯಣ ರಘು ತೊದಲುತ್ತಾರೆ.ದಾಸರಿ ಸೀನು ಹೊಸ ಕ್ಯಾಮರಾದಲ್ಲಿ ಹಳೇ ಸೀನುಗಳನ್ನು ತೋರಿಸಿದ್ದಾರೆ. ಗುರುಕಿರಣ್ ಸಂಗೀತದ ಬದಲು ಬೇರೇನೋ ಕುಟ್ಟಿ ತಟ್ಟಿ ಕಳುಹಿಸಿದ್ದಾರೆ.