ವರದನಾಯಕ ಚಿತ್ರವಿಮರ್ಶೆ: ಸುದೀಪ್ 'ವರ', ಚಿರು 'ನಾಯಕ'!
, ಶನಿವಾರ, 26 ಜನವರಿ 2013 (15:24 IST)
ಚಿತ್ರ: ವರದನಾಯಕತಾರಾಗಣ: ಸುದೀಪ್, ಸಮೀರಾ ರೆಡ್ಡಿ, ಚಿರಂಜೀವಿ ಸರ್ಜಾ, ನಿಕೇಶಾ ಪಟೇಲ್, ರವಿಶಂಕರ್, ಶೋಭರಾಜ್ನಿರ್ದೇಶನ: ಅಯ್ಯಪ್ಪ ಪಿ. ಶರ್ಮಾಸಂಗೀತ: ಅರ್ಜುನ್ ಜನ್ಯಪೋಸ್ಟರುಗಳಲ್ಲೂ ಕಿಚ್ಚ ಸುದೀಪ್ ಮುಖವೇ ಎದ್ದು ಕಾಣುತ್ತದೆ. ಮಾತು ಮಾತಿನಲ್ಲೂ ಸುದೀಪ್ ಚಿತ್ರ. ಆದರೆ ನಾಯಕ ಯಾರೆಂದರೆ ಉತ್ತರ, ಚಿರಂಜೀವಿ ಸರ್ಜಾ. ಯಾಕೆ ಹೀಗೆ? ಮೊದಲನೇ ಕಾರಣ, ಮೂಲ ಚಿತ್ರ. ಎರಡನೇ ಕಾರಣ, ಸುದೀಪ್ ನಾಮ ಬಲದಲ್ಲಾದರೂ ಚಿರಂಜೀವಿ ಗೆಲ್ಲಬೇಕು!'
ವರದನಾಯಕ' ತೆಲುಗಿನ 'ಲಕ್ಷ್ಯಂ' ರಿಮೇಕ್. ಆದರೆ ಮೂಲ ಚಿತ್ರಕ್ಕೆ ನಿರ್ದೇಶಕ ಅಯ್ಯಪ್ಪ ಪಿ. ಶರ್ಮಾ ನಿಷ್ಠರಾಗಿಲ್ಲ ಅನ್ನೋದು ಹೆಗ್ಗಳಿಕೆ. ಚಿತ್ರದ ಬಹುತೇಕ ಭಾಗದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಾರೆ. ಆ ಮೂಲಕ ಚಿರು ವೃತ್ತಿ ಜೀವನಕ್ಕೆ ಟಾನಿಕ್ ನೀಡಲು ಯತ್ನಿಸುತ್ತಾರೆ.ನಿಜ ಜೀವನದಲ್ಲೂ ಚಿರಂಜೀವಿ ಸರ್ಜಾನನ್ನು ಸಹೋದರ ಎಂದೇ ಕರೆಯುತ್ತಾರೆ ಸುದೀಪ್. ಸಿನಿಮಾದಲ್ಲೂ ಅದೇ ರೀತಿಯ ಪಾತ್ರ. ಅಣ್ಣ-ತಮ್ಮಂದಿರನ್ನೊಳಗೊಂಡ ಸಂಸಾರದ್ದು ಸುಖೀ ಜೀವನ. ಅಣ್ಣ ವರದನಾಯಕ (ಸುದೀಪ್) ವಿಶೇಷ ಪೊಲೀಸ್ ಅಧಿಕಾರಿ. ಆತನ ಪತ್ನಿ ಸಮೀರಾ ರೆಡ್ಡಿ. ತಮ್ಮ ಹರಿ(ಚಿರಂಜೀವಿ ಸರ್ಜಾ)ನಿಗೆ ಶಿರಿಶಾ ಎಂಬ ಪ್ರೇಯಸಿ ಇರುತ್ತಾಳೆ.ವರದನಾಯಕ ದುಷ್ಟ ಶಿಕ್ಷಕ. ಆತನ ಕಟ್ಟರ್ ವಿರೋಧಿ ಸೆಕ್ಷನ್ ಶಂಕರ್(ರವಿಶಂಕರ್). ಹೇಗಾದರೂ ಮಾಡಿ ವರದನಾಯಕನನ್ನು ಮುಗಿಸಲೇಬೇಕು ಎಂದು ಶಂಕರ್ ಯೋಜನೆ ರೂಪಿಸುತ್ತಾನೆ. ಆದರೆ ಸಾಧ್ಯವಾಗದೇ ಇದ್ದಾಗ, ಮೋಸದ ಆಟ ಆಡುತ್ತಾನೆ. ಅದರಲ್ಲಿ ಯಶಸ್ವಿಯಾಗುತ್ತಾನಾ? ಸಹೋದರ ಹರಿಯ ಜವಾಬ್ದಾರಿ ಏನು? ಈ ಸೇಡಿನ ಕಥೆ ಉಳಿದ ಭಾಗ.ಒಂದೇ ಮಾತಿನಲ್ಲಿ ಹೇಳುವುದಾದರೆ, 'ವರದನಾಯಕ' ಕಮರ್ಷಿಯಲ್ ಪ್ಯಾಕೇಜ್. ಸುದೀಪ್ ಅಭಿಮಾನಿಗಳನ್ನು ಸಂತೃಪ್ತಗೊಳಿಸಲು ಸಾಕಷ್ಟು ಬದಲಾವಣೆಗಳನ್ನು ಮಾಡಿ ಹೆಣೆಯಲಾದ ಕಥೆ. ಇಲ್ಲಿ ಆಕ್ಷನ್ ಪ್ರಧಾನ. ಸೆಂಟಿಮೆಂಟ್, ಒಂಚೂರು ಕಾಮಿಡಿ, ಒಳ್ಳೆಯ ಹಾಡುಗಳು ಸಾಥ್ ನೀಡುತ್ತವೆ.ಇನ್ನು ಇಡೀ ಚಿತ್ರ ಸುದೀಪ್ ಹೆಗಲಿನಲ್ಲೇ ಸಾಗುತ್ತದೆ ಅನ್ನೋದು ವಾಸ್ತವ. ಯಾರು ಏನೇ ಹೇಳಿದರೂ, ಚಿತ್ರದ ನಾಯಕ ಚಿರಂಜೀವಿ ಸರ್ಜಾ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಸುದೀಪ್ ಪಾತ್ರ ಇಲ್ಲವಾಗುತ್ತಿದ್ದಂತೆ ಪ್ರೇಕ್ಷಕರು ಸಪ್ಪಗಾಗುವ ಉದಾಹರಣೆ ಇದಕ್ಕೆ ಸಾಕಲ್ಲವೇ?ಚಿರಂಜೀವಿಗಾಗಿಯೇ ಸುದೀಪ್ ನಟಿಸಿರುವುದು ಸ್ಪಷ್ಟ. ಅವರು ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅದೇ ಎನರ್ಜಿ ಎಲ್ಲೆಡೆ ಕಂಡು ಬರುತ್ತದೆ. ಅದರಲ್ಲೂ ಸಾಹಸ ದೃಶ್ಯಗಳಲ್ಲಿ ಸಾಕಷ್ಟು ಶಿಳ್ಳೆ ಗಿಟ್ಟಿಸುತ್ತಾರೆ. ಆದರೆ ಚಿರಂಜೀವಿ ಸರ್ಜಾರದ್ದು ಬಲವಂತದ ನಟನೆ. ಹಿಂದಿಗಿಂತ ಸುಧಾರಣೆಯಾಗಿದೆ ಎನ್ನಬಹುದಾದರೂ, ಇನ್ನಷ್ಟು ನಡೆಯಬೇಕಿದೆ. ಅದರಲ್ಲೂ ಅವರ ಮಾತಿನ ಶೈಲಿ ಬದಲಾಗಬೇಕು.ಸಮೀರಾ ರೆಡ್ಡಿ ಮತ್ತು ನಿಕೇಶಾ ಪಟೇಲ್ ಬಣ್ಣದ ಚಿಟ್ಟೆಗಳಾಗಿ ಸೀಮಿತಗೊಳ್ಳುತ್ತಾರೆ. ಇಬ್ಬರಿಗೂ ಹೇಳಿಕೊಳ್ಳುವ ಪಾತ್ರವಿಲ್ಲ. ಹಳೆ ಜೋಕುಗಳಲ್ಲಿ ಶರಣ್ ಮತ್ತು ಬುಲೆಟ್ ಪ್ರಕಾಶ್ ಉರುಳು ಸೇವೆ ಮಾಡುತ್ತಾರೆ. ರವಿಶಂಕರ್ ಗಮನ ಸೆಳೆದರೂ, ಅದೇ ವಿಲನ್ ಲುಕ್‌ನಲ್ಲಿ ನೋಡಿದ ಪ್ರೇಕ್ಷಕರಿಗೆ ಹೊಸದೆನಿಸುವುದಿಲ್ಲ. ಶೋಭರಾಜ್, ಶರತ್ ಲೋಹಿತಾಶ್ವರಿಗೂ ಇಂತಹ ಪಾತ್ರ ಸಲೀಸು.ಇಷ್ಟಾದ ಮೇಲೂ ಚಿತ್ರ ಅಷ್ಟಾಗಿ ಬೋರ್ ಹೊಡೆಸುವುದಿಲ್ಲ. ಅಲ್ಲಲ್ಲಿ ಜಗ್ಗಾಡಿದ್ದು ನಿಜವಾದರೂ, ಕತ್ತರಿ ಪ್ರಯೋಗ ನಡೆಯಬೇಕಿತ್ತಾದರೂ, ಒಮ್ಮೆ ನೋಡುವುದಕ್ಕೆ ಸಮಸ್ಯೆಯೆನಿಸದು.