Select Your Language

Notifications

webdunia
webdunia
webdunia
webdunia

ಲೂಸ್ ಮಾದನ ಯಕ್ಷ; ಅದೇ ರೌಡಿಸಂ, ಸೇಡು- ಹೊಸತೇನಿಲ್ಲ

ಲೂಸ್ ಮಾದನ ಯಕ್ಷ; ಅದೇ ರೌಡಿಸಂ, ಸೇಡು- ಹೊಸತೇನಿಲ್ಲ
PR
ಚಿತ್ರ: ಯಕ್ಷ
ತಾರಾಗಣ: ಯೋಗೀಶ್, ನಾನಾ ಪಾಟೇಕರ್, ಅತುಲ್ ಕುಲಕರ್ಣಿ, ಕಿಶೋರ್, ರೂಬಿ
ನಿರ್ದೇಶನ: ರಮೇಶ್ ಭಾಗವತ್
ಸಂಗೀತ: ಅನೂಪ್ ಸಿಳೀನ್

ರೌಡಿಸಂ ಮತ್ತು ಸೇಡನ್ನು ಒಳಗೊಳ್ಳಬೇಕೆಂದು ಹಠಕ್ಕೆ ಬಿದ್ದಂತೆ ನಿರ್ಧರಿಸಿ ತೆಗೆದ ಸಿನಿಮಾವಿದು. ಚಿತ್ರದಲ್ಲಿ ನೋಡಿಸಿಕೊಂಡು ಹೋಗುವ ಅಂಶವಿದ್ದರೆ, ಅದು ನಾನಾ ಪಾಟೇಕರ್ ಮತ್ತು ಹಾಡುಗಳು ಮಾತ್ರ ಎಂದು ಆರಂಭದಲ್ಲೇ ಹೇಳಿ ಬಿಡಬಹುದು.

ಇದು ಗುರುವಾರ (ಅಕ್ಟೋಬರ್, 28) ತೆರೆ ಕಂಡಿರುವ ಲೂಸ್ ಮಾದ ಖ್ಯಾತಿಯ ಯೋಗೀಶ್ 'ಯಕ್ಷ' ಚಿತ್ರದ ಹಣೆಬರಹ. ನಾಯಕಿಗೆ ಕೆಲಸವೇ ಇಲ್ಲದ ಚಿತ್ರವಿದು.

ಯಕ್ಷ ರಾಜ್ ಪುಲಿಕೇಶಿ (ಯೋಗೀಸ್) ಕಾಲೇಜು ವಿದ್ಯಾರ್ಥಿ. ಆದರೆ ಆತನಿಗೆ ಪುಸ್ತಕಗಳಿಗಿಂತ ಭೂಗತ ಜಗತ್ತಿನ ಮೇಲೆಯೇ ಜಾಸ್ತಿ ಆಸಕ್ತಿ. ಅದೇ ನಿಟ್ಟಿನಲ್ಲಿ ಮಚ್ಚೇಂದ್ರನಾಥ್ ಪೂಂಜಾ (ಅತುಲ್ ಕುಲಕರ್ಣಿ) ಜತೆ ರೌಡಿಯಾಗಿ 'ಕೆಲಸ'ಕ್ಕೆ ಸೇರಿಕೊಳ್ಳುತ್ತಾನೆ.

ಪೂಂಜಾ ಗ್ಯಾಂಗಿಗೆ ಸೇರಿಕೊಂಡ ಯಕ್ಷ ಬಹುಬೇಗ ಆತನ ನಂಬುಗೆಯ ಬಂಟನಾಗಿ ಬಿಡುತ್ತಾನೆ. ನಿಜಕ್ಕೂ ಯಕ್ಷ ಭೂಗತ ಜಗತ್ತಿಗೆ ಹೋಗುವುದು ಪೂಂಜಾ ವಿರುದ್ಧ ಸೇಡು ತೀರಿಸಿಕೊಳ್ಳಲು ಎನ್ನುವುದು ನಂತರವಷ್ಟೇ ಬಹಿರಂಗವಾಗುತ್ತದೆ. ಅದರಲ್ಲಿ ಯಶಸ್ವಿಯೂ ಆಗುತ್ತಾನೆ.

ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವ ಯಕ್ಷನ ತಂದೆಯಾಗಿ ನಾನಾ ಪಾಟೇಕರ್ ಕಾಣಿಸಿಕೊಂಡಿದ್ದಾರೆ. ಸುಂದರ ಬೆಂಗಳೂರು ನಿರ್ಮಾಣಕ್ಕಾಗಿ ಪುಲಕೇಶಿ 50ಕ್ಕೂ ಹೆಚ್ಚು ಎನ್‌ಕೌಂಟರುಗಳನ್ನು ನಡೆಸಿರುತ್ತಾನೆ. ಆದರೂ ಪಿತೂರಿಯಿಂದ ನಿಷ್ಠೆಯ ಪೊಲೀಸ್ ಅಧಿಕಾರಿಯನ್ನು ಪೂಂಜಾ ಮುಗಿಸಿರುತ್ತಾನೆ. ಇದೇ ಕಾರಣದಿಂದ ಪುತ್ರ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ.

ಇದು ಚಿತ್ರದ ಕಥೆ. ಯಾವ ದೃಶ್ಯಗಳೂ ಪ್ರೇಕ್ಷಕರಿಗೆ ಅನಿರೀಕ್ಷಿತವೆನಿಸುವುದೇ ಇಲ್ಲ. ಮೊದಲರ್ಧವಂತೂ ಬೋರೋ ಬೋರು. ವಿರಾಮದ ನಂತರ ನಾನಾ ಪಾಟೇಕರ್ ಮತ್ತು ಕಿಶೋರ್ ತೆರೆಯನ್ನು ಆಕ್ರಮಿಸಿಕೊಳ್ಳುವ ಕಾರಣ ಪ್ರೇಕ್ಷಕರು ನಿದ್ದೆ ಹೋಗುವುದನ್ನು ತಪ್ಪಿಸಲಾಗಿದೆ.

ಯೋಗೀಶ್ ಪಾತ್ರದ ಬಗ್ಗೆ ಹೇಳುವುದಾದರೆ, ನರಪೇತಲನಂತಿರುವ ಅವರಿಗೆ ಹೇಳಿ ಮಾಡಿಸಿದ ಪಾತ್ರವೇ ಅಲ್ಲ. ಚೊಚ್ಚಲ ನಿರ್ದೇಶಕ ರಮೇಶ್ ಭಾಗವತ್ ಮೊದಲ ಚಿತ್ರದಲ್ಲಿ ಪಾತ್ರದ ಆಯ್ಕೆಯಲ್ಲಿ ಸೋತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ.

ಆಕ್ಷನ್ ಹೀರೋಗೆ ಸೂಟ್ ಆಗಬಹುದಾದ ಪಾತ್ರವೊಂದನ್ನು ಯೋಗಿಗೆ ನೀಡಿ, ಅವರು ಫೈಟ್ ಮಾಡುವ ರೀತಿಯೇ ಹಾಸ್ಯಾಸ್ಪದವನ್ನಾಗಿಸಲಾಗಿದೆ. ಜತೆಗೆ ಅದೇ ಹಳಸಲು ಕಥೆಯನ್ನು ಎರಡು ಗಂಟೆಗೂ ಹೆಚ್ಚು ಕಾಲ ಎಳೆದಿದ್ದಾರೆ.

ಹಿಂದಿ-ಕನ್ನಡ ಡೈಲಾಗುಗಳೊಂದಿಗೆ ನಾನಾ ಮಿಂಚಿದ್ದಾರೆ. ಅವರು ಪೊಲೀಸ್ ಅಧಿಕಾರಿಯಾಗಿ ನಟಿಸಿರುವುದು ಹೊಸತಲ್ಲವಾದ ಕಾರಣ ಅವರಿಗಿದು ಸವಾಲಿನ ಪಾತ್ರವಾಗಿಲ್ಲ. ಮುಂಬೈ ಬೆಡಗಿ ರೂಬಿ ವೇಸ್ಟ್ ಕ್ಯಾರೆಕ್ಟರ್. ತೆರೆಯ ಮೇಲೆ ಬಂದಷ್ಟೇ ವೇಗದಲ್ಲಿ ಹೋಗುವ ಪಾತ್ರ ಅವರದ್ದು.

ಪಾಟೇಕರ್ ಬಿಟ್ಟರೆ ಚಿತ್ರದಲ್ಲಿ ಎದ್ದು ಕಾಣುವ ಅಂಶ ಚಂದ್ರಶೇಖರ ಅವರ ಕ್ಯಾಮರಾ ಕಣ್ಣು. ಸಂಕಲನ ಕೂಡ ಅತ್ಯುತ್ತಮವಾಗಿದೆ. ಅನೂಪ್ ಸಿಳೀನ್ ಸಂಗೀತದಲ್ಲಿನ ಇಮ್ರಾನ್ ನೃತ್ಯ ನಿರ್ದೇಶನದ ಮೂರೂ ಹಾಡುಗಳು ಡಿಫರೆಂಟ್. ಅದನ್ನು ಚಿತ್ರೀಕರಿಸಿರುವ ರೀತಿಗೂ ಹ್ಯಾಟ್ಸಾಫ್.

ನೀವು ಯೋಗಿಯ ಅಪ್ಪಟ ಅಭಿಮಾನಿಯಾಗಿದ್ದರೆ ಚಿತ್ರ ಖಂಡಿತಾ ನೋಡಬಹುದು!

Share this Story:

Follow Webdunia kannada