ತಾರಾಗಣ: ಶಿವರಾಜ್‌ಕುಮಾರ್, ಉಪೇಂದ್ರ, ಜೆನ್ನಿಫರ್ ಕೊತ್ವಾಲ್, ಚಾರ್ಮಿ
ನಿರ್ದೇಶನ: ಸಾಯಿಪ್ರಕಾಶ್
ಶಿವರಾಜ್‌ಕುಮಾರ್ ಹಾಗೂ ಉಪೇಂದ್ರರಂಥ ಟಾಪ್ ನಟರು ಅಭಿನಯಿಸಿದ್ದಾರೆ ಎಂದರೆ ಪ್ರೇಕ್ಷಕರಿಗೆ ಹೆಚ್ಚಿನ ನೀರೀಕ್ಷೆ ಇರುತ್ತದೆ. ಆದರೆ ಸಡಿಲವಾದ ಕಥೆಯಿಂದಾಗಿ ಲವಕುಶ ಸಪ್ಪೆ ಎನಿಸುತ್ತದೆ.
ಇಬ್ಬರು ಪ್ರತಿಭಾನ್ವಿತ ನಟರ ಅಭಿನಯ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಎಡವಿದ್ದಾರೆ. ಆದರೂ ತಮಗೆ ನೀಡಿರುವ ಜವಾಬ್ದಾರಿಯನ್ನು ಉಭಯ ನಟರೂ ಸಮರ್ಪಕವಾಗಿ ನಿಭಾಯಿಸಿದ್ದಾರೆ.
ರಕ್ತಕಣ್ಣೀರಿನ ಡೈಲಾಗಿನಿಂದ ತಮ್ಮದೇ ಆದ ಮ್ಯಾನರಿಸಂನಿಂದ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉಪೇಂದ್ರ ಈ ಚಿತ್ರದಲ್ಲೂ ಅದೇ ತಂತ್ರ ಉಪಯೋಗಿಸಿದ್ದಾರೆ. ಜೋಗಿಯಲ್ಲಿ ಜೋಡಿಯಾಗಿ ನಟಿಸಿರುವ ಶಿವರಾಜಕುಮಾರ್ ಹಾಗೂ ಜೆನ್ನಿಫರ್ ಇಲ್ಲೂ ಹೆಚ್ಚೂ ಕಡಿಮೆ ಅದೇ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಚಿನ್ನಿ (ಶಿವರಾಜಕುಮಾರ್) ಹಾಗೂ ಚಕ್ರಿ (ಉಪೇಂದ್ರ) ಉತ್ತಮ ಗೆಳೆಯರು. ಅವರ ಗೆಳೆತನದ ನಡುವೆ ಬಿರುಕು ಕಾಣಿಸಿಕೊಳ್ಳುತ್ತದೆ. ತಾವು ಸ್ನೇಹಿತರಲ್ಲ. ಬಾಲ್ಯದಲ್ಲಿ ಪ್ರತ್ಯೇಕಗೊಂಡ ಸಹೋದರರು ಎಂದು ಇಬ್ಬರಿಗೂ ಗೊತ್ತಾಗುವ ವೇಳೆಗೆ ಅವರ ನಡುವೆ ಸಾಕಷ್ಟು ಶತ್ರುತ್ವ ಬೆಳೆದಿರುತ್ತದೆ. ಅವರಿಬ್ಬರೂ ಒಂದಾಗುವರೇ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಚಿತ್ರ ವೀಕ್ಷಿಸಲೇಬೇಕು.
ಈ ಚಿತ್ರದಲ್ಲಿರುವ ದೇಶಭಕ್ತಿ ಗೀತೆಯಿಂದ ಕತೆ ತಿರುವು ಪಡೆಯುತ್ತದೆ. ಆದರೆ ನಮ್ಮ ರಾಷ್ಟ್ತ್ರಗೀತೆಯ ಅಂತ್ಯದಲ್ಲಿ ಸಾರೇ ಜಹಾಂಸೇ ಅಚ್ಚಾ ಹಾಡಿನ ಟ್ಯೂನ್ ಹೇಗೆ ಸೇರಿಕೊಂಡಿದೆ ಎಂದು ಪ್ರೇಕ್ಷಕರಿಗೆ ವಿಸ್ಮಯ ಉಂಟುಮಾಡುತ್ತದೆ. ಇಬ್ಬರು ಸ್ಟಾರ್‌ಗಳ ಅಭಿಮಾನಿಗಳಿಗೆ ಈ ಚಿತ್ರ ನಿರಾಸೆ ಉಂಟುಮಾಡುವುದಿಲ್ಲ.