Select Your Language

Notifications

webdunia
webdunia
webdunia
webdunia

ಲಕ್ಷ್ಮಿ ಚಿತ್ರವಿಮರ್ಶೆ: ಇದು ಶಿವಣ್ಣನ ಸೂಪರ್ ಪ್ಯಾಕ್

ಲಕ್ಷ್ಮಿ ಚಿತ್ರವಿಮರ್ಶೆ: ಇದು ಶಿವಣ್ಣನ ಸೂಪರ್ ಪ್ಯಾಕ್
PR
ಚಿತ್ರ: ಲಕ್ಷ್ಮಿ
ತಾರಾಗಣ: ಶಿವರಾಜ್ ಕುಮಾರ್, ಪ್ರಿಯಾಮಣಿ, ಅವಿನಾಶ್, ರವಿಕಾಳೆ, ಆಶಿಶ್ ವಿದ್ಯಾರ್ಥಿ
ನಿರ್ದೇಶನ: ರಾಘವ ಲೋಕಿ
ಸಂಗೀತ: ಗುರುಕಿರಣ್

ಶಿವರಾಜ್ ಕುಮಾರ್ ಅವರ ಇತ್ತೀಚಿನ ಸಿನಿಮಾಗಳಿಂದ ನಿರಾಸೆಯಾದ ಪ್ರೇಕ್ಷಕರಿಗೆ ಈ ಚಿತ್ರ ಭೂರೀ ಭೋಜನ. ಕೆಲವು ಪದಾರ್ಥಗಳಿಗೆ ಉಪ್ಪು, ಖಾರ ಹೆಚ್ಚು ಕಡಿಮೆಯಾಗಿದ್ದು ಬಿಟ್ಟರೆ, ಊಟ ಬೇಡವೆಂದು ಎದ್ದು ಹೋಗುವ ಪ್ರಶ್ನೆಯೇ ಇಲ್ಲ ಎಂಬಷ್ಟು ಸಮಾಧಾನಕರ ಅಡುಗೆ ಮಾಡಿದ್ದಾರೆ ನಿರ್ದೇಶಕ ರಾಘವ ಲೋಕಿ.

ಈ ಬಾರಿ ಅವರು ಆಯ್ದುಕೊಂಡಿರುವುದು ದೇಶಭಕ್ತಿಯ ಕಥಾವಸ್ತು. ಶಿವಣ್ಣನ ಕೈಗೆ ಲಾಂಗು-ಮಚ್ಚು ಕೊಡುವ ಬದಲು ಭಯೋತ್ಪಾದನೆ ಮತ್ತು ಗಣಿ ಮಾಫಿಯಾ ಮಟ್ಟ ಹಾಕುವ ಜವಾಬ್ದಾರಿ ವಹಿಸಿದ್ದಾರೆ. ಖಡಕ್ ಸಿಬಿಐ ಅಧಿಕಾರಿಯಾಗಿ ಶಿವಣ್ಣ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಆದರೆ ಎಲ್ಲೂ ಹೀರೋಯಿಸಂ ವೈಭವೀಕರಣವಿಲ್ಲ ಎನ್ನುವುದು ಕನ್ನಡ ಪ್ರೇಕ್ಷಕರಾಗಿಯಷ್ಟೇ ಚಿತ್ರಮಂದಿರಕ್ಕೆ ಹೋದವರಿಗೆ ಸಮಾಧಾನ.

ಚಿತ್ರದ ಕಥೆಯೂ ಮಾಮೂಲಿಯಲ್ಲ. ಹಾಗೆ ನೋಡಿದರೆ ಇಡೀ ಚಿತ್ರದ ಜೀವಾಳವೇ ಕಥೆ ಮತ್ತು ಚಿತ್ರಕಥೆ. ಮುಂದಿನ ದೃಶ್ಯ ಯಾವುದು ಇರಬಹುದು ಎಂಬುದನ್ನು ಊಹಿಸುವುದು ಕಷ್ಟ ಎಂಬಂತೆ ಚಿತ್ರಕಥೆ ಕಟ್ಟಲಾಗಿದೆ. ವೇಗದ ನಿರೂಪನೆ ಚಿತ್ರದ ಓಟಕ್ಕೆ ಪುಷ್ಟಿ ನೀಡುತ್ತದೆ.

ಆದರೆ ಭಯೋತ್ಪಾದನೆ ಮತ್ತು ಮೈನಿಂಗ್ ಮಾಫಿಯಾ ಎರಡನ್ನೂ ನಾಯಕನ ಹೆಗಲಿಗೆ ಹಾಕಿರುವ ನಿರ್ದೇಶಕರು ಗೊಂದಲಕ್ಕೆ ಬಿದ್ದಿದ್ದಾರೆ. ಎರಡನ್ನೂ ಕಥೆಯಲ್ಲಿ ಸೇರಿಸುವ ಯೋಚನೆ ಭಿನ್ನವಾದರೂ, ಅದನ್ನು ನಿಭಾಯಿಸುವಲ್ಲಿ ಎಡವಿದ್ದಾರೆ. ಹಾಗಾಗಿ ಕೆಲವೆಡೆ ಹದ ತಪ್ಪಿರುವುದು ಅನುಭವಕ್ಕೆ ಬರುತ್ತದೆ.

ಇನ್ನು ಚಿತ್ರ ಇಡಿಯಾಗಿ ಯಾರಿಗೂ ಪಥ್ಯವಾಗದೇ ಇರಲು ಸಾಧ್ಯವಿಲ್ಲ. ನಿರ್ಮಾಣಕ್ಕೆ ಎರಡು ವರ್ಷ ತೆಗೆದುಕೊಂಡಿರುವುದು ಸಾರ್ಥಕ. ಹಾಗಾಗಿ ಲೇಟಾಗಿ ಬಂದರೂ ತಂತ್ರಜ್ಞಾನದ ವಿಚಾರದಲ್ಲಿ ಲೇಟೆಸ್ಟ್ ಆಗಿ ಚಿತ್ರ ಮೂಡಿ ಬಂದಿದೆ.

ಶಿವಣ್ಣನ ಮೇಕಪ್, ಡ್ರೆಸ್‌ಗಿಂತಲೂ ಅವರ ನಟನೆ ವಯಸ್ಸನ್ನು ಮರೆ ಮಾಚಿಸುತ್ತದೆ. ಹಾಡುಗಳಲ್ಲಂತೂ ಅವರು 25ರ ಹುಡುಗನಾಗುತ್ತಾರೆ. ಅವರಿಗೆ ತಕ್ಕಂತೆ ಪ್ರಿಯಾಮಣಿ ಎರಡು ಭಿನ್ನ ಶೇಡ್‌ಗಳಿರುವ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವಿನಾಶ್, ಆಶಿಶ್ ವಿದ್ಯಾರ್ಥಿ, ರವಿಕಾಳೆ ಗಮನ ಸೆಳೆಯುತ್ತಾರೆ. ಆದರೆ ರಂಗಾಯಣ ರಘು ವ್ಯರ್ಥ.

ಸಂಕಲನ ಚೆನ್ನಾಗಿದ್ದರೂ, ಕೆಲವೆಡೆ ಕತ್ತರಿ ಪ್ರಯೋಗದ ಅಗತ್ಯವಿತ್ತು. ಗ್ರಾಫಿಕ್ಸ್ ಕೆಲವೆಡೆ ಸಹಜತೆಯಿಂದ ಗಮನ ಸೆಳೆಯುತ್ತದೆ, ಇನ್ನು ಕೆಲವೆಡೆ ಅಸಹಜತೆಯಿಂದ ನಗು ತರಿಸುತ್ತದೆ. ಗುರುಕಿರಣ್ ಸಂಗೀತದ ಹಾಡುಗಳು ಎಲ್ಲೋ ಕೇಳಿದಂತೆ ಚೆನ್ನಾಗಿವೆ.

ಶಿವಣ್ಣನ ಲಾಂಗು-ಮಚ್ಚು ಚಿತ್ರಗಳನ್ನೇ ನೋಡಿ ಭ್ರಮನಿರಸನಗೊಂಡವರು ಸಸ್ಪೆನ್ಸ್, ಸಾಹಸ, ದೇಶಪ್ರೇಮದ ಚಿತ್ರಕ್ಕಾಗಿ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.

Share this Story:

Follow Webdunia kannada