ರಾಂಬೋ ಚಿತ್ರವಿಮರ್ಶೆ: ಶರಣ್ ನಗುವಿನ ಮೀಸಲಾತಿ
ಚಿತ್ರ: ರಾಂಬೋತಾರಾಗಣ: ಶರಣ್, ತಬಲ ನಾಣಿ, ಮಾಧುರಿ ಇಟಗಿ, ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲನಿರ್ದೇಶನ: ಎಂ.ಎಸ್. ಶ್ರೀನಾಥ್ಸಂಗೀತ: ಅರ್ಜುನ್ ಜನ್ಯ
ಹಾಸ್ಯ ಚಿತ್ರಗಳನ್ನು ಮಾಡಲು ಹೋಗಿ ಹಾಸ್ಯಾಸ್ಪದರಾಗುತ್ತಿರುವ ನಿರ್ದೇಶಕರ ನಡುವೆ ಎಂ.ಎಸ್. ಶ್ರೀನಾಥ್ ಗುರುತಿಸಿಕೊಂಡಿಲ್ಲ. ಅವರದ್ದು ವಿಭಿನ್ನ ದಾರಿ. ಹೊಸ ಐಡಿಯಾಗಳನ್ನು 'ರಾಂಬೋ'ದಲ್ಲಿ ಅಳವಡಿಸಿದ್ದಾರೆ. ಸರಿಯೆಂಬಂತೆ ಶರಣ್ ಮತ್ತು ತಬಲಾ ನಾಣಿ. ನಗಲು ಇನ್ನೇನು ಬೇಕು? ನಾಯಕನಾಗಿ ಶರಣ್‌ಗಿದು ಮೊದಲ ಪ್ರಯತ್ನವಲ್ಲ. ಆದರೆ ಅವರು ಹೊಡೆದಿರುವ ಕಲ್ಲು ಈ ಬಾರಿ ಬೀಳಬೇಕಾದ ಜಾಗಕ್ಕೆ ಸರಿಯಾಗಿಯೇ ಬಿದ್ದಿದೆ. ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸಾಕಷ್ಟು ಸರಕುಗಳಿವೆ. ಲಾಜಿಕ್ಕನ್ನು ಪೂರ್ತಿ ಮರೆಯದೆ ನಗುತ್ತಾ ನಗುತ್ತಾ ಥ್ರಿಲ್ ಕೊಡುವ ಕಥೆ ಹಂತ ಹಂತವಾಗಿ ಮುದ ನೀಡುತ್ತಾ ಹೋಗುತ್ತದೆ.ಕೃಷ್ಣಮೂರ್ತಿ ಆಲಿಯಾಸ್ ಕಿಟ್ಟಿ (ಶರಣ್) ಕಾರು ಬ್ರೋಕರ್. ಆತನ ಸೋದರ ಮಾವ ಬೆಲ್ಟ್ ಕುಮಾರ್ (ತಬಲಾ ನಾಣಿ) ಬೆಂಬಿಡದ ಭೂತ. ಇಬ್ಬರು ಸೇರಿ ಡೀಲ್ ಮಾಡಿದರೆಂದರೆ ಸಕ್ಸಸ್ ಎಂದೇ ಅರ್ಥ. ಪಕ್ಕಾ ಪ್ಲಾನ್ ಮಾಡಿ, ತುಂಬಾ ಕಷ್ಟಪಟ್ಟು ಮಾಡುವ ಮೋಸ ಅವರದ್ದು. ಈ ತಂತ್ರದಲ್ಲಿ ಹಂದಿಯೇ ಹೀರೋ. ತುಂಬಾ ಮಜಾ ಕೊಡುವ ಸನ್ನಿವೇಶಗಳವು.ಈ ನಡುವೆ ಕಿಟ್ಟಿಯ ತಾಯಿಗೆ (ಉಮಾಶ್ರೀ) ಮಗನಿಗೊಂದು ಮದುವೆ ಮಾಡುವ ಹಠ. ಆದರೆ ಪ್ರತಿ ಬಾರಿಯೂ ಕಿಟ್ಟಿಯ ಕಿಲಾಡಿತನ ಸಮಸ್ಯೆಯನ್ನು ಬುಡಕ್ಕೆ ತಂದಿಡುತ್ತದೆ. ಆದರೆ ರೇವತಿ (ಮಾಧುರಿ ಇಟಗಿ) ಬಂದ ನಂತರ ಎಲ್ಲವೂ ಬದಲಾಗುತ್ತದೆ. ಕಾರಲ್ಲಿ ಸಿಗುವ ಹೆಣ, ಒಂದು ಪೆನ್ ಡ್ರೈವ್ ಕಿಟ್ಟಿಯ ದಾರಿ ತಪ್ಪಿಸಿ, ದಾರಿ ತೋರಿಸುತ್ತದೆ.ಚಿತ್ರಮಂದಿರದಲ್ಲಿದ್ದ ಅಷ್ಟೂ ಹೊತ್ತು ನಗಿಸುವುದೆಂದರೆ ಸುಲಭದ ಮಾತಲ್ಲ. ಅದರಲ್ಲೂ ಮನರಂಜನೆಯೇ ಉದ್ದೇಶ ಎನ್ನುವುದು ಕಣ್ಣ ಮುಂದೆ ಸ್ಪಷ್ಟವಾಗಿರುವಾಗ, ಶರಣ್ ನಾಯಕರೆಂಬ ಕಲ್ಪನೆಯಲ್ಲೇ ಚಿತ್ರ ನೋಡುತ್ತಾ ಹೋದಾಗ ಹೆಚ್ಚು ಯೋಚಿಸಲು ಸಮಯವೇ ಇರುವುದಿಲ್ಲ. ಚಿತ್ರಮಂದಿರದ ತುಂಬಾ ನಗುವಿನ ಕಲರವ. ಇಡೀ ಚಿತ್ರಕ್ಕೆ ಚಿತ್ರಕತೆ, ನಿರೂಪನೆ, ಸಂಭಾಷಣೆಯೇ ಜೀವಾಳ. ಹಲವು ಕಡೆ ನಿರೀಕ್ಷೆಗಳನ್ನು ಸುಳ್ಳು ಮಾಡುತ್ತಾ ಕಥೆ ಸಾಗುವುದು, ಹಾಸ್ಯವೇ ಪ್ರಧಾನವಾಗಿರುವ ಕಥೆಯಲ್ಲಿ ಗಂಭೀರ ವಿಚಾರಗಳನ್ನು ಹಾಸ್ಯಾಸ್ಪದವೆನಿಸದಂತೆ ಪ್ರಸ್ತುತಪಡಿಸಿರುವುದು ನಿರ್ದೇಶಕರ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಕೆಲವು ಸನ್ನಿವೇಶಗಳನ್ನು ಹಿಡಿದು ಜಗ್ಗಿರುವುದು ಬೋರ್ ಹೊಡೆಸುತ್ತದೆ. ಸರಿಯೆಂಬಂತೆ ಕ್ಲೈಮ್ಯಾಕ್ಸ್. ಇಂತಹ ಲೋಪಗಳನ್ನು ಸರಿಪಡಿಸುತ್ತಿದ್ದರೆ ಪ್ರಥಮಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಚಿತ್ರ ಆರಂಭವಾಗುವಾಗ ಇದ್ದಂತೆ ಇಡೀ ಚಿತ್ರ ತುಂಬಾ ಚೆನ್ನಾಗಿರುತ್ತಿತ್ತು.ಶರಣ್ ತನ್ನ 99 ಚಿತ್ರಗಳಲ್ಲಿ ಎಲ್ಲೂ ತನಗೆ ಸಿಕ್ಕಿರುವ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲೂ ಅದೇ ಆಗಿದೆ. ಎಂದಿನ ಶರಣ್ ಇಲ್ಲೂ ಇದ್ದಾರೆ. ನಾಯಕನಾದರೂ ನಗಿಸುವ ಕಾಯಕ ಬಿಟ್ಟಿಲ್ಲ. ತಬಲಾ ನಾಣಿ ಪಾತ್ರವನ್ನು ಒಂಚೂರು ವಿಸ್ತರಿಸುತ್ತಿದ್ದರೆ ಶರಣ್‌ರನ್ನೇ ಓವರ್ ಟೇಕ್ ಮಾಡುತ್ತಿದ್ದರೇನೋ? ನಾಯಕಿ ಮಾಧುರಿ ಇಟಗಿಗೆ ಸಿಕ್ಕಿದ್ದೇ ಸೀರುಂಡೆ.ಗೋಲ್ಡನ್ ಸ್ಟಾರ್ ಗಣೇಶ್ ಹಿನ್ನೆಲೆ ಧ್ವನಿ ಚೌತಿ ಗಣೇಶನಿಗೂ ಖುಷಿ. ಆ ಕಲ್ಪನೆ ತುಂಬಾ ಚೆನ್ನಾಗಿ ವರ್ಕೌಟಾಗಿದೆ. ರಂಗಾಯಣ ರಘು, ಸಾಧು ಕೋಕಿಲಾ, ಉಮಾಶ್ರೀಯವರದ್ದು ದೊಡ್ಡ ಪಾತ್ರಗಳಲ್ಲ. ಅರ್ಜುನ್ ಜನ್ಯ ಸಂಗೀತ, ಕೃಷ್ಣ ಛಾಯಾಗ್ರಹಣ ನಿರೀಕ್ಷೆಯ ಪರಿಧಿಯನ್ನು ದಾಟುತ್ತದೆ.ನಿಮ್ಮ ಮಂಡೆಬಿಸಿಯನ್ನು ಕಡಿಮೆ ಮಾಡಬೇಕಿದ್ದರೆ ಕುಟುಂಬ ಸಮೇತರಾಗಿ 'ರಾಂಬೋ' ನೋಡುವ ಮನಸ್ಸು ಮಾಡಬಹುದು.