ರಜನಿ ಕಾಂತ ವಿಮರ್ಶೆ: ರಜನಿ ಸೂಪರ್, ಕಾಂತ ಸ್ಟಾರ್..!
'
ರಜನಿ ಕಾಂತ' ಮಸಾಲೆ ಸಿನಿಮಾ, ಚಿತ್ರದ ಬಗ್ಗೆ ಅಂತಹ ದೊಡ್ಡ ನಿರೀಕ್ಷೆಗಳೇನೂ ಇಲ್ಲ ಎಂದು ಸ್ವತಃ ನಾಯಕ ದುನಿಯಾ ವಿಜಯ್ ಕೆಲವು ಸಮಯದ ಹಿಂದೆ ಹೇಳಿದ್ದರು. ಹಾಗೆ ಹೇಳಿರುವುದರ ಹಿಂದಿನ ಕಾರಣವೇನು ಅನ್ನೋದು ಗೊತ್ತಿಲ್ಲ. ಆದರೆ ವಿಜಿ ಹೇಳಿದಂತೆ ಇದು ಬರೀ ಮಸಾಲೆ ಸಿನಿಮಾವಲ್ಲ ಅನ್ನೋದು ಚಿತ್ರ ನೋಡುತ್ತಿದ್ದಂತೆ ಗೊತ್ತಾಗಿ ಬಿಡುತ್ತದೆ.ಹಾಗೆಂದು ಅದ್ಭುತ ಸಿನಿಮಾ ಎಂದು ಹೇಳುವಂತಿಲ್ಲ. ಚಿತ್ರಮಂದಿರಕ್ಕೆ ಹೋದವರಿಗೆ ನಷ್ಟವಾಗದು. ನಿರೀಕ್ಷೆ ಇಟ್ಟು ಹೋದ ಅಭಿಮಾನಿಗಳಿಗೆ ನಿರಾಸೆಯಾಗದು. ಕುಟುಂಬ ಸಮೇತರಾಗಿ ಹೋದರೂ ಮುಜುಗರವಾಗದು. ಫ್ಯಾಮಿಲಿ ಕಥೆಯಿಲ್ಲ ಎಂದು ಯಾರೂ ಮೂಗು ಮುರಿಯಲಾರರು. ಅಂತಹ ಉತ್ತಮ ಕಥೆಯೊಂದನ್ನು ನಿರ್ದೇಶಕ ಪ್ರದೀಪ್ ರಾಜ್ ಹೆಣೆದಿದ್ದಾರೆ.ವಿಜಯ್ ಮೊದಲ ಬಾರಿಗೆ ದ್ವಿಪಾತ್ರ ಮಾಡಿರುವುದು ಮಾತ್ರವಲ್ಲ, ಕನ್ನಡದಲ್ಲಿ ಸೀಳುತುಟಿಯ ನಾಯಕನ ಪಾತ್ರ ಈ ಹಿಂದೆ ಯಾರೂ ಮಾಡಿದಂತಿಲ್ಲ. ಅವೆರಡೂ ಖ್ಯಾತಿ ದುನಿಯಾ ವಿಜಿಗೆ ಸಲ್ಲುತ್ತದೆ. ಉತ್ತಮ ಕಥೆ ಬರೆದಿರುವ ಕಿರಾತಕ, ಮಿ.420 ಖ್ಯಾತಿಯ ಪ್ರದೀಪ್ ರಾಜ್ ಕೂಡ ಪ್ರಶಂಸಾರ್ಹರು.ಆದರೆ ನಿರ್ದೇಶನ ಹೇಗಿದೆ? ಈ ಪ್ರಶ್ನೆಗೆ ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಪ್ರದೀಪ್ ರಾಜ್ ನಿರೂಪನೆಯಲ್ಲಿ ಸೋತಿದ್ದಾರೆ. ಬಿಡಿಬಿಡಿಯಾಗಿ ಚಿತ್ರ ಚೆನ್ನಾಗಿ ಕಂಡರೂ, ಇಡಿಯಾಗಿ ನೋಡುವಾಗ ಅಲ್ಲಲ್ಲಿ ಬೋರ್ ಹೊಡೆಸುತ್ತದೆ. ದೃಶ್ಯಗಳ ಸಂಯೋಜನೆ ಸರಿಯಾಗಿದೆ ಎಂದೆನಿಸುವುದಿಲ್ಲ. ಕೆಲವು ಕಡೆ ಕಥೆ ಅಪೂರ್ಣವಾಗಿದೆ ಎಂದೇ ಭಾಸವಾಗುತ್ತದೆ. ಪ್ರಥಮಾರ್ಧದಲ್ಲಿ ವಿಪರೀತ ಜಗ್ಗಾಟ, ದ್ವಿತೀಯಾರ್ಧದಲ್ಲಿ ನಿರೀಕ್ಷಿತ ಸನ್ನಿವೇಶಗಳು ಥ್ರಿಲ್ ಕೊಡಲಾರವು.ಅಂದ ಹಾಗೆ, 'ರಜನಿ ಕಾಂತ' ಚಿತ್ರ ಹಾಲಿವುಡ್‌ನಲ್ಲಿ 2006ರಲ್ಲಿ ಬಂದಿದ್ದ 'ಮೈ ಬ್ರದರ್' ಚಿತ್ರದಿಂದ ಸ್ಫೂರ್ತಿ ಪಡೆದಿರುವ ಚಿತ್ರ. ಅದೇ ಕಥೆಯನ್ನು ಗಂಧದ ಗುಡಿಯ ಕಂಪಿಗೆ ಮಾರ್ಪಾಡು ಮಾಡಲಾಗಿದೆ. ಥ್ರಿಲ್ಲರ್ ಕಥೆಯನ್ನು ಎತ್ತಿಕೊಂಡು ಸೆಂಟಿಮೆಂಟ್ ಬಣ್ಣ ಹಚ್ಚಲಾಗಿದೆ. ಅಷ್ಟು ಚಾಲಾಕಿತನ ತೋರಿಸಿದ್ದಾರೆ ನಿರ್ದೇಶಕ ಪ್ರದೀಪ್ ರಾಜ್.ಇನ್ನು ಸೂಪರ್ ಸ್ಟಾರ್ ರಜನಿಕಾಂತ್‌ಗೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ. ವಿಜಯ್ ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿರ್ದೇಶನ ಮಾಡಿರುವುದು ಹಲವು ಕಡೆ ಹದ ತಪ್ಪಿದಾಗ ಅನುಭವಕ್ಕೆ ಬರುತ್ತದೆ. ಒಟ್ಟಾರೆ ದುನಿಯಾ ವಿಜಿ ಉತ್ತಮ ಸಿನಿಮಾಗಳಲ್ಲಿ ಇದೂ ಒಂದು ಎಂದು ಹೇಳುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಇಡೀ ಚಿತ್ರ ವಿಜಿ ಹೆಗಲ ಮೇಲೆಯೇ ಸಾಗುತ್ತದೆ. ಅವರದ್ದೇ ಎರಡು ಪಾತ್ರಗಳಿರುವುದರಿಂದ, ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಎರಡು ವಿಭಿನ್ನ ಪಾತ್ರಗಳಿಗೆ ಪ್ರಬುದ್ಧನಾಗಿ ಜೀವ ತುಂಬಿದ್ದಾರೆ. ಸೀಳು ತುಟಿ ಪಾತ್ರದ ಡಬ್ಬಿಂಗ್ ಕೂಡ ಗಮನ ಸೆಳೆಯುತ್ತದೆ.ಆದರೆ ನಾಯಕಿ ಐಂದ್ರಿತಾ ರೇ ಕುಣಿಯುವ ದೃಶ್ಯಗಳಲ್ಲಿ ಮಾತ್ರ ನೋಡೆಬಲ್. ಉಳಿದಂತೆ ಸಪ್ಪೆಸಪ್ಪೆ. ಅಚ್ಚರಿ ಎನಿಸುವುದು ಬುಲೆಟ್ ಪ್ರಕಾಶ್. ಸಿಕ್ಕಿರುವ ಸಖತ್ ಅವಕಾಶವನ್ನು ಚೆನ್ನಾಗಿಯೇ ಸದುಪಯೋಗ ಪಡಿಸಿಕೊಂಡಿದ್ದಾರೆ. ಉಳಿದವರದ್ದು ಲೆಕ್ಕಕ್ಕುಂಟು, ಆಟಕ್ಕಿಲ್ಲ ಎಂಬಂತಹ ಪರಿಸ್ಥಿತಿ.ಅರ್ಜುನ್ ಜನ್ಯ ಸಂಗೀತದ ಎರಡು ಹಾಡುಗಳು ಓಕೆ. ಉಳಿದವನ್ನು ಕೇಳೋದ್ಯಾಕೆ.. ನೋಡೋದ್ಯಾಕೆ? ಗಿರಿ ಛಾಯಾಗ್ರಹಣ ಗಮನ ಸೆಳೆಯುವುದಿಲ್ಲ.'
ರಜನಿ ಕಾಂತ' ಕೊಟ್ಟ ಕಾಸಿಗೆ ಮೋಸ ಮಾಡದ ಸಿನಿಮಾ. ಪುರುಸೊತ್ತಿದ್ದರೆ, ಎರಡೂವರೆ ಗಂಟೆ ಮಜಾ ಬೇಕಿದ್ದರೆ ಹತ್ತಿರದ ಚಿತ್ರಮಂದಿರಕ್ಕೆ ನುಗ್ಗಿ ಬಿಡಿ.