ಯೋಗಿಯ ಈ ರಿಮೇಕ್ 'ರಾವಣ' ಅಷ್ಟಕ್ಕಷ್ಟೇ!
ಚಿತ್ರ- ರಾವಣತಾರಾಗಣ- ಯೋಗೀಶ್, ಸಂಚಿತಾ ಪಡುಕೋಣೆ, ದ್ವಾರಕೀಶ್, ಶ್ರೀನಿವಾಸ್ ಮೂರ್ತಿನಿರ್ದೇಶನ- ಯೋಗೀಶ್ ಹುಣಸೂರುಕಾದಲ್ ಕೊಂಡೇನ್ ಎಂಬ ತಮಿಳು ಚಿತ್ರ ಈ ಹಿಂದೆ ಸಾಕಷ್ಟು ಹೆಸರು ಮಾಡಿತ್ತು. ಈ ಚಿತ್ರದಲ್ಲಿ ರಜನೀಕಾಂತ್ ಅಳಿಯನಾದ ತಮಿಳು ನಟ ಧನುಷ್ ತ್ನ ಅಭಿನಯದ ಮೂಲಕ ಸೈ ಎನಿಸಿಕೊಂಡಿದ್ದರು. ಇದೇ ಚಿತ್ರವೀಗ ಕನ್ನಡದಲ್ಲಿ ರಾವಣನಾಗಿ ಥಿಯೇಟರ್‌ಗಳಲ್ಲಿ ಪ್ರತ್ಯಕ್ಷವಾಗಿದೆ.ರಾವಣ ಚಿತ್ರವನ್ನು ಯೋಗೀಶ್ ಹುಣಸೂರು ನಿರ್ದೇಶಿದರೆ ಲೂಸ್ ಮಾದ ಖ್ಯಾತಿಯ ಯೋಗೀಶ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಕಾದಲ್ ಕೊಂಡೇನ್ ವೀಕ್ಷಿಸಿದವರಿಗೆ ರಾವಣ ನಿರೀಕ್ಷಿತ ರೋಮಾಂಚನ ನೀಡುವುದಿಲ್ಲ. ಅನಾಥನೊಬ್ಬ ತನ್ನಲ್ಲಿರುವ ಕ್ರೌರ್ಯವನ್ನೂ ಮೀರಿದ ಪ್ರೀತಿಗೆ ಹಂಬಲಿಸಿರುತ್ತಾನೆ ಎಂಬುದು ಇದರ ಕಥೆಯ ಎಳೆ.ಸಹಪಾಠಿ ಹುಡುಗಿಯೊಂದಿಗೆ ನಾಯಕನ ಸ್ನೇಹ, ಅದೇ ಹುಡುಗಿಯ ಮತ್ತೊಬ್ಬನೊಂದಿಗಿನ ಪ್ರೀತಿ, ನಾಯಕಿಯ ಪ್ರೀತಿಯನ್ನು ತನ್ನದಾಗಿಸಿಕೊಳ್ಳಬೇಕೆಂಬ ನಾಯಕನ ಸ್ವಾರ್ಥ ಮನೋಭಾವ ಸಿನಿಮಾದ ಒಟ್ಟು ಕಥಾ ಹಂದರ. ಕಾಲೇಜಿಗೆ ಬರುವ ಬುದ್ದಿವಂತ ಹುಡುಗ(ಯೋಗೀಶ್)ನ ಕ್ರೌರ್ಯ ಅರ್ಧ ಚಿತ್ರದ ತನಕ ಯಾರಿಗೂ ತಿಳಿಯುವುದಿಲ್ಲ. ಅಲ್ಲಿಯವರೆಗೂ ಹುಡುಗರ ತಮಾಷೆ, ಗೇಲಿ, ಮಜಾದಲ್ಲೇ ಚಿತ್ರ ಸಾಗುತ್ತದೆ. ಬಳಿಕವಷ್ಟೇ ನಿಜವಾದ ಕ್ರೌರ್ಯ ಆರಂಭವಾಗುವುದು. ಹಾಗಾಗಿ ಚಿತ್ರ ನಿಧಾನವಾಗಿ ಚಲಿಸುತ್ತದೆ. ಎಷ್ಟು ನಿಧಾನವೆಂದರೆ, ಅದು ಪ್ರೇಕ್ಷಕರು ಬೇಸರಮಾಡಿಕೊಳ್ಳುವಷ್ಟರ ಮಟ್ಟಿಗೆ.ಯೋಗೀಶ್ ಮಾಡಿದ ಅಭಿನಯ ತಣ್ಣಗೆ ಇದ್ದರೂ ಒಳಗೆ ಬೆಂಕಿಯಂತಹ ಪಾತ್ರ ಇರುವುದರಿಂದ ಅವರ ಮುಖದಲ್ಲಿ ಅಂಥ ಭಾವನೆಗಳಾಗಲೀ, ನಿಲುವಿನಲ್ಲಿ ಅಂಥ ಭಂಗಿಯಾಗಲೀ ಕಾಣದು. ಚಿತ್ರದ ಜೀವಾಳವೇ ಆ ಪಾತ್ರವಾದುದರಿಂದ ಅದು ಹೆಚ್ಚು ಆಕರ್ಷಣೆಯನ್ನು ಹುಟ್ಟಿಸುವುದಿಲ್ಲ. ಆದರೆ, ಅವರ ಸಹನಟ ಸಂತೋಷ್ ಪಾತ್ರವೇ ಲವಲವಿಕೆಯಿಂದ ಕೂಡಿದೆ. ಸಂಚಿತಾ ಅಭಿನಯ ಅಷ್ಟಕ್ಕಷ್ಟೆ. ದ್ವಾರಕೀಶ್, ಶ್ರೀನಿವಾಸ ಮೂರ್ತಿ ಪುಟ್ಟ ಪಾತ್ರಗಳಲ್ಲಿ ಮಿಂಚಿದ್ದಾರೆ.ಅಭಿಮಾನ್ ಸಂಗೀತ ಸೂಪರ್, ಆರ್.ಗಿರಿ ಛಾಯಾಗ್ರಹಣಕ್ಕೂ ಅದನ್ನೇ ಹೇಳಬಹುದು. ಬಹುಶಃ ಯೋಗೀಶ್ ಹುಣಸೂರು, ರಿಮೇಕ್ ಹೇಗೆ ಮಾಡಬೇಕೆಂಬುದನ್ನು ಅದರಲ್ಲಿ ನುರಿತರಾದ ರವಿಚಂದ್ರನ್, ಸುದೀಪ್ ಅವರಂಥ ನಟರನ್ನು ಸಂದರ್ಶಿಸುವುದು ಒಳಿತೇನೋ.