ಯಾರೇ ಕೂಗಾಡಲಿ ಚಿತ್ರವಿಮರ್ಶೆ: ಬದಲಾವಣೆಯ ಟಾನಿಕ್
ಚಿತ್ರ: ಯಾರೇ ಕೂಗಾಡಲಿತಾರಾಗಣ: ಪುನೀತ್ ರಾಜ್‌ಕುಮಾರ್, ಯೋಗೇಶ್, ಭಾವನಾ, ಸಿಂಧು ಲೋಕನಾಥ್, ಗಿರೀಶ್ ಕಾರ್ನಾಡ್ನಿರ್ದೇಶನ: ಸಮುತ್ತಿರಕನಿಸಂಗೀತ: ವಿ. ಹರಿಕೃಷ್ಣಈ ಬಾರಿ ಪುನೀತ್ ರಾಜ್‌ಕುಮಾರ್ ಚಿತ್ರದಿಂದ ನಿರಾಸೆಯಾಗುವ ಚಾನ್ಸೇ ಇಲ್ಲ! ಮಾಸ್ ಪ್ರೇಕ್ಷಕರನ್ನು ಮುಟ್ಟುವ ಕಥೆ, ಅದಕ್ಕೆ ತಕ್ಕ ಲುಕ್, ಆಕ್ಷನ್ ಎಲ್ಲವನ್ನೂ ಹೊಂದಿರುವ 'ಯಾರೇ ಕೂಗಾಡಲಿ' ಯುವ ಜನಾಂಗಕ್ಕೆ ಸಂದೇಶದ ಜತೆ ಮನರಂಜನೆ ಒದಗಿಸುವ ಚಿತ್ರ.ಕುಮಾರ (ಪುನೀತ್) ಮತ್ತು ನಟೇಶ (ಯೋಗೇಶ್) ಹಿಂದಿನದ್ದೆಲ್ಲವನ್ನೂ ಮರೆತು ಹೊಸ ಬದುಕು ಆರಂಭಿಸಿರುತ್ತಾರೆ. ಕುಮಾರನ ಕಾಲೆಳೆಯುತ್ತಲೇ ಪ್ರೀತಿಯಲ್ಲಿ ಬೀಳುತ್ತಾಳೆ ಭಾವನಾ. ಹೀಗೆ ಎಲ್ಲವೂ ಆರಾಮವಾಗಿ ಸಾಗುತ್ತಿದೆ ಎಂಬ ಹೊತ್ತಿನಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತು ದಿಕ್ಕು ಬದಲಿಸುತ್ತದೆ.ಅಲ್ಲಿಂದ ಫ್ಲ್ಯಾಶ್‌ಬ್ಯಾಕ್. ಕುಮಾರನನ್ನು ಹುಚ್ಚ ಎಂದು ಬ್ರಾಂಡ್ ಮಾಡಿರುತ್ತಾರೆ. ಆಸ್ತಿ ಹೊಡೆಯಬೇಕೆಂಬ ಉದ್ದೇಶದಿಂದ ಸಂಬಂಧಿಕರು ತುಚ್ಛವಾಗಿ ನಡೆಸಿಕೊಂಡಿರುತ್ತಾರೆ. ಅಲ್ಲಿ ವೈದ್ಯರ ಸಹಾಯದಿಂದ ಕುಮಾರ ತಪ್ಪಿಸಿಕೊಂಡು ಹೋಗುತ್ತಾನೆ. ಆತನಿಗೆ ಜತೆಯಾಗುವವನು ಸಮಾನ ದುಃಖಿ ನಟೇಶ. ಇವಿಷ್ಟು ಅಂಶವನ್ನಿಟ್ಟುಕೊಂಡಿರುವ ಕಥೆಯ ಆಚೀಚೆ ಸಾಕಷ್ಟು ರೆಂಬೆ ಕೊಂಬೆಗಳಿವೆ.ಇಂತಹ ಪಾತ್ರವನ್ನೂ ಪುನೀತ್ ಮಾಡಬಹುದು ಎಂದು ಅಷ್ಟು ಸುಲಭವಾಗಿ ಯಾರೂ ಅಂದಾಜಿಸುವುದು ಕಷ್ಟ. ಆದರೆ ಚಿತ್ರ ನೋಡುತ್ತಿದ್ದಂತೆ, ಯಾವ ಪಾತ್ರವನ್ನಾದರೂ ಲೀಲಾಜಾಲವಾಗಿ ಮಾಡಿ ಮುಗಿಸಬಲ್ಲರು ಎಂಬುದು ಅರಿವಿಗೆ ಬರುತ್ತದೆ. ಅದರಲ್ಲೂ 'ಮಠ' ಗುರುಪ್ರಸಾದ್ ಸಂಭಾಷಣೆ ಪುನೀತ್ ಮಾತುಗಳಿಗೆ ದೊಡ್ಡ ತೂಕವನ್ನೇ ಕೊಟ್ಟಿವೆ.ಪ್ರಥಮಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಕಾಣುವ ಎರಡು ವಿಭಿನ್ನ ಶೇಡ್ ಪಾತ್ರಗಳಿಗೆ ಪುನೀತ್ ಚೆನ್ನಾಗಿ ಹೊಂದುತ್ತಾರೆ. ಸಾಹಸ ದೃಶ್ಯಗಳಲ್ಲಂತೂ ಸೂಪರ್. ಅವರನ್ನು ನಿರ್ದೇಶಕ ಸಮುತ್ತಿರಕನಿ ತುಂಬಾ ಚೆನ್ನಾಗಿ ಬಳಸಿಕೊಂಡಿರುವುದು ಸ್ಪಷ್ಟ. ಮೂಲಚಿತ್ರಕ್ಕಿಂತ ಸಾಕಷ್ಟು ಬದಲಾವಣೆಗಳನ್ನೂ ಮಾಡಲಾಗಿದೆ. ಅನಗತ್ಯ ಎನಿಸುವ ದೃಶ್ಯಗಳಿಗೆ ಕತ್ತರಿ ಹಾಕಿದ್ದಾರೆ. ಹಾಗಾಗಿ ನಿರ್ದೇಶಕರು ಕಥೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ ಎಂಬ ಭಾವನೆ ಬರುತ್ತದೆ.ಲೂಸ್ ಮಾದ ಯೋಗೇಶ್ ಬೆಳೆಯುತ್ತಿದ್ದಾರೆ. ಭಾವನಾ ಭಾವನಾತ್ಮಕವಾಗಿ ತಟ್ಟುತ್ತಾರೆ. ಅವಕಾಶ ವಂಚಿತೆ ಸ್ಮಿತಾರದ್ದು ಅದ್ಭುತ ಅಭಿನಯ. ಸಿಂಧು ಲೋಕನಾಥ್ ಮೋಸ ಮಾಡಿಲ್ಲ. ಗಿರೀಶ್ ಕಾರ್ನಾಡ್, ರವಿಶಂಕರ್, ಮಾಳವಿಕಾ, ಸಾಧು ಕೋಕಿಲಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.ಇವೆಲ್ಲಕ್ಕಿಂತಲೂ ಒಂದು ಹಿಡಿ ಹೆಚ್ಚೇ ಎಂಬಂತೆ ಸಾಹಸ ನಿರ್ದೇಶಕ ರವಿವರ್ಮಾ ಕೆಲಸ ಮಾಡಿರುವುದು ಕಂಡು ಬರುತ್ತದೆ. ಸುಕುಮಾರ್ ಛಾಯಾಗ್ರಹಣ ನಯನ ಮನೋಹರ. ಬೆರಳೆಣಿಕೆಯ ಹಾಡುಗಳಲ್ಲಿ ಅಬ್ಬರವಿಲ್ಲದೆ ಗುಣುಗಿಸುತ್ತಾರೆ ಸಂಗೀತ ನಿರ್ದೇಶಕ ಹರಿಕೃಷ್ಣ.'
ಪೊರಾಲಿ' ರಿಮೇಕ್ ಆದರೂ, ಅದಕ್ಕಿಂತ ಚೆನ್ನಾಗಿದೆ. ಯುವ ಜನತೆಗೆ ಸಂದೇಶವಿದೆ. ಪ್ರೀತಿ-ಪ್ರೇಮ ಗುಂಗು ಸಾಕೆನಿಸಿದವರಿಗೆ 'ಯಾರೇ ಕೂಗಾಡಲಿ' ಟಾನಿಕ್ ಆಗಬಹುದು. ಯಾವುದಕ್ಕೂ ಚಿತ್ರಮಂದಿರದತ್ತ ಒಮ್ಮೆ ಹೆಜ್ಜೆ ಹಾಕಿ.