ಮುಂಜಾನೆ ವಿಮರ್ಶೆ; ವಿಧಿಯಾಟ, ಪ್ರೀತಿಯ ನರಳಾಟ
ಚಿತ್ರ: ಮುಂಜಾನೆತಾರಾಗಣ: ಗಣೇಶ್, ಮಂಜರಿ, ಮಾಳವಿಕಾನಿರ್ದೇಶನ: ಎಸ್. ನಾರಾಯಣ್ಸಂಗೀತ: ಎಸ್. ನಾರಾಯಣ್
ಆಕೆ ಪೋಸ್ಟ್ ಮಾಸ್ಟರ್ ಮಗಳು ಪವಿತ್ರ (ಮಂಜರಿ ಫದ್ನಿಸ್). ತೋಚಿದ್ದನ್ನು ಗೀಚುವ ಹುಡುಗಿ. ಅದಕ್ಕೆ ಪುಸ್ತಕವೇ ಆಗಬೇಕಿಲ್ಲ. ಗೋಡೆ, ಬಟ್ಟೆಗಳು, ತರಕಾರಿ, ಕೊನೆಗೆ ಬಸ್ಸು ಕೂಡ ಪವಿತ್ರ ಪಾಲಿಗೆ ಪೇಪರ್ ಆಗುತ್ತದೆ. ಆದರೆ ತಾನು ಬರೆದ ಸಾಲುಗಳು ಯಾರನ್ನೋ ತಲುಪುತ್ತವೆ ಎಂಬ ಚಿಕ್ಕ ಯೋಚನೆಯೂ ಆಕೆಗಿರುವುದಿಲ್ಲ.ಅತ್ತ ಶ್ರೀಮಂತ ಹುಡುಗ ಮನು ಮೂರ್ತಿ (ಗಣೇಶ್) ಇನ್ನೊಂದು ಕಡೆಯಿಂದ ಪವಿತ್ರಾ ಸಾಲುಗಳನ್ನು ಓದುತ್ತಾನೆ. ಓದಿ ಸುಮ್ಮನೆ ಕೂರದೆ, ಅಲ್ಲೇ ತನ್ನ ಪ್ರತಿಕ್ರಿಯೆಯನ್ನೂ ದಾಖಲಿಸುತ್ತಾನೆ. ಆಕೆ ಬರೆದದ್ದನ್ನು ಉಜ್ಜಿ ಈತ ಬರೆಯುತ್ತಾನೆ. ಒಬ್ಬರನ್ನೊಬ್ಬರು ನೋಡದೆ ಅಲ್ಲೇ ಪ್ರೀತಿ ಹುಟ್ಟಿಕೊಳ್ಳುತ್ತದೆ. ಅದೇ ಹಾದಿಯಲ್ಲಿ ಫೋನ್ ನಂಬರ್ ಕೂಡ ಸಿಗಬೇಕಿತ್ತು.ಆದರೆ ಅಲ್ಲಿ ವಿಧಿ ಆಟವಾಡುತ್ತದೆ. ಪವಿತ್ರಾ ಬರೆದ ಫೋನ್ ನಂಬರ್ ಮನು ಮೂರ್ತಿಗೆ ಸಿಗುವುದಿಲ್ಲ. ವರುಣ ಖಳನಾಗುತ್ತಾನೆ. ಅತ್ತ ಮನೆಯಲ್ಲೂ ಪವಿತ್ರಾ ಒಲ್ಲದ ಮದುವೆಗೆ ತಲೆಯಾಡಿಸುತ್ತಾಳೆ. ವರನ ಮುಖವನ್ನೇ ನೋಡದೆ ಯಾಂತ್ರಿಕವಾಗಿರುತ್ತಾಳೆ. ಅದು ಇಬ್ಬರಿಗೂ ಇಷ್ಟವಿಲ್ಲದ ಮದುವೆ. ತಮ್ಮ ಪ್ರೀತಿಗೆ ಮೋಸ ಮಾಡುತ್ತಿದ್ದೇವೆ ಎಂದು ಭಾವಿಸಿ, ಇಬ್ಬರೂ ದೂರವೇ ಇರುತ್ತಾರೆ. ಮನಸ್ಸುಗಳು ಹತ್ತಿರ ಬರುವುದೇ ಇಲ್ಲ. ಕೊನೆಯ ನಿರ್ಧಾರ ವಿಚ್ಛೇದನ.ನಿಜಕ್ಕೂ ಮುಂದೇನಾಗುತ್ತದೆ? ತಾವು ಪ್ರೀತಿಸುತ್ತಿದ್ದವರು ತಾವೇ ಎನ್ನುವುದು ಅವರಿಗೆ ಗೊತ್ತಾಗುತ್ತದೆಯೇ? ಇದನ್ನು ಚಿತ್ರಮಂದಿರದಲ್ಲೇ ನೋಡಬೇಕು.ಎಂದಿನಂತೆ ನಿರ್ದೇಶಕ ಎಸ್. ನಾರಾಯಣ್ ಮತ್ತೊಮ್ಮೆ ದುರಂತ ಪ್ರೇಮಕಥೆಗಳ ಶಿಲ್ಪಿಯಾಗಿ ಹೊರ ಹೊಮ್ಮಿದ್ದಾರೆ. ಅವರೀಗ ಕೊಟ್ಟಿರುವುದು ಹೃದಯಸ್ಪರ್ಶಿ ಕಥೆ. ಆದರೆ ಅದನ್ನು ಅವರದ್ದೇ ಎಂದು ಹೇಳುವಂತಿಲ್ಲ. ತೀರಾ ಹೊಸತನವಿದೆ ಎಂದು ಹೇಳುವಂತಿಲ್ಲ. ಅದೇ ಬೆಳದಿಂಗಳ ಬಾಲೆಯ ನೆರಳು ಇಲ್ಲೂ ಕಾಣಿಸಿಕೊಂಡಿದೆ.ಅದಕ್ಕಿಂತಲೂ ಹೆಚ್ಚಾಗಿ ನಾರಾಯಣ್ ಇನ್ನೂ ಪುರಾತನ ಪ್ರೇಮಕಥೆಗಳಿಂದ ಹೊರ ಬಂದಿಲ್ಲ ಅನ್ನೋದು ಅಚ್ಚರಿ ಹುಟ್ಟಿಸುತ್ತದೆ. ಗಣೇಶ್ ಜತೆಗಂತೂ ಅವರದ್ದು ದುರಂತ ಚಿತ್ರಗಳ ಸಾಲು. ಅಲ್ಲೇ ಗೆಲುವನ್ನೂ ಕಂಡು ಕೊಂಡಿರುವುದರಿಂದ ಮತ್ತದೇ ಕಥೆಗೆ ಅವರು ಜೋತು ಬಿದ್ದಿದ್ದಾರೆ. ಕಷ್ಟಪಟ್ಟು ಪ್ರೀತಿಸುವ ಕಥೆಯನ್ನು ಆರಿಸಿಕೊಂಡಿದ್ದಾರೆ.ಆದರೂ ನಾರಾಯಣ್ ಸಹ್ಯವೆನಿಸುತ್ತಾರೆ. ಸ್ವತಃ ಸಂಗೀತ ನೀಡಿದರೂ ಬೇಡವೆನಿಸುವುದಿಲ್ಲ. ಅಸಹ್ಯ ಮೂಡಿಸುವುದು ಅವರ ಟಾಯ್ಲೆಟ್ ಜೋಕುಗಳು. ಎಷ್ಟೇ ಹಿರಿಯರಾದರೂ ಕೀಳಭಿರುಚಿಯ ಹಾಸ್ಯದಿಂದ ಅವರು ಹೊರ ಬರುತ್ತಿಲ್ಲ.ಇನ್ನು ಗಣೇಶ್ ಅಭಿನಯದ ಬಗ್ಗೆ ಇನ್ನೊಂದು ಮಾತು ಬೇಕಿಲ್ಲ. ಸೆಂಟಿಮೆಂಟ್ ದೃಶ್ಯಗಳು ಅವರಿಗೆ ಹೊಸತೂ ಅಲ್ಲ. ನಾಯಕಿ ಮಂಜರಿ ಫದ್ನಿಸ್ ಕೂಡ ನಟನೆಯಲ್ಲಿ ಗಣೇಶ್‌ಗೆ ಪೈಪೋಟಿ ನೀಡಿದ್ದಾರೆ. ಭಾವನಾತ್ಮಕ ದೃಶ್ಯಗಳಲ್ಲಿನ ಅವರ ಅಭಿನಯ ಚಿತ್ರಮಂದಿರದಿಂದ ಹೊರಗೆ ಬಂದ ಮೇಲೂ ಕಾಡುತ್ತವೆ. ಆದರೂ ಅವರಿಬ್ಬರ ಜೋಡಿ ಅಷ್ಟೊಂದು ಹೊಂದಾಣಿಕೆಯಾಗುವುದಿಲ್ಲ ಅನ್ನೋದು ಕಂಪ್ಲೇಂಟು.ಶೈಲೂವಿನಂತೆ ಇಲ್ಲೂ ಜಗದೀಶ್ ವಾಲಿ ಛಾಯಾಗ್ರಹಣ ಸೂಪರ್. ಹಲವು ಸುಂದರ ದೃಶ್ಯಗಳನ್ನು ಅವರು ತನ್ನ ಕ್ಯಾಮರಾ ಕಣ್ಣುಗಳಲ್ಲಿ ಬಂಧಿಸಿದ್ದಾರೆ.