'ಮುಂಗಾರು ಮಳೆ'ಯಂತೆಯೇ ಈ 'ಮಳೆಯಲಿ ಜೊತೆಯಲಿ'!
, ಶನಿವಾರ, 12 ಡಿಸೆಂಬರ್ 2009 (13:18 IST)
ಚಿತ್ರ- ಮಳೆಯಲಿ ಜೊತೆಯಲಿತಾರಾಗಣ- ಗಣೇಶ್, ಅಂಜಲಿ ಸುಖಾನಿ, ಯುವಿಕಾ ಚೌಧರಿ, ಶರಣ್, ರಂಗಾಯಣ ರಘು, ಸುಧಾರಾಣಿ ಮತ್ತಿತರರು.ನಿರ್ದೇಶನ- ಪ್ರೀತಂ ಗುಬ್ಬಿಸ್ವತಃ ಗಣೇಶ್ ನಿರ್ಮಾಣದ ಹಾಗೂ ನಾಯಕ ನಟನಾಗಿ ಅಭಿನಯಿಸಿದ ಬಹುನಿರೀಕ್ಷೆಯ ಮಳೆಯಲಿ ಜೊತೆಯಲಿ ಚಿತ್ರ ಬಿಡುಗಡೆಯಾಗಿದೆ. ಚಿತ್ರವನ್ನು ವೀಕ್ಷಿಸಿದವರಿಗೆ ಹೆಚ್ಚು ಕಡಿಮೆ ಇದು ಮುಂಗಾರು ಮಳೆಯ ಯಶಸ್ಸಿನಿಂದ ಹೊರಬಂದ ಚಿತ್ರ ಅನಿಸದೇ ಇರಲಾರದು. ಇಲ್ಲಿ ಮಳೆಯಿದೆ, ಜೊತೆಯಲಿ ಅದೇ ಗಣೇಶನ ಖಾಸಾ ದೋಸ್ತು 'ದೇವದಾಸ್' ಮೊಲ ಇದೆ!ಗೋಲ್ಡನ್ ಸ್ಟಾರ್ ಚಿತ್ರ ಎಂದ ಮೇಲೆ ಬೇಸರ ಇರುವುದಿಲ್ಲ ಅಂದುಕೊಂಡರೆ ಅದು ಶುದ್ಧ ಸುಳ್ಳು. ಚಿತ್ರ ಪ್ರಾರಂಭವಾದ ಅರ್ಧಗಂಟೆ ಪ್ರೇಕ್ಷಕನಿಗೆ ಮನರಂಜನೆಯ ಸುಗ್ಗಿಯೋ ಸುಗ್ಗಿ. ಚಿತ್ರ ಸಾಗುತ್ತಾ ಲವಲವಿಕೆಯನ್ನು ಕಳೆದುಕೊಳ್ಳುತ್ತದೆ.ಪತ್ರಕರ್ತರಾದ ವಿನಾಯಕ್‌ರಾಮ್ ಕಲಗಾರು ಮತ್ತು ಮಹೇಶ್ ದೇವಶೆಟ್ಟಿ ಬರೆದ ಸಂಭಾಷಣೆ ಖುಷಿ ಕೊಡುತ್ತವೆ. ಅದಕ್ಕೆ ಗಣೇಶ್ ಅವರ ಡೈಲಾಗ್ ಡೆಲಿವರಿ ಶೈಲಿಯೇ ಕಾರಣ. ಗಣೇಶ್ ಸಿನಿಮಾಗಳಲ್ಲಿ ಹೊಟ್ಟೆ ಹುಣ್ಣಾಗಿಸುವಷ್ಟು ಡೈಲಾಗ್ ಪ್ರಧಾನವಾದ ತೆಳು ಹಾಸ್ಯ ಇರುವುದು ಸಾಮಾನ್ಯ. ಇಲ್ಲಿ ಹಾಸ್ಯ ಅಂಥದ್ದೇನೂ ಹೇಳಿಕೊಳ್ಳುವಂಥಾದ್ದು ಇಲ್ಲದಿದ್ದರೂ, ಓತಪ್ರೋತವಾಗಿ ಹರಿಯುವ ಮಾತಿನ ಅಬ್ಬರ ಇದ್ದೇ ಇದೆ. ಎಂದಿನಂತೆ ಗಣೇಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಡೀ ಚಿತ್ರದ ತುಂಬಾ ಅವರು ಮತ್ತು ಅವರ ಮಾತುಗಳೇ ತುಂಬಿವೆ. ಹಾಗಾಗಿ ಗಣೇಶ್ ನಟನೆಯ ಮುಂದೆ ನಾಯಕಿಯರಿಬ್ಬರ ನಟನೆ ಸಪ್ಪೆಯಾಗಿದೆ. ಅದರಲ್ಲೂ ನಾಯಕಿ ಅಂಜನಾ ಸುಖಾನಿಗಿಂತಲೂ ಎರಡನೇ ನಾಯಕಿ ಯುವಿಕಾ ನಟನೆ ಎದ್ದು ಕಾಣುತ್ತದೆ.
ನಾಯಕ ಪ್ರೀತಂ (ಗಣೇಶ್) ಅಪ್ಪನ ಆದೇಶದ ಮೇರೆಗೆ ಸಕಲೇಶಪುರಕ್ಕೆ ಧಾವಿಸುತ್ತಾನೆ, ಅದೇ ಮುಂಗಾರು ಮಳೆ ಶೈಲಿಯಲ್ಲಿ. ಸಕಲೇಶಪುರದ ಮಳೆನಾಡಲ್ಲಿ ಮಳೆಯಲ್ಲಿ ಮೀಯುವ ಹೊತ್ತಿಗೆ ಅಂಜಲಿಯ ಪರಿಚಯವಾಗುತ್ತದೆ. ಆಕೆಯ ಜೊತೆಗೆ ಅದೇ ಸಕಲೇಶಪುರ ಎಸ್ಟೇಲಿನ ಮಾಲಿಕನ ಮಗಳು ಶ್ವೇತಳ ಪರಿಚಯವೂ ಕೂಡಾ. ಶ್ವೇತಾಳನ್ನು ಕಂಡ ಮೊದಲ ನೋಟದಲ್ಲೇ ಪ್ರೀತಂ ಆಕೆಯ ಪ್ರೀತಿಯಲ್ಲಿ ತೇಲುತ್ತಾನೆ. ಆದರೆ ಶ್ವೇತಾ ಮದುವೆಯನ್ೇ ದ್ವೇಷಿಸುವ ಹುಡುಗಿ. ಇಂಥ ಸಂದರ್ಭದಲ್ಲಿ ಪ್ರೀತಂ ಅಂಜಲಿಯ ಸಹಾಯ ಪಡೆಯುತ್ತಾನೆ. ಮೂರು ಮಂದಿಯೂ ತುಂಬ ಕ್ಲೋಸ್ ಆಘುವ ಹೊತ್ತಿಗೆ, ಪ್ರೀತಂಗೆ ನಿಧಾನವಾಗಿ ತಾನು ಶ್ವೇತಾಗಿಂತಲೂ ಅಂಜಲಿಯಲ್ಲಿ ಅನುರಕ್ತನಾಗಿರುವುದು ತಿಳಿಯುತ್ತದೆ. ಆದರೆ ಆತ ತನ್ನ ಪ್ರೀತಿಯನ್ನು ತಿಳಿಸುವ ಮೊದಲೇ ಈ ಇಬ್ಬರನ್ನು ಬಿಟ್ಟು ಹೇಳದೆಯೇ ಅಂಜಲಿ ಹೊರಟು ಹೋಗಿರುತ್ತಾಳೆ. ಆಗ ನಾಯಕನ ಮುಂದಿನ ನಡೆ ನೋಡಲು ಚಿತ್ರ ವೀಕ್ಷಿಸಬೇಕು. ಪ್ರೀತಿ ನಿವೇದನೆಗೆ ಪ್ರೀತಿಸುವ ಹುಡುಗಿಯ ಗೆಳತಿಯ ಸಹಾಯ ಪಡೆಯೋದು ಹಲವು ಸಿನಿಮಾಗಳಲ್ಲಿ ಬಂದರೂ ನಿರ್ದೇಶಕ ಪ್ರೀತಂ ಗುಬ್ಬಿ ಚಿತ್ರಕ್ಕೆ ತಿರುವು ನೀಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಉಳಿಸುತ್ತಾರೆ.ಶರಣ್ ಅಭಿನಯ ಅಚ್ಚುಕಟ್ಟು. ಸುಧಾರಾಣಿ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ರಂಗಾಯಣ ರಘು ಬಗ್ಗೆ ಹೇಳಬೇಕಾಗಿಲ್ಲ. ಅವರ ಅಭಿನಯ ಕ್ಲಾಸಿಕ್. ಇನ್ನು ಹಾಡಿನ ವಿಚಾರವಾಗಿ ಹೇಳೋದಾದರೆ, ಹರಿಕೃಷ್ಣ ಇಂಪಾದ ಹಾಡನ್ನೇನೋ ನೀಡಿದ್ದಾರೆ, ಅವರ ಹಾಡುಗಳು ಮೊದಲೇ ಎಲ್ಲೋ ಕೇಳಿದಂತಿದೆ. ಕೃಷ್ಣ ಅವರ ಕ್ಯಾಮರಾ ಕೆಲಸದ ಬಗ್ಗೆ ದೂಸ್ರಾ ಮಾತೇ ಇಲ್ಲ. ಮಳೆಯ ಹನಿಯಲ್ಲಿ ಮುಳುಗೇಳುವ ಅದ್ಭುತ ಪ್ರಕೃತಿ ಸಿನಿಮಾದಿಂದ ಹೊರಬರುವವರ ಮನದಲ್ಲಿ ಹಚ್ಚಹಸಿರಾಗಿ ಹಾಗೆಯೇ ಉಳಿಯುತ್ತದೆ. ಚಿತ್ರದಲ್ಲಿ ಬಳಸಿದ ಉಡುಗೆಗಳ ಮಟ್ಟಿಗೆ ನಿರ್ಮಾಪಕಿ ಶಿಲ್ಪಾ ಗಣೇಶ್ ಉದಾರ ಭಾವನೆ ತೋರಿಸಿದ್ದಾರೆ.ಮುಂಗಾರು ಮಳೆಯ ಕಥೆ ಬರೆದ ಪ್ರೀತಂ ಗುಬ್ಬಿ ಹಾಗೆ ಸುಮ್ಮನೆ ಎಂಬ ಚಿತ್ರ ನಿರ್ದೇಶಿಸಿದರೂ ಅದು ತೋಪಾಯಿತು. ಈಗ ಮಳೆಯಲಿ ಜೊತೆಯಲಿ ಮೂಲಕ ಮುಂಗಾರು ಮಳೆಯಂಥದ್ದೇ ಕಥೆ ನೀಡಿದ್ದಾರೆ. ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಆದರೂ ನಿರ್ದೇಶಕ ಪ್ರೀತಂ ಗುಬ್ಬಿ, ಮೊದಲರ್ಧದಲ್ಲಿ ಕೊಂಚ ಕತ್ತರಿ ಪ್ರಯೋಗ ಮಾಡಿದ್ದರೂ ಧಾರಾಳವಾಗಿ ನಡೆಯುತ್ತಿತ್ತೇನೋ. ಜೊತೆಗೆ ದೇವದಾಸ್ ಮೊಲದ ಅಗತ್ಯ ಇಲ್ಲಿದ್ದಂತೆ ಕಾಣೋದಿಲ್ಲ. ಹಾಗಾಗಿ ಈ ಚಿತ್ರ ಮುಂಗಾರು ಮಳೆ ಎಫೆಕ್ಟ್ ಅನ್ನದೆ ವಿಧಿಯಿಲ್ಲ. ಆದರೂ ಚಿತ್ರ ತಾಂತ್ರಿಕವಾಗಿ ಅಸಾಧಾರಣ, ಅದ್ಭುತ! ಗಣೇಶ್ ಅವರನ್ನು ಮೆಚ್ಚುವ ಅವರ ಅಭಿಮಾನಿಗಳಿಗಂತೂ ಈ ಮಳೆಯಲಿ ಜೊತೆಯಲಿ ಚಿತ್ರ ಖಂಡಿತವಾಗಿಯೂ ಹಬ್ಬವೋ ಹಬ್ಬ.