Select Your Language

Notifications

webdunia
webdunia
webdunia
webdunia

ಮಿ.420 ಚಿತ್ರವಿಮರ್ಶೆ: ನಿಜವಾದ ಮೂರ್ಖರು ಯಾರು?

ಮಿ.420 ಚಿತ್ರವಿಮರ್ಶೆ: ನಿಜವಾದ ಮೂರ್ಖರು ಯಾರು?
ಚಿತ್ರ: ಮಿ.420
ತಾರಾಗಣ: ಗಣೇಶ್, ಪ್ರಣೀತಾ, ರಂಗಾಯಣ ರಘು
ನಿರ್ದೇಶನ: ಪ್ರದೀಪ್ ರಾಜ್
ಸಂಗೀತ: ವಿ. ಹರಿಕೃಷ್

'ರಾಂಬೋ'ದಲ್ಲಿ ಶರಣ್ ಮತ್ತು ತಬಲಾ ನಾಣಿ ಇದ್ದರು. 'ಮಿ.420'ಯಲ್ಲಿ ಗಣೇಶ್ ಮತ್ತು ರಂಗಾಯಣ ರಘು ಇದ್ದಾರೆ. ಇದಿಷ್ಟೇ ವ್ಯತ್ಯಾಸವಾಗಿದ್ದರೆ ಚಿತ್ರವನ್ನು ನೋಡಬಹುದಿತ್ತೇನೋ? ಆದರೆ ಯಾವ ಕೋನದಲ್ಲೂ ಆ ಚಿತ್ರದ ಹತ್ತಿರಕ್ಕಿದು ನಿಲ್ಲುವುದಿಲ್ಲ. ಅಷ್ಟೊಂದು ಸೊರಗಿದ್ದಾರೆ 'ಕಿರಾತಕ' ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್.

ಹಳ್ಳಿ ಹುಡುಗ ಕೃಷ್ಣ (ಗಣೇಶ್) ಅಜ್ಜಿ ಕಾಲವಾದ ನಂತರ ಸೋದರ ಮಾವನನ್ನು ಸೇರಿಕೊಳ್ಳುತ್ತಾನೆ. ಇಷ್ಟವಿಲ್ಲದಿದ್ದರೂ ಆತನ ಜತೆ ಕೈ ಜೋಡಿಸುತ್ತಾನೆ. ಆತನಂತೆ ಈತನೂ ಕಳ್ಳನಾಗುತ್ತಾನೆ, ಪಿಕ್ ಪಾಕೆಟ್ ಮಾಡುತ್ತಾನೆ. ಈ ನಡುವೆ ಒಂದು ಲವ್ವು, ಪೊಲೀಸರ ಲಾಠಿಯೇಟು ಎಲ್ಲವನ್ನೂ ಕೃಷ್ಣ ಅನುಭವಿಸುತ್ತಾನೆ. ಇಲ್ಲಿನ ಪೀಕಲಾಟ, ಸಮಸ್ಯೆಗೆ ಸಿಲುಕಿ ಒದ್ದಾಡುವುದೇ ಚಿತ್ರದ ಕಥೆ.

ಆದರೆ ನಿರ್ದೇಶಕರಿಗೆ ಕಥೆಯ ಮೇಲೆ ನಿಯಂತ್ರಣವೇ ಸಿಕ್ಕಿದಂತಿಲ್ಲ. ಯಾವ್ಯಾವುದೋ ದೃಶ್ಯಗಳು, ಏನೇನೋ ಮಾತುಗಳು -- ಇವ್ಯಾವುವೂ ನಗಿಸುವುದಿಲ್ಲ. ಹಾಸ್ಯ ಚಿತ್ರವೆಂದ ಮೇಲೆ ಅಲ್ಲಿ ಟೈಮಿಂಗ್ ಪ್ರಮುಖವಾಗಿರುತ್ತದೆ. ಅದನ್ನು ಆಧರಿಸಿಯೇ ನಗೆ ಉಕ್ಕಿಸಬೇಕು. ಆದರೆ ಪ್ರದೀಪ್ ರಾಜ್ ಅವರಿಗೆ ಆ ಕಲೆ ಸಿದ್ಧಿಸಿದಂತಿಲ್ಲ.

ಹಾಗೆಂದು ಹಾಸ್ಯ ಇಲ್ಲವೇ ಇಲ್ಲವೆಂದಲ್ಲ. ಎದ್ದು ಬಿದ್ದು ನಗುವ ಸನ್ನಿವೇಶಗಳಿಲ್ಲ. ಮತ್ತೆ ಮತ್ತೆ ನೆನಪಿಸಿಕೊಂಡು ನಗುವ ದೃಶ್ಯಗಳಿಲ್ಲ. ಇರುವ ದೃಶ್ಯಗಳಲ್ಲಿ ಲಾಜಿಕ್ ಇಲ್ಲ ಎನ್ನುವುದನ್ನು ಒಪ್ಪಿಕೊಂಡರೂ ಸಹ್ಯವೆನಿಸುವುದಿಲ್ಲ. ಪ್ರಥಮಾರ್ಧವೂ ನಿಧಾನ, ದ್ವಿತೀಯಾರ್ಧವೂ ನಿಧಾನ. ಸಂಭಾಷಣೆಯಲ್ಲಿ ಕಿಕ್ ಇಲ್ಲ.

ಇಡೀ ಚಿತ್ರ ನೋಡಿದಾಗ ನಾಯಕ ರಂಗಾಯಣ ರಘುವೋ ಅಥವಾ ಗಣೇಶ್‌ರವರೋ ಎಂಬ ಶಂಕೆ ಬಂದರೂ ಬರಬಹುದು. ಕೆಲವು ಕಡೆ ಗಣೇಶ್‌ಗಿಂತ ಹೆಚ್ಚು ಸ್ಕೋಪ್ ರಂಗಾಯಣ ರಘುವಿಗೆ ಸಿಕ್ಕಿದೆ. ಆದರೆ ಓವರ್ ಆಕ್ಟಿಂಗ್‌ನಿಂದಾಗಿ ಅದೂ ನೋಡೆಬಲ್ ಅನ್ನಿಸೋದಿಲ್ಲ. ಅವರಿಬ್ಬರ ಜತೆ ಸಾಧು ಕೋಕಿಲಾರನ್ನು ಬಳಸಿಕೊಂಡು ಒಂದೊಳ್ಳೆ ಕಾಂಬಿನೇಷನ್ ಮಾಡಬಹುದಿತ್ತು.

ಗಣೇಶ್ ನಿರ್ದೇಶಕ ನಟನಾಗಿದ್ದಾರೆ. ಆದರೂ 'ರೋಮಿಯೋ' ಇಮೇಜ್ ನಿರೀಕ್ಷೆಯಲ್ಲಿ ಬಂದವರಿಗೆ ನಿರಾಸೆಯಾಗಬಹುದು. ರಂಗಾಯಣ ರಘು ಅಷ್ಟೊಂದು ಮುದ ನೀಡುವುದಿಲ್ಲ. ಸ್ವಲ್ಪ ಜಾಸ್ತಿ ಕುಣಿದಿದ್ದಾರೆ ಅನ್ನೋದನ್ನು ಬಿಟ್ಟರೆ ಇಲ್ಲಿ ನಾಯಕಿ ಪ್ರಣೀತಾ ಲೆಕ್ಕಕ್ಕಿಲ್ಲ.

ಗಿರಿ ಕ್ಯಾಮರಾ ಕೆಲಸ ಕಣ್ಣುಗಳಿಗೆ ಬಣ್ಣ ತುಂಬಿಸುವುದಿಲ್ಲ. ಹರಿಕೃಷ್ಣರದ್ದು ಆರ್ಡಿನರಿ ಸಂಗೀತ. ಕಳಪೆ ಸಂಕಲನ ಎದ್ದು ಕಾಣುವ ಹುಳುಕು. ಇಷ್ಟೆಲ್ಲ ಆದ ಮೇಲೆ ಪ್ರತಿಭಾವಂತ ನಿರ್ದೇಶಕರೊಬ್ಬರು ರೀಲ್ ಸುತ್ತಿದ್ದಾರೆ ಎಂದು ಹೇಳದೆ ವಿಧಿಯಿಲ್ಲ.

Share this Story:

Follow Webdunia kannada