Select Your Language

Notifications

webdunia
webdunia
webdunia
webdunia

ಮಾಸ್ ಪ್ರೇಕ್ಷಕರಿಗೆ ಮಜಾ ನೀಡುವ 'ಮಾದೇಶ'

ರವಿ ಶ್ರೀವತ್ಸ
, ಶನಿವಾರ, 30 ಆಗಸ್ಟ್ 2008 (13:06 IST)
MOKSHA
ಅಲ್ಲಿ ರಕ್ತದೋಕುಳಿ ನಡೆಯುತ್ತದೆ. ಲಾಂಗು-ಮಚ್ಚುಗಳು ತಮ್ಮ ಚಮಕ್ ಏನೆಂದು ತೋರಿಸುತ್ತವೆ. ಒಬ್ಬನನ್ನು ಮತ್ತೊಬ್ಬ ಕೊಲ್ಲುತ್ತಾನೆ. ಆತನನ್ನು ಇನ್ನೊಬ್ಬ ಕೊಲ್ಲುತ್ತಾನೆ. ಹೌದು ಮಾದೇಶ ಚಿತ್ರದುದ್ದಕ್ಕೂ ಇಂತಹ ಮಾಸ್ ದೃಶ್ಯಗಳು ಮಾಸ್ ಪ್ರಿಯರ ಮೈ ನವಿರೇಳಿಸುತ್ತದೆ. ನಿರ್ದೇಶಕರು ಚಿತ್ರವನ್ನು ಅದ್ದೂರಿಯಾಗಿ ತರಬೇಕೆಂದು ಪಟ್ಟ ಶ್ರಮದ ನೆರಳು ಚಿತ್ರದಲ್ಲಿ ಕಾಣುತ್ತದೆ.

ಚಿತ್ರದಲ್ಲಿ ತಂತ್ರಜ್ಞಾನವನ್ನು ನಿರ್ದೇಶಕರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಪೆಟ್ರೋಲ್ ಬಂಕ್‌ನಲ್ಲಿ ಡಾನ್‌ಗಳು ಆಟ್ಯಾಕ್ ಮಾಡುವ ದೃಶ್ಯವನ್ನು ನೋಡಿದಾಗ ಕ್ಯಾಮರಾಮೆನ್ ಅವರ ಅದ್ಬುತ ಕೈ ಚಳಕದ ಅರಿವಾಗುತ್ತದೆ.

ಚಿತ್ರ ನೋಡುತ್ತಿದ್ದಂತೆ ಇದ್ಯಾವುದೋ ತಮಿಳು ಅಥವಾ ತೆಲುಗು ಸಿನಿಮಾವೇ ಎಂಬ ಭಾಸವಾಗುತ್ತದೆ. ಅಷ್ಟು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆದರೆ ಚಿತ್ರದುದ್ದಕ್ಕೂ ಆ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ರವಿ ಶ್ರೀವತ್ಸ ವಿಫಲರಾಗಿದ್ದಾರೆ.

ಎಲ್ಲ ರೌಡಿಸಂ ಚಿತ್ರಗಳಂತೆ ಇಲ್ಲೂ ಕೂಡಾ ನಾಯಕ ತಾನು ಬೆಂಗಳೂರಿನ ಅಂಡರ್‌‌ವರ್ಲ್ಡ್‌‌ಗೆ ಡಾನ್ ಆಗಬೇಕೆಂದು ಬಯಸುತ್ತಾನೆ. ಅದಕ್ಕಾಗಿ ಹಳ್ಳಿಯೊಂದರಲ್ಲಿ ಮಾವುತನ ಮಗನಾಗಿದ್ದ ಮಾದೇಶ (ಶಿವರಾಜ್‌ಕುಮಾರ್) ಬೆಂಗಳೂರಿಗೆ ಬರುತ್ತಾನೆ. ಕೊಲೆ ಮಾಡಿ 14 ವರ್ಷ ಜೈಲುವಾಸ ಅನುಭವಿಸಿ ಹೊರಗೆ ಬಂದು ಇಡೀ ಭೂಗತ ಲೋಕವನ್ನು ಆಳುತ್ತಾನೆ.

ಇದು ಜೋಗಿ ಚಿತ್ರದ ಶೈಲಿಯೇ ಎಂದು ಸಂಶಯ ಬರುವುದು ಸಹಜ. ಆದರೆ ಇಲ್ಲಿ ನಿರ್ದೇಶಕರು ಅದನ್ನು ಭಿನ್ನವಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಇಲ್ಲಿಯೂ ಕೂಡಾ ಮಾಸ್ ಸಿನಿಮಾದಲ್ಲಿರುವ ತಾಯಿ ಸೆಂಟಿಮೆಂಟ್, ಪ್ರೀತಿ, ಐಟಂ ಹಾಡುಗಳು ಇವೆ.

ಚಿತ್ರದುದ್ದಕ್ಕೂ ಕತ್ತರಿಸಿ ಬಿಸಾಕುವ ದೃಶ್ಯಗಳಿಗೆ ಬರವಿಲ್ಲ. ಆದರೆ ಹಾಡುಗಳಿಗೆ ಮಾತ್ರ ಧಮ್ ಇಲ್ಲ. ಹಾಡುಗಳು ಇರಬೇಕಲ್ಲ ಎಂಬ ಕಾರಣಕ್ಕೆ ತುರುಕಿಸಿದ್ದಾರೆ. ಆದರೆ ವಿದೇಶದಲ್ಲಿ ಚಿತ್ರೀಕರಣ ಮಾಡಿದ ರವಿ ಶ್ರೀ ವತ್ಸ ಬರೀ ಹಾಡನ್ನು ಮಾತ್ರ ಶೂಟಿಂಗ್ ಮಾಡಿಲ್ಲ. ಅಲ್ಲಿಯ ಕಾರು, ಪ್ಲ್ಯಾಟ್, ಬಂಗಲೆ ಎಲ್ಲ ಬಳಸಿಕೊಂಡಿರುವುದನ್ನು ಮೆಚ್ಚಬೇಕು.

ಶಿವಣ್ಣನ ಅಭಿನಯದ ಬಗ್ಗೆ ಎರಡು ಮಾತಿಲ್ಲ. ನಾಯಕಿ ಸೋನು ಭಾಟಿಯಾ ಇನ್ನೂ ಪಳಗಬೇಕು. ರವಿಕಾಳೆಯ ಅಭಿನಯವನ್ನು ನಿರ್ದೇಶಕರು ಪೂರ್ಣಪ್ರಮಾಣದಲ್ಲಿ ಬಳಿಸಿ ಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಮಿಂಚಿದ ರಮೇಶ್ ಪಂಡಿತ್ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಚಿತ್ರ ಕ್ಲಾಸ್ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗದಿದ್ದರೂ, ಮಾಸ್ ಪ್ರೇಕ್ಷಕರನ್ನು ಹುಚ್ಚೆಬ್ಬಿಸುವುದಂತೂ ನಿಜ.

Share this Story:

Follow Webdunia kannada