Select Your Language

Notifications

webdunia
webdunia
webdunia
webdunia

ಮಾಗಡಿ ಚಿತ್ರವಿಮರ್ಶೆ; ನಾಯಕನನ್ನೇ ಮರೆಸುವ 'ಕಥೆ'

ಮಾಗಡಿ ಚಿತ್ರವಿಮರ್ಶೆ; ನಾಯಕನನ್ನೇ ಮರೆಸುವ 'ಕಥೆ'
ಚಿತ್ರ: ಮಾಗಡಿ
ತಾರಾಗಣ: ದೀಪಕ್, ರಕ್ಷಿತಾ, ಪದ್ಮಾ ವಾಸಂತಿ
ನಿರ್ದೇಶನ: ಸುರೇಶ್ ಗೋಸ್ವಾಮಿ
ಸಂಗೀತ: ರಾಜೇಶ್ ರಾಮನಾಥ್
SUJENDRA

ಸಿನಿಮಾ ನಿರ್ಮಾಣವೆಂದರೆ ನಿರ್ದೇಶಕರು ಕೇಳಿದಾಗಲೆಲ್ಲ, ಅವರು ಕೇಳುವುದನ್ನೆಲ್ಲ ಕೊಡೋದು ಎಂಬಂತಿದೆ. ಅದೇ ನಿಟ್ಟಿನಲ್ಲಿ ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬರುತ್ತಿವೆ. ಆದರೆ ಮೆಜೆಸ್ಟಿಕ್, ಶಿಷ್ಯದಂತಹ ಹಿಟ್ ಚಿತ್ರಗಳನ್ನು ಕೊಟ್ಟಿರುವ ಬಾಮಾ ಹರೀಶ್‌ರಂತಹ ನಿರ್ಮಾಪಕರು ಕೂಡ ಅದೇ ಸಾಲಿಗೆ ಸೇರುತ್ತಾರೆಂದು ಯಾರೂ ಊಹಿಸಲು ಸಾಧ್ಯವಿಲ್ಲ.

ಮಾಗಡಿಯಲ್ಲಿ ಬೆಳೆದವನು ಮಾಗಡಿ (ದೀಪಕ್). ಆತನಿಗೆ ಒಬ್ಬಳು ಗೆಳತಿ ಪವಿತ್ರಾ (ರಕ್ಷಿತಾ). ಬಾಲ್ಯದಲ್ಲಿ ಕುಂಟೆ ಬಿಲ್ಲೆ ಆಡುತ್ತಿದ್ದವರು. ಪರಿಸ್ಥಿತಿ ಅವರನ್ನು ಬೇರೆ ಮಾಡುತ್ತದೆ. ಪವಿತ್ರಾಳನ್ನು ಆಕೆಯ ಕುಡುಕ ಅಪ್ಪ ವೇಶ್ಯಾವಾಟಿಕೆಗೆ ತಳ್ಳಿರುತ್ತಾನೆ.

ಬಾಲ್ಯದಲ್ಲೇ ಗೆಳತಿಯಿಂದ ಬೇರೆಯಾದರೂ ಮಾಗಡಿಗೆ ಆಕೆಯನ್ನು ಮರೆಯಲು ಸಾಧ್ಯವಾಗಿರುವುದಿಲ್ಲ. ಹೀಗಿದ್ದವನು ಬೆಳೆಯುವುದು ರೌಡಿಯೊಬ್ಬನ ನೆರಳಿನಲ್ಲಿ. ರಕ್ತದ ವಾಸನೆಯ ನಡುವೆಯೂ ಅವನಿಗೆ ಪ್ರೀತಿ ಬೇಕೆನಿಸುತ್ತದೆ. ಪವಿತ್ರಾಳನ್ನು ಹೇಗಾದರೂ ಮಾಡಿ ಹುಡುಕಿಯೇ ತೀರುತ್ತೇನೆ ಎಂದು ಹೊರಟಿರುತ್ತಾನೆ.

ಮಾಗಡಿಗೆ ಆಶ್ರಯ ಕೊಟ್ಟಿದ್ದ ರೌಡಿ, ಆತನನ್ನು ವೇಶ್ಯೆಯೊಬ್ಬಳ ಬಂಗಲೆಗೆ ಕಳುಹಿಸುತ್ತಾನೆ. ಆಕೆಗೆ ರಕ್ಷಣೆ ಕೊಡುವ ಜವಾಬ್ದಾರಿ ಮಾಗಡಿಗೆ ಕೊಡಲಾಗುತ್ತದೆ. ಆದರೆ ಅದೇ ಬಂಗಲೆಯಲ್ಲಿ ತನ್ನ ಪ್ರೀತಿಯ ಹುಡುಗಿ ಪವಿತ್ರಾ ಕೂಡ ಇದ್ದಾಳೆ ಎಂಬ ಸತ್ಯ ಮಾಗಡಿಗೆ ಗೊತ್ತಿರುವುದಿಲ್ಲ.

ಆದರೂ ಪ್ರೀತಿಗೆ ಸಾವಿಲ್ಲ ನೋಡಿ, ಮಾಗಡಿ ಮತ್ತು ಪವಿತ್ರಾ ಒಂದಾಗುತ್ತಾರೆ. ಇದಕ್ಕೆ ಕಾರಣ, ವರನಟ ಡಾ. ರಾಜ್‌ಕುಮಾರ್ ಅವರ ಹಾಡು. ವೇಶ್ಯೆಯ ಮನೆಯಲ್ಲಿ ಸಿಕ್ಕಿದರೂ ಪವಿತ್ರಾ ವೇಶ್ಯೆಯಾಗಿರುವುದಿಲ್ಲ ಎಂದು ಮಾಗಡಿ ನಿರಾಳನಾಗುತ್ತಿದ್ದಂತೆ ಕಥೆ ಪ್ರಪಾತದತ್ತ ಹೋಗುತ್ತದೆ, ದುರಂತವಾಗುತ್ತದೆ.

ಸರಳ ಕಥೆ ಅನ್ನುವುದಕ್ಕಿಂತಲೂ ದುರ್ಬಲ ಕಥೆ ಎಂದರೆ ಅರ್ಥ ಜಾಸ್ತಿ. ನಿರ್ದೇಶಕ ಸುರೇಶ್ ಗೋಸ್ವಾಮಿಗೆ ಇಡೀ ಚಿತ್ರ ಹಿಡಿತಕ್ಕೇ ಸಿಕ್ಕಿಲ್ಲ. ಅದೇನು ಕಥೆಯೋ, ಚಿತ್ರಕಥೆಯೋ, ದೇವರಿಗೇ ಪ್ರೀತಿ. ಇಡೀ ಚಿತ್ರತಂಡವೇ ಅರೆಬೆಂದಂತಿದೆ. ಹಿಂದಿಲ್ಲ, ಮುಂದಿಲ್ಲ. ಯಾವುದೋ ದೃಶ್ಯಗಳು ಬರುತ್ತವೆ, ಹೋಗುತ್ತವೆ. ಒಂದಕ್ಕೊಂದು ಸಂಬಂಧವೇ ಇಲ್ಲವೋ ಅಥವಾ ನಿದ್ದೆ ಮಾಡಿಸಲೆಂದೇ ಇಂತಹ ಚಿತ್ರ ಮಾಡಿದ್ದಾರೋ, ದೇವರಿಗೇ ಗೊತ್ತು!

ಕನಿಷ್ಠ ನಾಯಕ ದೀಪಕ್‌ಗೆ ಇರುವ ಇಮೇಜನ್ನಾದರೂ ಬಳಸಿಕೊಳ್ಳುವ ಯತ್ನವನ್ನು ನಿರ್ದೇಶಕರು ಮಾಡಬಹುದಿತ್ತು. ಅದನ್ನೂ ಮಾಡದೆ ವಿದೇಶಿ ಚಿತ್ರೀಕರಣಕ್ಕವರು ಹೋಗಿದ್ದಾರೆ.

ಇಷ್ಟಾದರೂ ಚಿತ್ರ ಸಹ್ಯ ಎನಿಸಿದರೆ, ಅದಕ್ಕೆ ಕಾರಣ ಖಳನಟರು ಮತ್ತು ರಾಜೇಶ್ ರಾಮನಾಥನ್ ಹಾಡುಗಳು. ದೀಪಕ್ ನಟನೆ ಬಗ್ಗೆ ದೂರುಗಳಿಲ್ಲ, ಆದರೆ ಅವರಿಗೆ ತನ್ನತನವನ್ನು ಪ್ರದರ್ಶಿಸುವ ಅವಕಾಶವೇ ಸಿಕ್ಕಿಲ್ಲ. ನಾಯಕಿ ರಕ್ಷಿತಾ ಗಂಟೆಯ ನಂತರ ಬಂದು ಒಂದೆರಡು ಹಾಡುಗಳಲ್ಲಿ ಕುಣಿದು ಹೋಗುತ್ತಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada