ಚಿತ್ರ : ಮಸ್ತಿ
ನಾಯಕ ನಟ : ಉಪೇಂದ್ರ
ನಟಿ : ಜೆನಿಫರ್
ಆರಂಭದಿಂದಲೇ ತೀವ್ರ ವಿರೋಧಕ್ಕೆ ಕಾರಣವಾಗಿದ್ದ 'ಮಸ್ತಿ' ಚಿತ್ರ ತೆರೆಕಂಡಿದೆ. ಆರಂಭದಲ್ಲಿ 'ಮಾಸ್ತಿ' ಎಂದು ಇದನ್ನು ಹೆಸರಿಸಲಾಗಿತ್ತು. ಇದೊಂದು ಶುದ್ಧ ರೌಡಿಗಳ ಹೊಡೆದಾಟ ಬಡಿದಾಟದ ಕಥೆಯುಳ್ಳ ಚಿತ್ರ.
ಲಾಂಗು-ಮಚ್ಚುಗಳ ಭರಾಟೆಗೆ ಬ್ರೇಕ್ ಬಿದ್ದಿಲ್ಲ. ರೌಡಿಯೋರ್ವ ಸಣ್ಣ ವಿಷಯಕ್ಕೆ ಜಗಳವಾಡಿ ಮುಂದೆ ಅದು ಅತಿರೇಕಕ್ಕೆ ಹೋಗುತ್ತದೆ. ಆಮೇಲೆ ಆತನಿಗೆ ರೌಡಿಸಂನಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸುಗಳೂ ದಾಖಲಾಗುತ್ತವೆ. ಒಮ್ಮೆ ರೌಡಿಸಂಗೆ ಎಂಟ್ರಿ ಪಡ್ಕೊಂಡ್ರೆ ಮತ್ತೆ ಹಿಂದೆ ಬರೋಕೇ ಆಗಲ್ಲ ಎಂಬುದು ಈ ಚಿತ್ರದ ಹೈಲೈಟು.
ಚಿತ್ರದ ಇನ್ನೊಂದು ಭಾಗದಲ್ಲಿ ಇದೇ ರೌಡಿ ಮನಸ್ಸಿಗೆ ಗೌರವಾನ್ವಿತ ಮನೆತನದ ಸಂಪ್ರದಾಯ ಬದ್ಧ ಹೆಣ್ಣುಮಗಳೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಲೌವ್ ಮತ್ತು ಲಾಂಗ್ ಹೇಗೆ ಹೊಂದಾಣಿಕೆಯಾಗುತ್ತದೆ? ಎಂಬುದು ಈ ಚಿತ್ರದ ಸಸ್ಪೆನ್ಸ್.
ಸಾಮಾನ್ಯವಾಗಿ ದರ್ಶನ್, ಶಿವರಾಜ್ ಕುಮಾರ್ ಮಚ್ಚು ಲಾಂಗ್ ಹಿಡಿದಾಗ ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಆದರೆ ಉಪ್ಪಿ ಮಚ್ಚು ಲಾಂಗ್ ಹಿಡಿದಾಗ ಪ್ರೇಕ್ಷಕರು ಒಪ್ಪಿಕೊಂಡಾರೆಯೇ ಎಂಬುದು ಇಲ್ಲಿರುವ ಪ್ರಶ್ನೆ. ಉಪೇಂದ್ರ ನಾಯಕ ನಟನಾಗಿ ವಿಭಿನ್ನ ಅಭಿನಯ ನೀಡಿದ್ದಾರೆ. ಜೋಗಿ ಚಿತ್ರದ ಖ್ಯಾತಿಯ ಜೆನ್ನಿಫರ್ ಕೂಡ ಅಷ್ಟೇ ನೈಜ ಅಭಿನಯವನ್ನು ನೀಡಿದ್ದಾರೆ. ಇದೆಲ್ಲಕ್ಕೂ ಕಳಶವಿಟ್ಟಂತೆ ಗುರುಕಿರಣ್ ಮಸ್ತ್ ಮಸ್ತ್ ಸಂಗೀತವಿದೆ. ಕೋಟಿ ರಾಮು ಚಿತ್ರ ನಿರ್ಮಿಸಿದ್ದಾರೆ. ಆದರೆ ಇತ್ತಿಚೆಗಷ್ಟೇ ಬಿಡುಗಡೆಗೊಂಡ ಉಪ್ಪಿಯ ಪರೋಡಿ ನೆಲಕ್ಕಚ್ಚಿದೆ. ಉಪ್ಪಿ ಟ್ರೆಂಡ್ ಕಡಿಮೆಯಾಯ್ತೇ ? ಗಾಂಧಿ ನಗರ ಈ ಚಿತ್ರದ ಯಶಸ್ಸಿನ ಮೇಲೆ ಉಪ್ಪಿಯ ಬಗ್ಗೆ ಭವಿಷ್ಯ ಹೇಳಲಿದೆ.