Select Your Language

Notifications

webdunia
webdunia
webdunia
webdunia

ಮನತಟ್ಟುವ ಬದುಕಿನ ಕಹಿಸತ್ಯದ ಪ್ರೇಮಕಹಾನಿ

ಪ್ರೇಮ್ಕಹಾನಿ
MOKSHA
ನಿರ್ದೇಶಕ: ಚಂದ್ರು
ತಾರಾಗಣ: ಅಜಯ್, ಶೀಲಾ, ರಂಗಾಯಣ ರಘು
ಸಂಗೀತ: ಇಳಯರಾಜ
ಮೊದಲ ಚಿತ್ರ ತಾಜ್‌ಮಹಲ್‌ನಲ್ಲಿಯೇ ಭರವಸೆ ಮೂಡಿಸಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದ ನಿರ್ದೇಶಕ ಆರ್. ಚಂದ್ರು ಅವರ ಪ್ರೇಂ ಕಹಾನಿ ಕೊನೆಗೂ ಬಿಡುಗಡೆ ಕಂಡಿದೆ. ಅಪಾರ ಪ್ರಚಾರ ಗಿಟ್ಟಿಸಿದ್ದ ಚಂದ್ರು, 'ನಾನು ಚಿತ್ರದ ಬಗ್ಗೆ ಮಾತಾಡಲ್ಲ, ಏನಿದ್ದರೂ ನನ್ನ ಚಿತ್ರ ಮಾತನಾಡಲಿದೆ' ಎಂದು ಹೇಳಿದ್ದಕ್ಕೆ ಸರಿಯಾಗಿ, ಅವರ ಚಿತ್ರ ಪ್ರೇಕ್ಷಕರ ನಿರೀಕ್ಷೆಗೆ ಮಣ್ಣೆರಚದೆ ಮಾತಾಡುವ ಕೆಲಸ ಆರಂಭಿಸಿದೆ.

'ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು...' ಎಂದು ರವಿಚಂದ್ರನ್ ಚಿತ್ರದ ಹಾಡು ಇಲ್ಲಿ ನೆನಪಾಗುವುದು ಸಹಜ. ಶ್ರೀಮಂತ ಮನೆತನದ ಹುಡುಗಿ ಸ್ಲಂ ಹುಡುಗನನ್ನು ಪ್ರೀತಿಸಿದರೆ ಕಣ್ಣೀರೇ ಗತಿಯೇ ಎಂಬ ಮಾತು ಈ ಚಿತ್ರದಲ್ಲಿ ವೇದ್ಯವಾಗುತ್ತದೆ.

ಸ್ಲಂ ನಿವಾಸಿ ಮೂಟೆ (ಅಜಯ್) ಮಂಜ ತನ್ನ ಗೆಳೆಯರೊಂದಿಗೆ ಹುಡುಗಿಯರನ್ನು ಬುಟ್ಟಿಗೆ ಹಾಕಲು ಕಾಲೇಜು, ಪಾರ್ಕು ಎಂದು ಸುತ್ತಾಡುತ್ತಿದ್ದಾಗ ಶ್ರೀಮಂತ ಹುಡುಗಿ ಸೌಮ್ಯಾ (ಸೌಮ್ಯಾ) ಮಂಜನನ್ನು ಪ್ರೀತಿಸುತ್ತಾಳೆ. ಪ್ರೀತಿಗೆ ಕಾರಣ ಬೇಕಿಲ್ಲ ಎಂಬುದು ಫಿಲಾಸಫಿ. ಸ್ಲಂ ಹುಡುಗ ಮಂಜ ಗುಂಗುರು ಗುಂಗುರಾಗಿ ಸಿಗರೇಟ್ ಸೇದುವುದೇ ಸಾಕಾಗುತ್ತದೆ ಆಕೆಗೆ ಲವ್ ಮಾಡಲು. ಅಷ್ಟೇ ಅಲ್ಲ ಆತ ಸ್ಲಂ ವಾಸಿ ಎಂಬ ಕಾರಣಕ್ಕೇ ತಾನು ಲವ್ ಮಾಡುತ್ತೇನೆ ಎಂದು ಸಾರಿ ಹೇಳುತ್ತಾಳೆ. ಇಂತಿಪ್ಪ ಸೌಮ್ಯ ಮಂಜನನ್ನೇ ಮದುವೆಯಾಗಬೇಕೆಂದು ನಿರ್ಧರಿಸುತ್ತಾಳೆ. ಆದರೆ ಶ್ರೀಮಂತ ಅಪ್ಪ ಮಗಳ ಪ್ರೀತಿಗೆ ಅಂದುಕೊಂಡಂತೆ ಸಹಜವಾಗಿಯೇ ಅಡ್ಡ ಬರುತ್ತಾನೆ. ಅಷ್ಟೇ ಅಲ್ಲ, ತಾನು ನೋಡಿದ ಶ್ರೀಮಂತ ಹುಡುಗನೊಬ್ಬನಿಗೆ ಮಗಳನ್ನು ಮದುವೆ ಮಾಡುತ್ತಾನೆ. ಆದರೆ ಮದುವೆಯಾದ ಮೊದಲ ರಾತ್ರಿಯಲ್ಲೇ ಗಂಡನಿಗೆ ತನ್ನ ಪ್ರೀತಿಯ ವಿಷಯ ಅರುಹಿ, ಆತನನ್ನು ಬಿಟ್ಟು ಮಂಜನಿಗಾಗಿ ಓಡಿ ಬರುತ್ತಾಳೆ.
webdunia
MOKSHA


ಇಲ್ಲಿಂದ ನಂತರ ಶುರುವಾಗುತ್ತದೆ ನಿಜ ಬದುಕು. ಮಂಜ ಹಾಗೂ ಸೌಮ್ಯ ಮದುವೆಯಾಗುತ್ತಾರೆ. ಆದರೆ ಜೀವನ ಅವರಂದುಕೊಂಡ ಹಾಗೆ ಸುಲಭವಲ್ಲವಲ್ಲ. ಕಷ್ಟಕೋಟಲೆಯ ಬದುಕೇ ಧಾರಾಳವಾಗುತ್ತದೆ. ಸುಖ ಮರೀಚಿಕೆಯಾಗುತ್ತದೆ.

ಚಿತ್ರದ ಮೊದಲರ್ಧ ಸ್ವಲ್ಪ ಕುಂಟುತ್ತಾ ಸಾಗಿದರೆ, ದ್ವಿತೀಯಾರ್ಧ ವೇಗ ಪಡೆದುಕೊಳ್ಳುತ್ತದೆ. ಮಂಜನಾಗಿ ಅಜಯ್ ತಾಜ್‌ಮಹಲ‌್‌ನ ನಂತರ ಮತ್ತೊಮ್ಮೆ ಅಭಿನಯದಲ್ಲಿ ಮಿಂಚಿದ್ದಾರೆ. ಬ್ಲೇಡು, ಸಿಸ್ಯಾ, ಮಚ್ಚಾ...ಗಳಂತಹ ಸ್ಲಂ ಭಾಷೆಯನ್ನು ಅಜಯ್ ತಮ್ಮ ದೇಹಭಾಷೆಯಾಗಿ ಪರಿವರ್ತಿಸುವ ಮೂಲಕ ಚಿತ್ರದ ತೂಕಕ್ಕೆ ಅಜಯ್ ಮೋಸ ಮಾಡಿಲ್ಲ. ಇನ್ನು, ನಟನೆಯಲ್ಲಿ ಭಾಷೆಯೇ ಗೊತ್ತಿರದ ತೆಲುಗು ನಟಿ ಶೀಲಾ, ಕನ್ನಡಕ್ಕೆ ಹೊಸ ಮುಖವಾದರೂ ಭರವಸೆ ಮೂಡಿಸಿದ್ದಾರೆ. ಶ್ರೀಮಂತ ಹುಡುಗಿಯಾಗಿ ಗ್ಲ್ಯಾಮರ್‌ನಲ್ಲಿ ಮಿಂಚಿದಷ್ಟೇ ಅಭಿನಯಕ್ಕೂ ಗಮನ ನೀಡಿದ್ದು ಎದ್ದು ಕಾಣುತ್ತದೆ. ಆಕೆಯೇ ಅಂದುಕೊಂಡ ಹಾಗೆ ಈ ಚಿತ್ರ ಶೀಲಾಗೆ ಇನ್ನಷ್ಟು ಅವಕಾಶ ತಂದಿತ್ತರೆ ಆಶ್ಚರ್ಯವಿಲ್ಲ. ನಾಯಕಿಯ ಶ್ರೀಮಂತ ಅಪ್ಪನಾಗಿ ರಂಗಾಯಣ ರಘು ಈ ಬಾರಿ ಬೇರೆಯೇ ಅವತಾರದಲ್ಲಿ ಕಂಡರೂ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ.

webdunia
MOKSHA
ಚಿತ್ರದ ಮತ್ತೊಂದು ಹೈಲೈಟ್ ಇಳಯರಾಜ ಅವರ ಸಂಗೀತ. ಲವ್ವಲ್ಲಿ ಬಿದ್ದವ್ನೆ ಹಾಡು ಪ್ರೇಕ್ಷಕರನ್ನು ಸೀಟಿನಿಂದ ಎದ್ದು ಕುಣಿಯುವಂತೆ ಮಾಡುತ್ತದೆ. ಯಾರಿವಳು ಯಾರಿವಳು, ಕೋಗಿಲೆ ಹಾಡು ಬಾ.. ಹಾಡುಗಳು ಇಂಪಾಗಿ ಮನತಣಿಸುತ್ತವೆ. ಚಂದ್ರು ಅವರ ಸಂಭಾಷಣೆಯೂ ಚಿತ್ರಕ್ಕೆ ತೂಕ ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ. ಚಂದ್ರಶೇಖರ್ ಅವರ ಸಿನೆಮಾಟೋಗ್ರಫಿ ಕೈಚಳಕಕ್ಕೆ ಮೆಚ್ಚಬೇಕು.

ನಿರ್ದೇಶಕ ಚಂದ್ರು ಈ ಮೊದಲೇ ಹೇಳಿದಂತೆ ಪ್ರಾಣ ನೀಡುವ ಪ್ರೇಮಿಗಿಂತ ಬದುಕು ನೀಡುವ ಗಂಡ ಮೇಲು ಅಂತ ತಮ್ಮ ಚಿತ್ರದಲ್ಲಿ ಸಾರಿ ಹೇಳುತ್ತಾರೆ. ಅಷ್ಟೇ ಅಲ್ಲ, ಬದುಕಿನ ಕಹಿ ಸತ್ಯಕ್ಕೆ ಹೆದರಿ ಸಾಯಬಾರದು, ಇದ್ದು ಜಯಿಸಬೇಕು ಎಂಬುದನ್ನೂ ಸೂಚ್ಯವಾಗಿ ಹೇಳುತ್ತಾರೆ. ಆ ಮೂಲಕ ಚಿತ್ರಕ್ಕೆ ಉತ್ತಮ ಕ್ಲೈಮ್ಯಾಕ್ಸ್ ನೀಡಿದ್ದಾರೆ ಚಂದ್ರು.

ಆದರೂ, ಸಣ್ಣಪುಟ್ಟ ತಪ್ಪುಗಳು ಇದ್ದೇ ಇವೆ. ಮೊದಲರ್ಧಕ್ಕೆ ಕೊಂಚ ಧಾರಾಳವಾಗಿಯೇ ಕತ್ತರಿ ಪ್ರಯೋಗ ಮಾಡಿದ್ದರೂ ನಡೆಯುತ್ತಿತ್ತು. ವೇಗ ಪಡೆದ ದ್ವಿತೀಯಾರ್ಧ ಹೆಚ್ಚು ಆಪ್ತವಾಗಿ, ಸಹಜವಾಗಿ, ನೈಜ ಜೀವನಕ್ಕೆ ಹಿಡಿದ ಕನ್ನಡಿಯಂತೆ ಭಾಸವಾಗುತ್ತದೆ. ಕೆಲವು ದೃಶ್ಯಗಳಿಗೆ ಪಂಚ್ ಇಲ್ಲದಿದ್ದರೂ, ಕ್ಲೈಮ್ಯಾಕ್ಸ್ ನಿಜಕ್ಕೂ ಮನಮುಟ್ಟುತ್ತದೆ, ಮನತಟ್ಟುತ್ತದೆ. ಹಾಗಾಗಿ ಒಟ್ಟಾರೆಯಾಗಿ, ಅತ್ಯುತ್ತಮ ಸಂಭಾಷಣೆ, ಮನೋಜ್ಞ ಸಿನೆಮ್ಯಾಟೋಗ್ರಫಿ, ಉತ್ತಮ ನಟನೆ, ಸುಮಧುರ ಸಂಗೀತ ಇವೆಲ್ಲವನ್ನು ಹೊಂದಿರುವ ಪ್ರೇಮ್‌ಕಹಾನಿ ನೋಡಬಹುದಾದ ಚಿತ್ರ.

Share this Story:

Follow Webdunia kannada