Select Your Language

Notifications

webdunia
webdunia
webdunia
webdunia

ಮನಕಲಕುವ ನಂದಾದೀಪ

ನಂದಾದೀಪ
, ಸೋಮವಾರ, 4 ಆಗಸ್ಟ್ 2008 (18:24 IST)
MOKSHA
ಚಿತ್ರ: ನಂದಾದೀಪ
ನಿರ್ದೇಶನ: ಶಿವು ಮಠ್
ತಾರಾಗಣ: ದೇವರಾಜ್, ಶ್ರುತಿ, ಮಾಸ್ಟರ್ ಮನೋಜ್, ಸಂಜನಾ ರಾವ್, ಕರಿಬಸವಯ್ಯ

ಭಾರೀ ಸಮಯದ ನಂತರ ಕನ್ನಡದಲ್ಲೊಂದು ಕಣ್ಣೀರಿನ, ಮನಕಲುಕುವ ಚಿತ್ರ ಬಂದಿದೆ. ಮಲತಾಯಿಯಿಂದ ತೊಂದರೆ ಅನುಭವಿಸುವ ಹುಡುಗನ ಸಂಕಷ್ಟದ ಕಥೆಯನ್ನು ಚಿತ್ರ ಒಳಗೊಂಡಿದೆ.

ನಿರ್ಮಾಪಕ ಅಣಜಿ ನಾಗರಾಜ್ ಈ ಹಿಂದೆ ಹೇಳಿದಂತೆ ಚಿತ್ರ ನೋಡಿದವರು ಕಣ್ಣೀರು ಹಾಕಲೇಬೇಕು. ಮಾನವೀಯ ಮೌಲ್ಯಗಳು ಮರೆತು ಹೋಗಿರುವ ಸಂದರ್ಭದಲ್ಲಿ ಅದನ್ನು ನೆನಪಿಸುವ ಪ್ರಯತ್ನವನ್ನು ನಂದಾದೀಪ ಚಿತ್ರದಲ್ಲಿ ಮಾಡಲಾಗಿದೆ.

ಗುರುರಾಜ್ ಹೊಸಕೋಟೆ ಅವರ 'ಕಣ್ಣೀರಿನ ಕತೆ' ಹಾಡಿನಿಂದ ಸ್ಪೂರ್ತಿ ಪಡೆದು ಚಿತ್ರ ಮಾಡಿದ್ದರಿಂದ ಇಲ್ಲಿ ಅಳು ಬರುವುದು ಸಹಜ. ಹಿಂದಿನಿಂದಲೂ ನಡೆದುಕೊಂಡು ಬಂದ ಮಲತಾಯಿ ಸಮಸ್ಯೆಯನ್ನು ನಿರ್ದೇಶಕರು ಇಲ್ಲಿ ಮನೋಜ್ಞವಾಗಿ ತೋರಿಸಿದ್ದಾರೆ. ಆದರೆ ಯಾವ ಊರಲ್ಲಿ ನಡೆಯುತ್ತದೆ ಎಂಬುದನ್ನು ಮಾತ್ರ ಸ್ಪಷ್ಟವಾಗಿ ತೋರಿಸಿಲ್ಲ. ಚಿತ್ರ ನೋಡಿದವರು ತಮ್ಮ ಕರ್ಚೀಫ್ ಹಿಂಡಿಯೇ ಹೊರ ಬರಬೇಕು. ಆ ರೀತಿಯ ಸೆಂಟಿಮೆಂಟ್ ಸನ್ನಿವೇಶಗಳನ್ನು ಇಲ್ಲಿ ಚಿತ್ರಿಸಿದ್ದಾರೆ.

ಮಲತಾಯಿಯ ಕಾಟ ಜೋರಾದಾಗ ಬಾಲಕ ಮರುಗುವ ಪರಿ ನಿಜಕ್ಕೂ ಅದ್ಬುತವಾಗಿ ಮೂಡಿಬಂದಿದೆ. ಹಿಂದಿನ ಕಪ್ಪು ಬಿಳುಪು ಚಿತ್ರಗಳನ್ನು ನಂದಾದೀಪ ನೆನಪಿಸುತ್ತದೆ.

ಒಮ್ಮೊಮ್ಮೆ ಚಿತ್ರ ಇವತ್ತಿಗೆ ಸಮಕಾಲೀನವಾಗಿದೆಯೇ ಎಂಬ ಭಾವನೆ ಕಾಡುತ್ತದೆ. ಆದರೆ ಚಿತ್ರವನ್ನು ನಮ್ಮ ಜೀವನದಲ್ಲಿ ನಡೆಯುವ ಘಟನೆ ಎಂದು ಭಾವಿಸಿದಾಗ ಅದು ಸಮಕಾಲೀನವಾಗಿ ಕಾಣಬಹುದು.

ಆ‌ಕ್ಷನ್ ಚಿತ್ರಗಳಲ್ಲಿ ಮಿಂಚುತ್ತಿದ್ದ ದೇವರಾಜ್ ಇಲ್ಲಿ ಸೆಂಟಿಮೆಂಟ್ ಪಾತ್ರದಲ್ಲೂ ಮಿಂಚಿದ್ದಾರೆ. ಅವರ ಅಭಿನಯ ಮನಸ್ಸಿನಲ್ಲಿ ಉಳಿಯುತ್ತದೆ. ಕಣ್ಣೀರ ತಾರೆ ಎಂದೇ ಖ್ಯಾತ ಶ್ರುತಿ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಎಂಥ ಪಾತ್ರವನ್ನಾದರೂ ನಿಭಾಯಿಸುವ ಸಾಮರ್ಥ್ಯ ಅವರಿಗಿದೆ. ಮಾಸ್ಟರ್ ಮನೋಜ್ ಅಭಿನಯ ಅದ್ಬುತವಾಗಿ ಮೂಡಿಬಂದಿದೆ.

ಪ್ರತಿಯೊಂದು ದೃಶ್ಯದಲ್ಲೂ ಪ್ರೇಕ್ಷಕರ ಹೃದಯ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾನೆ. ಚಿತ್ರದ ಸಂಗೀತ ಹಾಗೂ ಛಾಯಾಗ್ರಹಣ ಚೆನ್ನಾಗಿದೆ.

Share this Story:

Follow Webdunia kannada