Select Your Language

Notifications

webdunia
webdunia
webdunia
webdunia

ಮದರಂಗಿ ಚಿತ್ರವಿಮರ್ಶೆ: ಕನ್ನಡಕ್ಕೆ ಇನ್ನೊಬ್ಬ ಬೊಂಬಾಟ್ ಹೀರೋ!

ಮದರಂಗಿ ಚಿತ್ರವಿಮರ್ಶೆ: ಕನ್ನಡಕ್ಕೆ ಇನ್ನೊಬ್ಬ ಬೊಂಬಾಟ್ ಹೀರೋ!
, ಶನಿವಾರ, 11 ಮೇ 2013 (14:41 IST)
PR
ಚಿತ್ರ: ಮದರಂಗಿ
ತಾರಾಗಣ: ಕೃಷ್ಣ, ನಕ್ಷಾ ಶೆಟ್ಟಿ, ಸುಷ್ಮಾ ರಾಜ್, ವಿನಯಾ ಪ್ರಕಾಶ್
ನಿರ್ದೇಶನ: ಮಲ್ಲಿಕಾರ್ಜುನ ಮುತ್ತಲಗೇರಿ
ಸಂಗೀತ: ಅನೂಪ್ ಸೀಳಿನ್

'ಮದರಂಗಿ' ಹೆಸರಿನಂತೆ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತದೆಯೋ, ಇಲ್ಲವೋ ಎನ್ನುವುದು ಎರಡನೇ ಪ್ರಶ್ನೆ. ಆದರೆ ಅದರ ನಾಯಕ ಕೃಷ್ಣ ಆಲಿಯಾಸ್ ಸುನಿಲ್ ನಾಗಪ್ಪ ಮಾತ್ರ ಬೊಂಬಾಟ್. ನಾಯಕನಾಗಲು ಅನರ್ಹರಾಗಿರುವವರೇ ತುಂಬಿ ಹೋಗಿರುವವರ ನಡುವೆ ನಟನೆಯಲ್ಲೂ ಮಿಂಚು ಹರಿಸಿ ಕೃಷ್ಣ ಬೇರೆಯೇ ಆಗಿ ನಿಲ್ಲುತ್ತಾರೆ. ಆ ಮೂಲಕ ಕೆಲವೇ ಕೆಲವು ಸ್ಫುರದ್ರೂಪಿ ನಾಯಕರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಇನ್ನು ಸಿನಿಮಾದತ್ತ ಹೊರಳೋಣ. ಚಿತ್ರದ ಹೆಸರು 'ಮದರಂಗಿ'. ಒಂದಷ್ಟು ಬಣ್ಣಗಳ ರಂಗು ಕಾಣಬೇಕಿತ್ತು. ಆದರೆ ಬಣ್ಣ ಹಚ್ಚುವಲ್ಲಿ ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ ಸೋತಿದ್ದಾರೆ. ಇದ್ದುದರಲ್ಲಿ ಉತ್ತಮವೆನಿಸಬಹುದಾದ ಕಥೆಯನ್ನು ಅವರು ಆಯ್ದುಕೊಂಡರೂ, ಆರಿಸಿಕೊಂಡಿರುವ ಚಿತ್ರಕಥೆ ಮತ್ತು ನಿರೂಪನೆ ಗಮನ ಸೆಳೆಯುವುದಿಲ್ಲ. ಮದರಂಗಿಯನ್ನು ಇನ್ನಷ್ಟು ಅಂದ ಮಾಡಲು ಇದ್ದ ಅವಕಾಶವನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ.

ಆದರೂ ಅವರು ಪಾತ್ರವರ್ಗದ ಆಯ್ಕೆಯಲ್ಲಿ ಸೋತಿಲ್ಲ. ಈಗಾಗಲೇ ಹಿಟ್ ಆಗಿರುವ ಹಾಡುಗಳು, ನಾಯಕ ಮತ್ತು ನಾಯಕಿಯರ ಕಾರಣದಿಂದ ಚಿತ್ರ ಇಷ್ಟವಾಗುತ್ತದೆ. ಆಗಾಗ ಎದುರಾಗುವ ತಿರುವುಗಳು ಎದ್ದು ಹೋಗದಂತೆ ತಡೆಯುತ್ತವೆ. ಉಳಿದಂತೆ ಹೊಸಬರ ಇತ್ತೀಚಿನ ಸಿನಿಮಾಗಳಲ್ಲಿ ಮಾಮೂಲಿಯಾಗಿ ಹೋಗಿರುವ ಪೋಲಿ ಸಂಭಾಷಣೆಗಳು ಇಲ್ಲೂ ಇವೆ. ಇಲ್ಲಿ ಅದಕ್ಕೊಂದು ಅಪವಾದವೆಂದರೆ, ನಾಯಕಿಯ ಪಾತ್ರವೂ ಇಂತಹ ಸಂಭಾಷಣೆ ಹೇಳುವ ಮೂಲಕ ಕಚಗುಳಿ ಇಡುತ್ತದೆ.

ನಾಯಕ ಕೃಷ್ಣ ಮೊದಲ ಚಿತ್ರದಲ್ಲೇ ಭರವಸೆ ಹುಟ್ಟಿಸಿದ್ದಾರೆ. ಅವರ ಸಂಭಾಷಣೆ ಹೇಳುವ ರೀತಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ಒಂದಷ್ಟು ತಿದ್ದುಪಡಿ ಮಾಡಿಕೊಂಡರಂತೂ ಕೇಳುವುದೇ ಬೇಡ. ನಾಯಕಿಯರಾದ ನಕ್ಷಾ ಶೆಟ್ಟಿ ಮತ್ತು ಸುಷ್ಮಾ ರಾಜ್ ಕೂಡ ತಮ್ಮ ಪಾತ್ರಗಳಿಗೆ ಮೋಸ ಮಾಡಿಲ್ಲ. ಹಾಡುಗಳಲ್ಲಿ, ನಟನೆಯಲ್ಲಿ ಇಷ್ಟವಾಗುತ್ತಾರೆ.

ಡಾರ್ಲಿಂಗ್ ಡಾರ್ಲಿಂಗ್, ಸಾವಿರದ ಸಾವಿರದ ಆಸೆಯ ಅವಸರಕೆ ಹಾಡುಗಳು ಸಂಗೀತದಿಂದ ಮಾತ್ರವಲ್ಲ, ಸಾಹಿತ್ಯದಿಂದಲೂ ಕೇಳಬೇಕೆನಿಸುತ್ತವೆ. ಈ ಹಾಡುಗಳ ಮೂಲಕ ಅನೂಪ್ ಸೀಳಿನ್ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಹೆಸರನ್ನೂ ಮಾಡಿದ್ದಾರೆ. ಹೊಸ ಛಾಯಾಗ್ರಾಹಕ ಗಿರೀಶ್ ಭರವಸೆಯ ಸೆಳೆಯನ್ನಷ್ಟೇ ಮೂಡಿಸಿದ್ದಾರೆ.

ಹೊಸಬರ ಚಿತ್ರವಾಗಿರುವುದರಿಂದ (ನಿರ್ದೇಶಕರಿಗೆ ಇದು ಎರಡನೇ ಚಿತ್ರ) ಬೆಟ್ಟದ ನಿರೀಕ್ಷೆ ಬೇಡ. ಒಂದೊಳ್ಳೆ ನಾಯಕ ಎಂಟ್ರಿಯಾಗಿದೆ, ಸುಂದರ ಹಾಡುಗಳಿವೆ, ಮಾಮೂಲಿ ಕಥೆಯಿದೆ. ಹಾಗಾಗಿ ಚಿತ್ರಮಂದಿರದತ್ತ ಹೆಜ್ಜೆ ಹಾಕುವುದು ತೀರಾ ವ್ಯರ್ಥವೇನೂ ಆಗುವ ಸಾಧ್ಯತೆಗಳು ಕಡಿಮೆ.

Share this Story:

Follow Webdunia kannada