Select Your Language

Notifications

webdunia
webdunia
webdunia
webdunia

ಮತ್ತೆ ಮೋಡಿ ಮಾಡುವ ಸುದೀಪ್ ರಮ್ಯಾ ಜೋಡಿ

ಮತ್ತೆ ಮೋಡಿ ಮಾಡುವ ಸುದೀಪ್ ರಮ್ಯಾ ಜೋಡಿ
PR
ರಮ್ಯಾ ಹಾಗೂ ಸುದೀಪ್ ಜೋಡಿ ಮತ್ತೆ ಒಂದಾಗಿದೆ. ಮೋಡಿಯನ್ನೂ ಮಾಡಿದೆ ಎನ್ನಲಡ್ಡಿಯಿಲ್ಲ. ಪ್ರೇಕ್ಷಕ ಏನನ್ನು ಬಯಸಿ ಥೇಟರ್ ಒಳಗೆ ಹೋಗುತ್ತಾನೊ ಅದೆಲ್ಲವೂ ಈ ಚಿತ್ರದಲ್ಲಿ ಸಿಗುತ್ತದೆ. ಚಿತ್ರ ಯಾವ ರೀತಿಯಲ್ಲೂ ಇದು ಇಂಥದ್ದೇ ಕೆಟಗರಿ ಚಿತ್ರ ಎಂದು ಹೇಳಲು ಸಾಧ್ಯವಿಲ್ಲ. ಜೊತೆಗೆ ಮಾಮೂಲಿ ನಿರೂಪಣೆಯೂ ಇಲ್ಲ. ಆದರೆ ನಿಮ್ಮನ್ನು ಕುರ್ಚಿ ತುದಿಗೆ ತಂದು ಕೂಡಿಸುವುದನ್ನು ಮರೆಯುವುದಿಲ್ಲ.

ಅಂದಹಾಗೆ ಇದು ತಮಿಳಿನ ಚಿತ್ರ ಪೇಸರದಿ ಚಿತ್ರದ ರಿಮೇಕು. ಚಿತ್ರದಲ್ಲಿ, ನಾಯಕ ಕಿಚ್ಚ ಅಲಿಯಾಸ್ ಕೃಷ್ಣಮೂರ್ತಿಗೆ ಕೆಲಸ ಇರುವುದಿಲ್ಲ. ಮನೆಯನ್ನು ನಡೆಸುವ ಜವಾಬ್ದಾರಿಗಾಗಿ ರೌಡಿಯೊಬ್ಬ ಹೇಳಿದ ಕೆಲಸ ಮಾಡುತ್ತಿರುತ್ತಾನೆ. ಒಮ್ಮೆ ಈತ ಹೊಡೆದಾಡುವ ಹೊತ್ತಿನಲ್ಲಿ ನಾಯಕಿ ಸಿಗುತ್ತಾಳೆ. ಆಕೆಗೆ ಸಮಾಜ ಸೇವೆ ಮಾಡುವ ಹುಚ್ಚು. ಒಂದೊಂದು ದಿಕ್ಕಿನ ಇಬ್ಬರೂ ಒಂದಾಗುತ್ತಾರೆ. ಆತ ಆಕೆಗಾಗಿ ರೌಡಿಸಂ ಬಿಟ್ಟು ಒಳ್ಳೆಯ ಹಾದಿ ಹಿಡಿಯುತ್ತಾನೆ. ಆಕೆಯೂ ತನ್ನ ತಂದೆಗೆ ಹೇಳಿ ಈತನನ್ನು ಮದುವೆಯಾಗಲು ಮನಸು ಮಾಡುತ್ತಾಳೆ. ಆಗ ಚಿತ್ರಕ್ಕೆ ಮಹತ್ತರ ತಿರುವು ಸಿಗುತ್ತದೆ.

ಎಲ್ಲೋ ಕೇಳಿದ ಕಥೆಯಂತೆ ಭಾಸವಾಗುತ್ತದೆಯೇ? ಹೌದು. ಈ ಮಾದರಿಯ ಸಾಕಷ್ಟು ಚಿತ್ರ ಕನ್ನಡದಲ್ಲಿ ಬಂದು ಹೋಗಿದೆ. ಆದರೆ ಈ ಚಿತ್ರದಲ್ಲಿ ಇದೇ ಹಳಸಲು ಊಟವನ್ನೇ ವ್ಯವಸ್ಥಿತ ಚಿತ್ರಾನ್ನವಾಗಿ ನೀಡಲಾಗಿದೆ.

webdunia
PR
ಚಿತ್ರ ಸಲೀಸಾಗಿ ಸಾಗುವುದಿಲ್ಲ. ಸಾಕಷ್ಟು ಟ್ವಿಸ್ಟ್‌ಗಳಿವೆ. ಸುಗಮವಾಯಿತು ಎನ್ನುವಾಗ ಒಂದು ಘಟನೆ ನಡೆಯುತ್ತದೆ. ಪೊಲೀಸರು, ಮೈ ಮಾರಿಕೊಳ್ಳುವ ಹೆಂಗಸರ ಮನೆಯನ್ನು ರೇಡ್ ಮಾಡಿದಾಗ ಅಲ್ಲಿ ನಾಯಕ ಇರುತ್ತಾನೆ. ಅಲ್ಲಿಂದ ಹೊರಬರುವ ಸಮಯದಲ್ಲಿ ಆತನನ್ನು ನಾಯಕಿ ನೋಡುತ್ತಾಳೆ!

ಅಲ್ಲಿಗೆ ನಾಯಕಿ ಆತನಿಂದ ದೂರವಾಗುತ್ತಾಳೆ. ಈ ನಡುವೆ ನಾಯಕಿಯ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನಾಯಕ ಮತ್ತೆ ರೌಡಿ ಗ್ಯಾಂಗ್ ಸೇರಿ ಅವರೊಂದಿಗೆ ಕೆಲಸಕ್ಕೆ ಇಳಿಯುತ್ತಾನೆ. ಮುಂದೇನಾಗುತ್ತದೆ ಎನ್ನುವುದನ್ನು ತೆರೆ ಮೇಲೆ ನೋಡಿ ಆನಂದ ಪಡಿ.

ಕೇಳಲು ನಿಮಗೆ ಇಷ್ಟೇ ಅನಿಸಿದರೂ ಅದರಲ್ಲಿಯೇ ನಿರ್ದೇಶಕ ಗುರುದತ್ ಹೊಸದೊಂದು ಲೋಕವನ್ನು ತೋರಿಸಿದ್ದಾರೆ. ಕೆಲವು ತಿರುವುಗಳು ಕಥೆಯ ಕುತೂಹಲ ಕಾದುಕೊಳ್ಳುತ್ತವೆ. ಸುದೀಪ್ ಯಾವ ಪಾತ್ರೆಯಲ್ಲಿ ಹಾಕಿದರೂ ಅದಕ್ಕೆ ಹೊಂದಿಕೊಳ್ಳುತ್ತಾರೆ ಎನ್ನುವುದ ಈ ಚಿತ್ರದಲ್ಲೂ ಸಾಬೀತಾಗಿದೆ. ರಮ್ಯಾ ಕೂಡ ತಾನೇನು ಕಮ್ಮಿ ಎಂದು ಸೆಡ್ಡು ಹೊಡೆದಂತೆ ನಟಿಸಿದ್ದಾರೆ. ರಮ್ಯಾ ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದು ಅವರ ಪಾತ್ರಕ್ಕೆ ನಿಜಕ್ಕೂ ರಿಯಲಿಸ್ಟಿಕ್ ಟಚ್ ತಂದುಕೊಟ್ಟಿದೆ. ಸುರೇಶ್ ಚಂದ್ರ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕ್ಯಾಮೆರಾ ಕೆಲಸ, ಸಂಗೀತ, ಹಾಡಿನ ಬಗ್ಗೆ ವಿವರಿಸಿ ಹೇಳಬೇಕಾಗಿಲ್ಲ ಬಿಡಿ.

Share this Story:

Follow Webdunia kannada