Select Your Language

Notifications

webdunia
webdunia
webdunia
webdunia

'ಮತ್ತೆ ಮುಂಗಾರು': ಕನ್ನಡಕ್ಕೊಂದು ಉತ್ತಮ ಚಿತ್ರದ ಉಡುಗೊರೆ

'ಮತ್ತೆ ಮುಂಗಾರು': ಕನ್ನಡಕ್ಕೊಂದು ಉತ್ತಮ ಚಿತ್ರದ ಉಡುಗೊರೆ
PR
ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುವುದೇ ಇಲ್ಲ ಎಂದು ಹೇಳುವವರ ಬಾಯಿ ಮುಚ್ಚಿಸುವಂತೆ ತೆರೆಗೆ ಬಂದಿದೆ ಮತ್ತೆ ಮುಂಗಾರು. ಮುಂಗಾರು ಮಳೆ, ಮೊಗ್ಗಿನ ಮನಸು ಎಂಬ ಎರಡು ಉತ್ತಮ ಚಿತ್ರಗಳನ್ನು ನೀಡಿದ ನಿರ್ಮಾಪಕ ಇ.ಕೃಷ್ಣಪ್ಪ ಅವರು ಮೂರನೇ ಬಾರಿಯೂ ಗೆದ್ದಿದ್ದಾರೆ. ಕಲಾತ್ಮಕ ಅಂಶಗಳನ್ನು ಒಳಗೊಂಡು ತೆರೆಕಂಡಿರುವ 'ಮತ್ತೆ ಮುಂಗಾರು' ನಿಜಕ್ಕೂ ನೋಡಲು ಯೋಗ್ಯ ಚಿತ್ರ.

ಚಿತ್ರದಲ್ಲಿ ಶ್ರೀಮಂತಿಕೆ ಇದೆ. ಜನರನ್ನು ಸೆಳೆದಿಡುವ ಶಕ್ತಿ ಇದೆ. ಅಗತ್ಯ ಎಲ್ಲಾ ಅಂಶಗಳನ್ನೂ ಒಳಗೊಂಡ ಪರಿಪೂರ್ಣ ಚಿತ್ರ ಅನ್ನಲು ಯಾವ ಸಂಶಯವೂ ಇಲ್ಲ. ಚಿತ್ರದುದ್ದಕ್ಕೂ ಭಾವನೆಗಳ ಮೆರೆದಾಟ ಕಾಣಬಹುದು. ಪ್ರೀತಿ- ಪ್ರೇಮದ ಅಂಶಗಳಿದ್ದರೂ ಭಾವನೆಗಳ ನಡುವೆ ಅವು ಗೌಣವಾಗಿ ಬಿಡುತ್ತದೆ. ಸಂಭಾಷಣೆ ಉತ್ತಮವಾಗಿದ್ದು, ನಿರ್ದೇಶನದಲ್ಲಿ ಉತ್ತಮ ಹಿಡಿತ ಚಿತ್ರವನ್ನು ಗೆಲ್ಲಿಸಿದೆ.

ನಿರ್ದೇಶಕರಾಗಿ ದ್ವಾರ್ಕಿ ರಾಘವ ಗೆದ್ದಿದ್ದಾರೆ. ಶ್ರೀನಗರ ಕಿಟ್ಟಿ ಮತ್ತೊಂದು ಅದ್ಬುತ ಅಭಿನಯ ನೀಡಿದ್ದಾರೆ. ಸುಂದರನಾಥ್ ಸುವರ್ಣ ಛಾಯಾಗ್ರಹಣ ಎಕ್ಸಲೆಂಟ್. ಯಾವುದೇ ಕಮರ್ಶಿಯಲ್ ಟಚ್ ಇಲ್ಲದೇ ಪ್ರೇಕ್ಷಕರ ಮನಗೆಲ್ಲುವ ಹೆಗ್ಗಳಿಕೆ ಚಿತ್ರದ್ದು.
webdunia
PR


ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಸ್ತ ನಾರಾಯಣ ಮಂಡಗದ್ದೆ ಅವರ ಜೀವನದ ನಿಜ ಕಥೆ ಇದು. ಪ್ರಕೃತಿ ವಿಕೋಪಕ್ಕೆ ಸಿಕ್ಕ ದೋಣಿಯೊಂದು ಪಾಕಿಸ್ತಾನದ ಸರಹದ್ದು ದಾಟಿ ಅಲ್ಲಿನ ಸರಕಾರದ ಕೈಗೆ ಸಿಕ್ಕಿ ಬೀಳುವ 1980ರ ಸಮಯದ ಕಥೆ ಈ ಚಿತ್ರದ್ದು. ಪಾಕಿಸ್ತಾನದ ಕತ್ತಲೆ ಕೂಪದಲ್ಲಿ 21 ವರ್ಷಗಳ ಕಾಲ ಜೀವ ಸವೆಸಿ ದೇಶಕ್ಕೆ ಮರಳುವ ವ್ಯಕ್ತಿ ನಾರಾಯಣ ಅವರು ಅಲ್ಲಿ ಕಳೆದ ದಿನವನ್ನು ಚಿತ್ರವಾಗಿಸಲಾಗಿದೆ. ಹಾಗಾಗಿ ಸಾರ್ವಭೌಮ, ಸೈನಿಕ ಚಿತ್ರಗಳ ನಂತರ ಮತ್ತೊಂದು ಅಪರೂಪದ ದೇಶಭಕ್ತಿಯ ಹೂರಣವಿರುವ ಚಿತ್ರವಿದು.

ಪಾಕಿಸ್ತಾನದಲ್ಲಿ ಭಾರತೀಯರಿಗೆ ನೀಡುವ ಶಿಕ್ಷೆಯ ವಿಧಾನವನ್ನು ಇಲ್ಲಿ ತೋರಿಸಲಾಗಿದೆ. ಚಿತ್ರಕ್ಕೆ ಸಿಕ್ಕ ಬಿಗಿಯಾದ ನಿರೂಪಣೆ ಚಿತ್ರವನ್ನು ಗೆಲ್ಲಿಸಿದೆ. ನಾಣಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ತಾರಾ ಪತ್ರದಲ್ಲಿ ರಚನಾ ಮಲ್ಹೋತ್ರಾ ಉತ್ತಮವಾಗಿ ನಟಿಸಿದ್ದಾರೆ ಅನ್ನದಿದ್ದರೆ ಅಪರಾಧವಾಗುತ್ತದೆ. ನಾಣಿಯ ಪಾತ್ರಕ್ಕೆ ಕಿಟ್ಟಿ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಚಿತ್ರದಲ್ಲಿ ನೀನಾಸಂ ಅಶ್ವತ್ಥ್ ಅವರ ಅಭಿನಯ ತೀರಾ ಗಮನ ಸೆಳೆಯುತ್ತದೆ. ಇವರು ಇಕ್ಬಾಲ್ ಪಾತ್ರದಲ್ಲಿ ಅಪರೂಪದ ನಟನೆ ನೀಡಿದ್ದಾರೆ. ಪಾಕ್ ಯೋಧನಿಂದ ನಾಲಗೆ ಕತ್ತರಿಸಿಕೊಂಡು ಯಾತನೆ ಅನುಭವಿಸುವ ಸನ್ನಿವೇಶ ನಿಜಕ್ಕೂ ಅವಿಸ್ಮರಣೀಯ. ಇವರ ಜತೆ ಏಣಗಿ ನಟರಾಜ್ ಹಾಗೂ ರವಿಶಂಕರ್ ಅಭಿನಯ ಉತ್ತಮವಾಗಿದೆ.

ಇವೆಲ್ಲ ಹೊರತುಪಡಿಸಿದರೆ, ಕೊಂಚ ಸಣ್ಣಪುಟ್ಟ ದೋಷಗಳೂ ಇಲ್ಲದಿಲ್ಲ. ಕ್ಲೈಮ್ಯಾಕ್ಸನ್ನು ಇನ್ನಷ್ಟು ಉತ್ತಮವಾಗಿ ಮಾಡಬಹುದಿತ್ತು. ಆಗ ಚಿತ್ರಕ್ಕಿನ್ನೂ ಗಟ್ಟಿತನ ಬರುತ್ತಿತ್ತು. ಚಿತ್ರದ ಆರಂಭದಲ್ಲಿದ್ದ ಹಿಡಿತ ಕೊನೆಯ ಹೊತ್ತಿಗೆ ಜಾರಿದಂತೆ ಭಾಸವಾಗುತ್ತದೆ. ಆದರೂ ಈ ಸಣ್ಣಪುಟ್ಟ ತಪ್ಪನ್ನು ಬಿಟ್ಟರೆ, ದ್ವಾರ್ಕಿ ರಾಘವ ಗೆದ್ದಿದ್ದಾರೆ. ನಿಜಕ್ಕೂ ಯಾವುದೇ ಕಾರಣಕ್ಕೂ ಮಿಸ್ ಮಾಡದೆ ನೋಡಬೇಕಾದ ಚಿತ್ರವಿದು.

Share this Story:

Follow Webdunia kannada