Select Your Language

Notifications

webdunia
webdunia
webdunia
webdunia

ಭಾವನಾತ್ಮಕ ಅಭಿನಯದ ಅರಮನೆ

ಅರಮನೆ
MOKSHA
ಚಿತ್ರ: ಅರಮನೆ

ಗಣೇಶ್ ಅಭಿನಯದ 'ಅರಮನೆ' ಚಿತ್ರ ಬಿಡುಗಡೆಯಾಗಿದೆ. ಗಣೇಶ್ ಮದುವೆಯಾದ ಮೇಲೆ ಬಿಡುಗಡೆಯಾಗುತ್ತಿರುವ ಚಿತ್ರ ಅರಮನೆ. ಚಿತ್ರದ ಬಗ್ಗೆ ಸಹಜವಾಗಿಯೇ ಜನರಲ್ಲಿ ಕುತೂಹಲ ಮೂಡಿತ್ತು. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅರಮನೆ ಚಿತ್ರದಲ್ಲಿ ಗಣೇಶ್ ಅಭಿನಯ ಎಲ್ಲ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾಗಿದೆ. ಬೇರೆ ಚಿತ್ರಗಳಲ್ಲಿ ಅದೇ ತನ್ನ ಮುಂಗಾರು ಮಳೆ ಧಾಟಿಯ ಒಂದಷ್ಟು ಹಾಸ್ಯಭರಿತ ಡೈಲಾಗ್‌ಗಳನ್ನು ಹೇಳಿ ಅಭಿಮಾನಿಗಳ ಮನಕ್ಕೆ ಲಗ್ಗೆ ಇಡುತ್ತಿದ್ದ ಗಣೇಶ್‌ರನ್ನು ವಿಭಿನ್ನವಾಗಿ ಅನಾವರಣಗೊಳಿಸುವ ಪ್ರಯತ್ನ ಅರಮನೆಯಲ್ಲಿ ನಡೆದಿದೆ.

ನಿರ್ದೇಶಕ ನಾಗಶೇಖರ್ ಮೊದಲ ಪ್ರಯತ್ನವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರಕಥೆಯನ್ನು ತಮ್ಮದೇ ಆದ ಹೊಸ ಶೈಲಿಯಲ್ಲಿ ನಿರೂಪಿಸಿದ್ದಾರೆ.

ಛಾಯಾಗ್ರಾಹಕನಾದ ಅರುಣ್ (ಗಣೇಶ್) ದೊಡ್ಡ ಬಂಗಲೆಯಲ್ಲಿ ಏಕಾಂಗಿಯಾಗಿ ಕುಡಿಯುತ್ತಾ ಕುಳಿತಿರುವ ರಾಜಶೇಖರ್ (ಅನಂತ್‌ನಾಗ್)ರನ್ನು ಭೇಟಿಯಾಗುತ್ತಾನೆ. ಪತ್ನಿ ತೀರಿದ ಎರಡೇ ತಿಂಗಳಲ್ಲಿ ಮತ್ತೊಂದು ಮದುವೆಗೆ ಮುಂದಾದ ತನ್ನ ದುರ್ಬುದ್ದಿಯನ್ನು ವಿರೋಧಿಸಿ ತನ್ನಿಂದ ದೂರವಾದ ಮಗ, ಮಗಳು ಹಾಗೂ ಅಳಿಯನನ್ನು ಮತ್ತೆ ತನ್ನೊಂದಿಗೆ ಒಂದುಗೂಡಿಸುವಂತೆ ರಾಜಶೇಖರ್ ಛಾಯಾಗ್ರಾಹಕ ಅರುಣನ ಸಹಾಯ ಕೇಳುತ್ತಾರೆ. ತನ್ನ ಜಾಣ್ಮೆಯಿಂದ ಅರುಣ್ ಅವರನ್ನೆಲ್ಲ ಮತ್ತೆ ಆ ಭವ್ಯವಾದ ಅರಮನೆಯಲ್ಲಿ ಒಂದುಗೂಡಿಸುತ್ತಾನೆ. ಅದು ಹೇಗೆಂದು ತೆರೆಯ ಮೇಲೆ ನೋಡಿ ಆನಂದಿಸಿ.

ಗಣೇಶ್ ಒಬ್ಬ ಜವಾಬ್ದಾರಿಯುತ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ವಿದೇಶಿ ದಂಪತಿಯ ಮಗು ತನ್ನ ಕ್ಯಾಮರಾಗೆ ಆಸೆ ಪಟ್ಟಾಗ ಅದನ್ನು ಆ ಮಗುವಿಗೆ ಕೊಡುವ ದೃಶ್ಯ ಚಿತ್ರದಲ್ಲಿ ಗಣೇಶ್ ಭಾವನಾತ್ಮಕ ಅಭಿನಯಕ್ಕೆ ಹಿಡಿದ ಕನ್ನಡಿ. ಇಲ್ಲಿ ಗಣೇಶ್ ತನ್ನ ಗಣೇಶಿಸಂನಿಂದ ಹೊರ ಬಂದು ಸ್ವಲ್ವ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ಗಣೇಶ್‌ರ ಕ್ರೇಜಿ ಕಿಚಡಿ ಡೈಲಾಗ್ಗಳನ್ನು ಬಯಸಿದ ಅಭಿಮಾನಿಗಳಿಗೆ ಇಲ್ಲಿ ನಿರಾಶೆ ಉಂಟಾಗುತ್ತದೆ. ಪದೇ ಪದೇ ಬರುವ ಒಂದೇ ರೀತಿಯ ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರಿಗೆ ಕಿರಿಕ್ ಉಂಟು ಮಾಡುತ್ತವೆ.

ಶ್ರೀಮಂತ ಕುಡುಕನ ಪಾತ್ರದಲ್ಲಿ ಅನಂತ್‌ನಾಗ್ ಅಭಿನಯ ಅದ್ಬುತವಾಗಿದೆ. ನಾಯಕಿಯಾಗಿ ರೋಮಾಳ ನಟನೆ ಏನೂ ಸಾಲದು. ತೇಜಸ್ವಿನಿ ಬಂದು ಹೋಗುತ್ತಾಳೆ. ಗುರುಕಿರಣ್ ಸಂಗೀತ ಚಿತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕೆಲವು ಟ್ಯೂನ್ಗಳನ್ನು ಕೇಳುತ್ತಿದ್ದಂತೆ ಹಿಂದಿನ ಯಾವುದೋ ಚಿತ್ರಗಳ ಟ್ಯೂನ್ನತ್ತ ಮನಸ್ಸು ಜಾರುತ್ತದೆ. ಸುಂದರ್ ರಾಜ್ ಸಂಕಲನ ಸಾಧಾರಣವಾಗಿದೆ.

ಚಿತ್ರದ ಬಗ್ಗೆ ಒಟ್ಟಾಗಿ ಹೇಳುವುದಾದರೆ: "ಒಮ್ಮೆ ಹೋಗಿ ನೋಡಿ ಬರಬಹುದು ಅಷ್ಟೇ" ಎಂದು ಹೇಳಬಹುದು.

Share this Story:

Follow Webdunia kannada