Select Your Language

Notifications

webdunia
webdunia
webdunia
webdunia

ಬ್ರೇಕಿಂಗ್ ನ್ಯೂಸ್ ವಿಮರ್ಶೆ: ಲೋಕವೇ ಹೇಳಿದ ಮಾತಿದು

ಬ್ರೇಕಿಂಗ್ ನ್ಯೂಸ್ ವಿಮರ್ಶೆ: ಲೋಕವೇ ಹೇಳಿದ ಮಾತಿದು
ಚಿತ್ರ: ಬ್ರೇಕಿಂಗ್ ನ್ಯೂಸ್
ತಾರಾಗಣ: ಅಜಯ್ ರಾವ್, ರಾಧಿಕಾ ಪಂಡಿತ್, ಅನಂತ್‌ನಾಗ್, ರಂಗಾಯಣ ರಘು
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಸ್ಟೀಫನ್ ಪ್ರಯೋಗ್
SUJENDRA

ನವಿರು ಪ್ರೇಮಕಥೆಗಳನ್ನೇ ಆರಿಸಿಕೊಳ್ಳುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚೆಗೆ ಸಾಮಾಜಿಕ ಸಮಸ್ಯೆಗಳನ್ನೇ ಮುಂದಿಡಲು ಯತ್ನಿಸುತ್ತಿದ್ದಾರೆ. ಅಂತಹ ಒಂದು ಯತ್ನ 'ಬ್ರೇಕಿಂಗ್ ನ್ಯೂಸ್'. ಅವರಿಲ್ಲಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ತೋರಿಸಲು ಹೊರಟಿದ್ದಾರೋ ಅಥವಾ ಬ್ರೇಕಿಂಗ್ ನ್ಯೂಸ್ ಕೊಡಬೇಕಾದ ಒತ್ತಡದಲ್ಲಿರುವ ಪತ್ರಕರ್ತರ ಮೇಲೆ ಸೇಡು ತೀರಿಸಿಕೊಂಡಿದ್ದಾರೋ ಎನ್ನುವುದು ಗೊತ್ತಾಗುತ್ತಿಲ್ಲ.

ಅರ್ಜುನ್ (ಅಜಯ್ ರಾವ್) ಖಾಸಗಿ ಟಿವಿ ಚಾನೆಲ್‌ವೊಂದರ ರಿಪೋರ್ಟರ್. ಹಿಂದೆ ಮುಂದೆ ನೋಡದೆ ಬ್ರೇಕಿಂಗ್ ನ್ಯೂಸ್ ಕೊಡುವ ಧಾವಂತ ಆ ಟಿವಿ ಚಾನೆಲ್‌ಗೆ. ಅದಕ್ಕೆ ಹೊಂದುವಂತಹ ನೌಕರರಿಗೆ ಮಾತ್ರ ಅಲ್ಲಿ ಕೆಲಸ. ಮಸಾಲೆ ಸುದ್ದಿ ಕೊಡಲು ಸಾಧ್ಯವಾಗದೇ ಹೋದರೆ ಗೇಟ್ ಪಾಸ್.

ಹೀಗಿರುವಾಗ ಅರ್ಜುನ್ ಎಕ್ಸ್‌ಕ್ಲೂಸಿವ್ ಸುದ್ದಿ ಕೊಡುವಲ್ಲಿ ಎಡವುತ್ತಾನೆ. ಕೆಲಸವನ್ನೂ ಕಳೆದುಕೊಳ್ಳುತ್ತಾನೆ. ಆದರೆ ಲೋಕಾಯುಕ್ತ ಸೋಮಶೇಖರ್ (ಅನಂತ್ ನಾಗ್) ಪುತ್ರಿ ಶ್ರದ್ಧಾ (ರಾಧಿಕಾ ಪಂಡಿತ್) ಅಪಹರಣ ಕೇಸ್‌ನ ಸುದ್ದಿ ಕೊಡುವುದರಲ್ಲಿ ಈತನೇ ಮುಂದು. ಯಾರಿಗೂ ಈ ಸುದ್ದಿ, ಫಾಲೋ-ಅಪ್ ಸಿಗುವುದೇ ಇಲ್ಲ. ಇದಕ್ಕೆ ಕಾರಣ, ಅಪಹರಣದಲ್ಲಿ ಸ್ವತಃ ಅರ್ಜುನ್ ಪಾಲಿರುವುದು. ಈ ನಡುವೆಯೇ ಪ್ರೀತಿ ಹುಟ್ಟಿಕೊಂಡು ಕೊನೆಗೆ ಅವಾರ್ಡಿನಲ್ಲಿ ಲೀನವಾಗುತ್ತದೆ. ಇಂದು ಇಡೀ ಚಿತ್ರದ ಒಟ್ಟು ಕಥೆಯ ಸಾರಾಂಶ.

ಮೇಸ್ಟ್ರು ಕಥೆಯನ್ನೇನೋ ಚೆನ್ನಾಗಿಯೇ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಎಲ್ಲೋ ಹಳಿ ತಪ್ಪಿರುವುದು ಸ್ಪಷ್ಟ. ನಿರೂಪನೆಯಲ್ಲಿ ಯಾವ ಹೊಸತನವೂ ಕಾಣುವುದಿಲ್ಲ. ಎಲ್ಲವೂ ಪ್ರೇಕ್ಷಕರ ನಿರೀಕ್ಷೆಯಂತೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಒಂದು ರೀತಿಯಲ್ಲಿ ಹೇಳುವುದಾದರೆ, ನಾಗತಿಹಳ್ಳಿ ಶೈಲಿಯೇ ಮಾಯವಾಗಿದೆ. ಅಂತಹ ನಿರೀಕ್ಷೆ ಇಟ್ಟುಕೊಂಡು ಹೋದವರಿಗೆ ನಿರಾಸೆ.

ಇಡೀ ಚಿತ್ರದ ಅಚ್ಚರಿ ರಾಧಿಕಾ ಪಂಡಿತ್. ಅವರು ಪ್ರೀತಿಯಿರಲಿ, ಕರಾಟೆಯಿರಲಿ, ಎಲ್ಲಾ ಕಡೆ ಇಷ್ಟವಾಗುತ್ತಾರೆ. ಅಜಯ್ ರಾವ್ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಲೋಕಾಯುಕ್ತರ ಪಾತ್ರದಲ್ಲಿ ಅನಂತ್ ನಾಗ್ ಸಾದಾ ಸೀದಾ. ಇಂತಹ ಪಾತ್ರ ಅವರಿಗೆ ಹೊಸತೂ ಅಲ್ಲವಾಗಿರುವುದರಿಂದ, ಅದ್ಭುತವೇನಿಲ್ಲ. ಆದರೆ ರಂಗಾಯಣ ರಘು ರಾಜಕಾರಣಿಯಾಗಿ ಟೋಪಿಯಡಿಯಲ್ಲಿ ಮರುಳು ಮಾಡುತ್ತಾರೆ.

ಸ್ಟೀಫನ್ ಪ್ರಯೋಗ್ ಸಂಗೀತದ ಮಧುರ ಹಾಡುಗಳು ಗುಣುಗುವಂತಿವೆ. ಆದರೂ ಅವರ ಪ್ರಯೋಗ ಅಷ್ಟೇನೂ ಪ್ರಶಂಸಾರ್ಹವಲ್ಲ.

Share this Story:

Follow Webdunia kannada