ಅಲ್ಲಿ ಕಥೆ ಇಲ್ಲದಿರಬಹುದು. ಆದರೆ ಉತ್ತಮ ದೃಶ್ಯಗಳಿವೆ. ಪ್ರೇಕ್ಷಕರು ತಮ್ಮ ನಿಶ್ಚಿಂತೆ ಮರೆತು ಎರಡೂವರೆ ತಾಸು ಆರಾಮವಾಗಿ ಚಿತ್ರ ನೋಡಬಹುದು. 12 ವರ್ಷದಿಂದ ಚಿತ್ರರಂಗದಲ್ಲಿದ್ದ ನವೀನ್‌ಕೃಷ್ಣ ಕೊನೆಗೂ 'ಧಿಮಾಕು' ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
'ಧಿಮಾಕು' ಚಿತ್ರದ ಪ್ರತಿಯೊಂದು ಫ್ರೇಮ್‌ನಲ್ಲೂ ವಿಭಿನ್ನತೆ ಎದ್ದು ಕಾಣುತ್ತದೆ. ಪಕ್ಕಾ ಕಮರ್ಷಿಯಲ್ ಚಿತ್ರವಾದರೂ ಅದನ್ನು ನಿರೂಪಿಸಿದ ರೀತಿ ಮಾತ್ರ ವಿಶೇಷವಾಗಿದೆ.
ಮಗೇಶ್ ಕುಮಾರ್ ತಮ್ಮ ಮೊದಲ ನಿರ್ದೇಶನದಲ್ಲೇ ಶತಕ ಬಾರಿಸಿದಂತಿದೆ. ಶ್ರೀಮಂತ ಕುಟುಂಬದ ಹುಡುಗಿಯನ್ನು ನಾಯಕ ಪಟಾಯಿಸುವ ಹಾಗೂ ಆ ಸಂದರ್ಭಧಲ್ಲಿ ಆತ ಎದುರಿಸುವ ಎಡರು-ತೊಡರುಗಳು ಚಿತ್ರದ ಕಥೆ. ನಾಯಕನಿಗೆ ಆತನಲ್ಲಿರುವ ಧಿಮಾಕು ಒಂದೇ ಬಂಡವಾಳ. ಇಂತಹ ಚಿತ್ರಕಥೆಗಳು ಕನ್ನಡದಲ್ಲಿ ಬೇಜಾನ್ ಬಂದಿವೆ. ಆದರೆ ಇಲ್ಲಿ ನವೀನ್‌ಕೃಷ್ಣ ತಮ್ಮ ವಿಶಿಷ್ಟ ಎನ್ನುವಂತಹ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ.
ಚಿತ್ರದಲ್ಲಿ ಬಳಸಿದ ಕಾಸ್ಟ್ಯೂಮ್ ಕೂಡಾ ಡಿಫರೆಂಟ್ ಆಗಿದೆ. ನಾಯಕ ನವೀನ್‌ಕೃಷ್ಣ ಎಲ್ಲೂ ಎಡವಿಲ್ಲ. ದುರ್ಯೋಧನನಾಗಿ ಪಟಪಟನೆ ಹೇಳುವ ಡೈಲಾಗ್‌ಗಳು ಮೆಚ್ಚುಗೆಯಾಗುತ್ತದೆ.
ಚಿತ್ರಕ್ಕೆ ಬೇಕಾದ ಎಲ್ಲ ಮಸಾಲೆಗಳನ್ನು ನೀಡಿದ್ದಾರೆ. ಚಿತ್ರದ ನಾಯಕಿ ಪಾವನಿಗಿಂತ ಆಕೆಯ ತಾಯಿ ಪಾತ್ರ ಮಾಡಿದ ಮಯೂರಿ ಸೈನಿ ಹೆಚ್ಚು ಗಮನ ಸೆಳೆಯುತ್ತಾರೆ. ಒಂದು ಹಂತದಲ್ಲಿ ಆಕೆಯೇ ನಾಯಕಿಯಾದರೆ ಬೆಟರ್ ಎನ್ನುವಂತಿದೆ. ಚಿತ್ರದಲ್ಲಿನ ಎರಡು ಹಾಡು ಕೇಳುವಂತಿದೆ.
ಧಿಮಾಕು ಚಿತ್ರದಲ್ಲಿ ಕಥೆಗಿಂತ ನವೀನ್‌ಕೃಷ್ಣ ಅವರ ಪ್ರತಿಭಾ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಂಭಾಷಣೆಗಾರ ಶಂಕರ್ ಬಿಲ್ಲೆಮನೆ ಹಿತವೆನಿಸುವಂತಹ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಅವರ ಸ್ಟೈಲನ್ನು ನವೀನ್‌ಕೃಷ್ಣ ಅನುಕರಿಸಿದಂತಿದೆ. ಆದರೂ ಅದು ಎಲ್ಲೂ ಬೋರ್ ಹೊಡೆಸುವುದಿಲ್ಲ.
ಚಿತ್ರದಲ್ಲಿ ಜಗ್ಗೇಶ್, ಕೋಮಲ್ ಒಮ್ಮೆ ಬಂದು ಪಟಪಟ ಮಾತನಾಡಿ ರಂಜಿಸಿ ಹೋಗುತ್ತಾರೆ. ರಂಗಾಯಣ ರಘು ಹಾಗೂ ಸುಧಾ ಬೆಳವಾಡಿ ಅವರ ನಟನೆ ಮನ ಮುಟ್ಟುತ್ತದೆ. ಒಟ್ಟಾಗಿ ಎರಡೂವರೆ ತಾಸು ಕುಳಿತು ಆರಾಮವಾಗಿ ಚಿತ್ರ ನೋಡಬಹುದು.