Select Your Language

Notifications

webdunia
webdunia
webdunia
webdunia

ಬೊಂಬಾಟ‌್‌ನಲ್ಲಿ ಚಿತ್ರಾನ್ನವಿದೆ

ಗಣೇಶ್
, ಸೋಮವಾರ, 11 ಆಗಸ್ಟ್ 2008 (19:07 IST)
MokshendraMOKSHA

ಚಿತ್ರ: ಬೊಂಬಾಟ್
ನಿರ್ದೇಶನ: ಡಿ.ರಾಜೇಂದ್ರ ಬಾಬು
ತಾರಾಗಣ: ಗಣೇಶ್, ರಮ್ಯಾ, ಆದಿಲೋಕೇಶ್, ಮುಖೇಶ್ ರಿಷಿ, ಚಿ. ಗುರುದತ್

ಬೊಂಬಾಟ್‌ನಲ್ಲಿ ಗಣೇಶ್‌ರ ಇಮೇಜ್ ಅನ್ನು ಬದಲಿಸಲು ಹೋಗಿ ಇಡೀ ಚಿತ್ರದ ಇಮೇಜ್ ಆಯೋಮಯವಾಗಿದೆ. ನಿರ್ದೇಶಕ ಡಿ.ರಾಜೇಂದ್ರ ಬಾಬು ಕಥೆಯ ಆಯ್ಕೆಯಲ್ಲಿ ಎಡವಿದ್ದಾರೆ. ಕನ್ನಡದ ಗಂಧಗಾಳಿ ಗೊತ್ತಿಲ್ಲದ ಜನಾರ್ಧನ ಮಹರ್ಷಿಗೆ ಲಕ್ಷಗಟ್ಟಲೆ ಕೊಟ್ಟು ಕಥೆ ಪಡೆದಿದ್ದಾರೆ. ಆದರೆ ಚಿತ್ರ ನೋಡುತ್ತಾ ಹೋದಂತೆ ತೆಲುಗಿನ ಆಟ, ರೆಡಿ, ಪೋಕರಿ, ಹಾಗೂ ಛತ್ರಪತಿ ಚಿತ್ರಗಳ ಛಾಯೆಗಳು ಮೂಡಿಬರುತ್ತವೆ. ಇದನ್ನು ರೀಮಿಕ್ಸ್ ಎನ್ನುವುದಕ್ಕಿಂತ ರೀಮಿಕ್ಸ್ ಚಿತ್ರಾನ್ನ ಎನ್ನಬಹುದು.

ಚಿತ್ರದಲ್ಲಿ ಗಣೇಶ್ ಭರ್ಜರಿ ಫೈಟ್ ಮಾಡುತ್ತಾರೆ. ಆದರೆ ಅವುಗಳನ್ನು ನೋಡುತ್ತಿದ್ದಂತೆ ದೃಶ್ಯದ ಬಗ್ಗೆ ಗಂಭೀರತೆ ಮೂಡುವುದಿಲ್ಲ. ಹುಡುಗಿಯರ ಕೆನ್ನೆ ಸವರುತ್ತಿದ್ದ ಕೈ ಏಕಾಏಕಿ ಫೈಟ್ ಮಾಡಿದರೆ ಜನ ಅದನ್ನು ಅರಗಿಸಿಕೊಳ್ಳುವುದು ಕಷ್ಟ.

ಚಿತ್ರದಲ್ಲಿ ಆನಂದ್(ಗಣೇಶ್) ಸಮಾಜ ಘಾತುಕರನ್ನು ಹಿಗ್ಗಾಮುಗ್ಗಾ ಥಳಿಸುತ್ತಾನೆ. ಶಬರಿಮಲೆ ಮಾಲಾಧಾರಿಗಳಂತೆ ವೇಷಧರಿಸಿ ಇರುಮುಡಿಯಲ್ಲಿ ಶಸ್ತ್ರಾಸ್ತ್ತ್ರ ಕೊಂಡೊಯ್ಯುತ್ತಿದ್ದವರನ್ನು ಪತ್ತೆಹಚ್ಚಿ ಬೆಂಡೆತ್ತುತ್ತಾನೆ. ಹುಡುಗಿಯರಿಗೆ ಫೋನ್ ಮಾಡಿ ಡಿಸ್ಟರ್ಬ್ ಮಾಡುವರಿಗೆ ಬುದ್ದಿ ಕಲಿಸುತ್ತಾನೆ. ಇಲ್ಲಿ ಗಣೇಶ್ ಅರ್ಥಾತ್ ಲೈಟ್ ರೌಡಿ ಇದ್ದಂಗೆ. ಆದರೆ ರೌಡಿಗಳ ಜೊತೆಯೇ ಸೇರಿಕೊಂಡು ಅವರೊಳಗೆ ಫಿಟ್ಟಿಂಗ್ ಇಟ್ಟು ಅವರನ್ನು ಸದೆಬಡಿಯುವ ಬ್ರೈನ್‌ಗೇಮ್ ತೋರಿಸುತ್ತಾನೆ.

ಆಗ ತಾನೆ ಫಾರಿನ್‌ನಿಂದ ವಿದ್ಯಾಭ್ಯಾಸ ಮುಗಿಸಿ ಬಂದ ಶಾಲಿನಿ(ರಮ್ಯಾ) ಎಂಬ ಹುಡುಗಿಯ ಅಕ್ಕಪಕ್ಕದಲ್ಲೇ ಗಣೇಶ್ ಈ ಎಲ್ಲ ಫೈಟ್‌ಗಳನ್ನು ಮಾಡುವುದರಿಂದ ಇವನೊಬ್ಬ ದೊಡ್ಡ ರೌಡಿಯೆಂದು ಭಾವಿಸಿದ ಶಾಲಿನಿ ತನ್ನ ಅಪ್ಪ ಎಸಿಪಿ (ಅವಿನಾಶ್)ಗೆ ಹೇಳಿ ಗಣೇಶ್‌ಗೆ ಬೆಂಡೆತ್ತಿಸುತ್ತಾಳೆ.

ಆದರೆ ಊರಿನ ದೊಡ್ಡ ರೌಡಿ ಗಜೇಂದ್ರನ ಮಗ ಆದಿ ಲೋಕೇಶ್ ತಾನು ಶಾಲಿನಿಯನ್ನೇ ಮದುವೆಯಾಗಬೇಕೆಂದು ಹಠ ಹಿಡಿದು ಮುಂದೆ ಬಂದಾಗ ತನ್ನ ಮಗಳನ್ನು ಆ ರೌಡಿಗಳ ಕೈಯಿಂದ ರಕ್ಷಿಸಲು ಕೊನೆಗೆ ಎಸಿಪಿ ಅವಿನಾಶ್ ಆಕೆಯನ್ನು ಗಣೇಶ್ ಬಳಿ ಕಳುಹಿಸುತ್ತಾನೆ. ಶಾಲಿನಿ ಆನಂದ್‌ನಿಂದ ದೂರ ಹೋದಷ್ಟು ಅವಳ ಮನಸು ಹತ್ತಿರವಾಗುತ್ತದೆ. ಇಲ್ಲೂ ಗಣೇಶ್‌ರ ಡೈಲಾಗ್‌ಗಳಿಗೆ ಕೊರತೆಯಿಲ್ಲ.

ಗಣೇಶ್ ಫೈಟ್ ಮಾಡುವಾಗ ಆತನ ಸ್ನೇಹಿತರು, 'ಮಗುವಿನಂತಿರುವ ನಿನ್ನನ್ನು ನೋಡಿದರೆ ರೌಡಿ ಎಂದೆನಿಸುವುದಿಲ್ಲ' ಎಂಬ ಡೈಲಾಗ್ ಚಿತ್ರದಲ್ಲಿ ಬರುತ್ತದೆ. ಈ ಡೈಲಾಗ್ ಚಿತ್ರಕ್ಕೆ ಪ್ರಸ್ತುತವೆನಿಸುತ್ತದೆ. ಮುಖೇಶ್ ರಿಷಿ, ರಾಹುಲ್ ದೇವ‌್‌ರಂತಹ ದೈತ್ಯರ ಮುಖಕ್ಕೆ ಗಣೇಶ್ ಚಚ್ಚುವುದರಲ್ಲಿ ಸಹಜತೆ ಇಲ್ಲ.

ಇಲ್ಲಿ ರಮ್ಯಾ ಅಭಿನಯಕ್ಕೆ ಹೆಚ್ಚು ಅವಕಾಶವಿಲ್ಲ. ಆಗಾಗ ಬಂದು ಹೋಗುತ್ತಾರೆ. ಹಿಂದಿನ ಗಣೇಶ್‌ರನ್ನು ನೋಡಲು ಬಂದವರಿಗೆ ನಿರಾಶೆಯಾಗುವುದಂತೂ ಗ್ಯಾರಂಟಿ. ತಮಿಳಿನ 'ಶಿವಾಜಿ' ಸಿನಿಮಾದ ರಜನಿಕಾಂತ್ ಸ್ಟೈಲಿನಲ್ಲಿ ಆದಿ ಲೋಕೇಶ್ ಮಿಂಚಿದ್ದಾರೆ. ಮನೋಮೂರ್ತಿಯ 'ಮಾತಿನಲ್ಲಿ ಹೇಳಲಾರೆ' ಹಾಡು ಮಾತ್ರ ಕೇಳುವಂತಿದೆ. ಛಾಯಾಗ್ರಹಣ, ಚಿತ್ರದ ಅದ್ದೂರಿತನದ ಬಗ್ಗೆ ರಾಕ್‌ಲೈನ್ ವೆಂಕಟೇಶ್ ಕಡಿಮೆ ಮಾಡಿಲ್ಲ. ಆದರೆ ಚಿತ್ರಕಥೆ....

ಒಟ್ಟು ಇದು ಗಣೇಶನ ಆಟ.

Share this Story:

Follow Webdunia kannada