Article Kannada Cinema Review %e0%b2%ac%e0%b3%86%e0%b2%b3%e0%b2%a6%e0%b2%bf%e0%b2%82%e0%b2%97%e0%b2%b3%e0%b2%be%e0%b2%97%e0%b2%bf %e0%b2%ac%e0%b2%be 108020400032_1.htm

Daily Horoscope

Select Your Language

Notifications

webdunia
webdunia
webdunia
webdunia

ಬೆಳದಿಂಗಳಾಗಿ ಬಾ

ಬೆಳದಿಂಗಳಾಗಿ
ಅಗ್ನಿ ಶ್ರೀಧರ್‌ರವರ ಆ ದಿನಗಳು ಚಿತ್ರದ ವಾಲ್‌ಪೋಸ್ಟರ್‌ಗಳಲ್ಲಿ, ಪ್ರೀತಿಯ ಕುಲುಮೆಯಲ್ಲಿ ನಲುಗಿದ ಭೂಗತ ಜಗತ್ತು ಎಂಬ ಸಾಲನ್ನು ಚಿತ್ರದ ಹೆಸರಿನ ಕೆಳಗೆ ನೀಡಲಾಗಿತ್ತು. ಅದು ಚೆನ್ನಾಗಿ ವರ್ಕೌಟ್ ಸಹ ಆಯಿತು. ಬೆಳದಿಂಗಳಾಗಿ ಬಾ ಚಿತ್ರವನ್ನು ನೋಡಿದಾಗ ಇದು ಭೂಗತ ಜಗತ್ತಿಗೆ ಸೇರಿದ ಇಬ್ಬರ ನಡುವೆ ನರಳಿದ ಪ್ರೀತಿಯ ಕಥೆ ಎಂಬ ಉಪಶೀರ್ಷಿಕೆ ಕೊಡಬಹುದಾದ ಚಿತ್ರ ಎನಿಸುತ್ತದೆ.

ಹೊಸತನದ ಹುಡುಗರೊಂದಿಗೆ ಸಾಹಿತ್ಯದ ಅಜ್ಜ ಡಾ||ಚಂದ್ರಶೇಖರ ಕಂಬಾರರು ನಟಿಸಿರುವುದನ್ನು ಈ ಚಿತ್ರ ಪ್ರಾರಂಭವಾದಾಗಿನಿಂದ ಪ್ರಚಾರ ಮಾಡಲಾಯಿತು. ಮರೆತೇನೆಂದರೆ ಮರೆಯಲಿ ಹ್ಯಾಂಗ? ಮಾವೋತ್ಸೆ ತುಂಗ್? ಎಂಬ ತಮ್ಮ ಸಾಲಿನಿಂದ ಖ್ಯಾತರಾಗಿರುವ ಕಂಬಾರರು ಚಿತ್ರದುದ್ದಕ್ಕೂ ಢಾಳಾಗಿ ಗೋಚರಿಸುತ್ತಾರೆ. ಅವರ ಇಮೇಜಿಗೆ ಹೊಂದಿಕೊಳ್ಳುವಂತೆ ಪಾತ್ರವನ್ನು ರೂಪಿಸಿರುವುದು ನಿರ್ದೇಶಕ ಎಂ.ಎಸ್.ರಮೇಶರ ವೈಶಿಷ್ಟ್ಯ.

ಭೂಗತ ಜಗತ್ತಿನ ಕಥೆಯನ್ನು ಒಳಗೊಂಡ ಚಿತ್ರವೆಂದರೆ ಅದರಲ್ಲಿ ಮಚ್ಚು-ಲಾಂಗು-ರಕ್ತಪಾತ ಇರಲೇಬೇಕೆಂಬ ಅಲಿಖಿತ ಸತ್ಯಕ್ಕೆ ಇಲ್ಲಿ ಫುಲ್‌ಸ್ಟಾಪ್ ಬಿದ್ದಿರುವುದು ನಿರ್ದೇಶಕರ ಜಾಣತನವಷ್ಟೇ ಅಲ್ಲ, ಪ್ರೇಕ್ಷಕರ ಸೌಭಾಗ್ಯ ಕೂಡಾ. ಕತೆಯಲ್ಲಿ ಹೊಸತನವಿದೆಯಾದರೂ ಅದಕ್ಕೆ ಪೂರಕ ವಾತಾವರಣ ನಿರ್ಮಿಸಲು ರಮೇಶ್ ಇನ್ನಷ್ಟು ಕೃಷಿಮಾಡಬೇಕಿತ್ತು ಎಂದು ಅಲ್ಲಲ್ಲಿ ಅನಿಸದೇ ಇರದು.

ಚಿತ್ರದ ನಾಯಕ ವಿಜಯ ರಾಘವೇಂದ್ರರಾದರೂ ನಿಮ್ಮನ್ನು ಕಾಡುವುದು ರಂಗಾಯಣ ರಘು ಅವರ ಅಭಿನಯ. ಎಲ್ಲರದೂ ಒಂದು ದಾರಿಯಾದರೆ ಎಡವಟ್ಟನದೇ ಒಂದು ದಾರಿ ಎಂಬ ಶೈಲಿಯ ಎಡವಟ್ಟು ಪಾತ್ರಗಳನ್ನು, ವಿಕ್ಷಿಪ್ತ ವ್ಯಕ್ತಿತ್ವಗಳನ್ನು ಬಿಂಬಿಸುವಲ್ಲಿ ರಂಗಾಯಣ ರಘು ಎತ್ತಿದ ಕೈ ಎಂಬ ಮಾತಿಗೆ ಈ ಚಿತ್ರದಲ್ಲಿ ನಿಮಗೆ ಸಾಕ್ಷಿ ಸಿಗುತ್ತದೆ. ಈ ಅಭಿನಯ ರಕ್ಕಸನಿಗೆ ಇಂತಹ ಇನ್ನೂ ಹಲವು ಪಾತ್ರಗಳು ಸಿಗಲಿ ಎಂಬ ಹಾರೈಕೆ ನಮ್ಮದು. ಇದೇ ರೀತಿಯಲ್ಲಿ ಗಮನಾರ್ಹ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಶೋಭರಾಜ್. ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಕಾಣಿಸಿಕೊಂಡ ವಿಲನ್ ಶೋಭರಾಜ್‌ಗೂ, ಬೆಳದಿಂಗಳಾಗಿ ಬಾ ಚಿತ್ರದ ಶೋಭರಾಜ್‌ಗೂ ಪ್ರತಿಭೆಯ ಅಭಿವ್ಯಕ್ತಿಯಲ್ಲಿ ಆಗಿರುವ ಬೆಳವಣಿಗೆಯನ್ನು ನೋಡಲು ನೀವು ಚಿತ್ರಮಂದಿರಕ್ಕೇ ಧಾವಿಸಬೇಕು. ಹ್ಯಾಟ್ಸಾಫ್ ಶೋಭಣ್ಣಾ!!

ನಿರ್ದೇಶಕ ಎಂ.ಎಸ್.ರಮೇಶ್ ಮೂಲತಃ ಸಂಭಾಷಣೆಕಾರರು. ಹಾಗಾಗಿ ಚಿತ್ರವೂ ಅಲ್ಲಲ್ಲಿ ವಾಚ್ಯ ಎನಿಸುತ್ತದೆ. ಈ ಒಂದು ನ್ಯೂನತೆಯನ್ನು ಸರಿಪಡಿಸಿಕೊಂಡು, ದೃಶ್ಯಮಾಧ್ಯಮದಲ್ಲಿಯೇ ಎಲ್ಲವನ್ನೂ ಕಟ್ಟಿಕೊಡುವೆಡೆ ರಮೇಶ್ ಶ್ರಮಪಟ್ಟರೆ, ಕನ್ನಡಕ್ಕೆ ಮತ್ತೊಬ್ಬ ಸಮರ್ಥ ನಿರ್ದೇಶಕ ದೊರೆತಂತಾಗುತ್ತದೆ. ಆ ಅರ್ಹತೆ ಅವರಲ್ಲಿದೆ ಕೂಡಾ.

ಬೆಳದಿಂಗಳಾಗಿ ಬಾ ಎಂಬ ಚಿತ್ರದ ಶೀರ್ಷಿಕೆಯನ್ನು ಕಂಡಾಗ ನಿಮ್ಮಲ್ಲೇನೋ ನೀರೀಕ್ಷೆಗಳು ಹುಟ್ಟುವುದು ಸಹಜ. ಆದರೆ ಚಿತ್ರಮಂದಿರ ಪ್ರವೇಶಿಸಿದರೆ ನಿಮಗೆ ಆಗುವುದು ಬೇರೆಯದೇ ಆದ ಪ್ರಪಂಚದ ಅನಾವರಣ. ಆದ್ದರಿಂದ ಅದರ ಮಜಾ ಪಡೆಯಲು ನೀವು ಚಿತ್ರವನ್ನು ನೋಡುವುದೇ ಸೂಕ್ತ.

ಇನ್ನೇಕ ತಡ? ಹೊರಡಿರಲ್ಲ?!!

Share this Story:

Follow Webdunia kannada