Select Your Language

Notifications

webdunia
webdunia
webdunia
webdunia

ಬುಲ್ ಬುಲ್ ಚಿತ್ರವಿಮರ್ಶೆ: ಚೆನ್ನಾಗಿದೆ, ನೀವು ನೋಡಕ್ಕಿಲ್ವಾ?

ಬುಲ್ ಬುಲ್ ಚಿತ್ರವಿಮರ್ಶೆ: ಚೆನ್ನಾಗಿದೆ, ನೀವು ನೋಡಕ್ಕಿಲ್ವಾ?
, ಶನಿವಾರ, 11 ಮೇ 2013 (14:37 IST)
PR
ಚಿತ್ರ: ಬುಲ್ ಬುಲ್
ತಾರಾಗಣ: ದರ್ಶನ್, ರಚಿತಾ ರಾಮ್, ಅಂಬರೀಷ್, ರಮೇಶ್ ಭಟ್, ಅಶೋರ್, ಶರಣ್
ನಿರ್ದೇಶನ: ಎಂ.ಡಿ. ಶ್ರೀಧರ್
ಸಂಗೀತ: ವಿ. ಹರಿಕೃಷ್ಣ

ಯಾವ ಸಿನಿಮಾವನ್ನು ಯಾವ ನಾಯಕನಿಗೆ ರಿಮೇಕ್ ಮಾಡಬೇಕು ಎಂಬುದನ್ನು ಎಂ.ಡಿ. ಶ್ರೀಧರ್ ಅವರನ್ನು ನೋಡಿ ಕಲಿಯಬೇಕು. ಅದರಲ್ಲೂ ಅವರು ದರ್ಶನ್‌ಗೆ ಈ ಬಾರಿ ಆಯ್ಕೆ ಮಾಡಿರುವ 'ಡಾರ್ಲಿಂಗ್' ರಿಮೇಕನ್ನಂತೂ ಯಾರೂ ದೂರುವ ಹಾಗೆಯೇ ಇಲ್ಲ. ಆ ಮೂಲಕ ಮತ್ತೊಮ್ಮೆ ತಾನು ರಿಮೇಕ್ ಸ್ಪೆಷಲಿಸ್ಟ್ ಎನ್ನುವುದನ್ನು ಶ್ರೀಧರ್ ನಿರೂಪಿಸಿದ್ದಾರೆ.

ಮೂಲ ಚಿತ್ರ ನೋಡಿದವರೂ 'ಬುಲ್ ಬುಲ್' ನೋಡಬಹುದು. ಆ ರೀತಿಯ ಕೆಲವು ಬದಲಾವಣೆಗಳನ್ನು ನಿರ್ದೇಶಕರು ಮಾಡಿದ್ದಾರೆ. ಹಾಗೆ ಬದಲಾವಣೆ ಮಾಡುವಾಗ ದರ್ಶನ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡೇ ಉಪ್ಪು-ಹುಳಿ ಹಂಚಿದ್ದಾರೆ. ಹಾಗೆಂದು ಕಥೆಯಲ್ಲಿ ಹೊಸತನವಿದೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಅದೇ ಬದನೆಕಾಯಿ ಕಥೆ. ಆಚೀಚೆ ಮಾಡಿ ರಂಗು ತುಂಬಲಾಗಿದೆ.

ಈ ಬಾರಿ ದರ್ಶನ್ ಲವರ್ ಬಾಯ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅವರ ಪ್ರೇಯಸಿಯರಾಗಿ ರಚಿತಾ ರಾಮ್ ಮತ್ತು ರಮ್ಯಾ ಬಾರ್ನಾ ನಟಿಸಿದ್ದಾರೆ. ದರ್ಶನ್ ತಂದೆಯ ಪಾತ್ರದಲ್ಲಿ ಅಂಬರೀಷ್ ಅಭಿನಯಿಸಿದ್ದಾರೆ. ಇಷ್ಟೂ ಪಾತ್ರಗಳು ಎಲ್ಲೂ ನಿರಾಸೆ ಮಾಡುವುದಿಲ್ಲ. ಅದಕ್ಕೆ ಕಾರಣ, ನಿರೂಪನೆಯಲ್ಲಿನ ಜೀವಂತಿಕೆ, ಕುಚಿಕು ಸಂಭಾಷಣೆಗಳು.

ಅಲ್ಲಲ್ಲಿ ಆಕಳಿಕೆ ಸಹಜ. ಪ್ರಥಮಾರ್ಧ ಜಾಲಿ ರೈಡ್. ದ್ವಿತೀಯಾರ್ಧದಲ್ಲಿ ಚಿತ್ರ ಗಂಭೀರತೆ ಪಡೆಯುತ್ತದೆ. ಒಟ್ಟಾರೆ 15 ನಿಮಿಷ ಕತ್ತರಿ ಪ್ರಯೋಗ ಮಾಡುತ್ತಿದ್ದರೆ ಪ್ರೇಕ್ಷಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬಹುದಿತ್ತು.

ಇತ್ತೀಚಿನ ದಿನಗಳಲ್ಲಿ ಅಪ್ಪ-ಮಗನ ಬಾಂಧವ್ಯದ ಸಿನಿಮಾ ಬರದೇ ಇರುವ ಕೊರತೆಯನ್ನು 'ಬುಲ್ ಬುಲ್' ನೀಗಿಸಿದೆ. ದರ್ಶನ್ ಲವರ್ ಬಾಯ್, ಆಕ್ಷನ್, ಭಾವನಾತ್ಮಕ ದೃಶ್ಯಗಳಲ್ಲಿ ಮಿಂಚಿದರೆ, ಮಗನಿಗೆ ತಕ್ಕ ಅಪ್ಪನಾಗಿ ಅಂಬರೀಷ್ ಸೈ ಎನಿಸಿಕೊಂಡಿದ್ದಾರೆ. ರಚಿತಾ ರಾಮ್ ಭವಿಷ್ಯಕಕ್ಕೊಬ್ಬಳು ನಾಯಕಿ ಎಂಬ ಸ್ಪಷ್ಟ ಸೂಚನೆ ಸಿಕ್ಕಿದೆ. ಅವರು ಸಂಭಾಷಣೆ ಹೇಳುವ ಶೈಲಿ, ಭಾವನೆ ವ್ಯಕ್ತಪಡಿಸುವ ರೀತಿ, ಬಾಡಿ ಲ್ಯಾಂಗ್ವೇಜ್ ಉತ್ತಮವಾಗಿದೆ. ಶರಣ್, ಶರತ್ ಲೋಹಿತಾಶ್ವ, ರಮೇಶ್ ಭಟ್, ಟೆನ್ನಿಸ್ ಕೃಷ್ಣರಿಗೆ ಸವಾಲಿನ ಪಾತ್ರಗಳಿಲ್ಲ.

ಎಲ್ಲ ವಿಭಾಗಗಳ ತಂತ್ರಜ್ಞರು ಒಟ್ಟು ಸೇರಿ ಚಿತ್ರ ನಿರ್ಮಿಸಿ, ಕೆಲಸ ಮಾಡಿರುವುದರಿಂದ ತಂತ್ರಜ್ಞಾನದಲ್ಲಿ ಚಿತ್ರ ಮುಂದಿದೆ. ಜೂನಿಯರ್ ಸೀನಿಯರ್, ಒಂದು ಸಂಜೆ ಎರಡು ಮಾತು, ಜಗದಲಿರುವ ಹುಚ್ಚರಲ್ಲಿ ನಾನೂ ಒಬ್ಬ ಎಂಬ ಹಾಡುಗಳು ವಿ. ಹರಿಕೃಷ್ಣ ಸಂಗೀತದಲ್ಲಿ ಗುನುಗುವಂತಿವೆ. ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ತಾಜಾತನ, ನಿರ್ಮಾಪಕರು ಹಣ ಸುರಿದಿರುವುದು ಸ್ವಿಜರ್ಲೆಂಡ್ ದೃಶ್ಯಗಳ ಶ್ರೀಮಂತಿಕೆಯಲ್ಲಿ ರಾಚುತ್ತದೆ.

ಶ್ರೀಮಂತಿಕೆ, ಸಂಗೀತ, ಪಂಚಿಂಗ್ ಡೈಲಾಗ್, ನಟನೆ ಎಲ್ಲದರಲ್ಲೂ ಬುಲ್ ಬುಲ್ ಟಾಪ್. ಪ್ರೇಕ್ಷಕರನ್ನು ಮರುಳು ಮಾಡುವ ಎಲ್ಲ ಅಂಶಗಳೂ ಇರುವುದರಿಂದ ವೀಕೆಂಡ್ ಶೋ ನೋಡಿದವರಿಗೆ ನಿರಾಸೆಯಿಲ್ಲ.

Share this Story:

Follow Webdunia kannada