ಬಿಂದಾಸ್
ಡಿ.ರಾಜೇಂದ್ರಬಾಬುರವರಿಂದ ಹೀಗೊಂದು ಬಿಂದಾಸ್ ಚಿತ್ರ
Publish Date: Mon, 18 Feb 2008 (13:05 IST)
Updated Date: Mon, 18 Feb 2008 (13:05 IST)
ನಿರ್ದೇಶಕ ಡಿ.ರಾಜೇಂದ್ರಬಾಬುರವರ ಬಗೆಗೆ ಉದ್ಯಮದಲ್ಲಿ ಒಳ್ಳೆಯ ಮಾತುಗಳಿವೆ. ಡಾ| ವಿಷ್ಣುವರ್ಧನ್, ಅಂಬರೀಷ್‌ರವರಿಂದ ಮೊದಲ್ಗೊಂಡು ರವಿಚಂದ್ರನ್‌ವರೆಗೆ ಹಲವು ತಾರೆಯರನ್ನು ನಿರ್ದೇಶಿಸಿದ ಕೀರ್ತಿ ಅವರದು. ಕೆಲವರ್ಷಗಳಿಂದ ಲೈಮ್‌ಲೈಟ್‌ನಿಂದ ದೂರವಾಗಿದ್ದ ಬಾಬು ಹೊಸ ಯುಗದ ತಾರೆ ಪುನೀತ್ ಚಿತ್ರವನ್ನು ನಿರ್ದೇಶಿಸುವರು ಎಂಬ ಸುದ್ದಿ ಹೊರಬಿದ್ದಾಗ ಬಹಳ ಮಂದಿ ಹುಬ್ಬೇರಿಸಿದ್ದರು. ಹುಬ್ಬೇರಿಸಿದ್ದು ಬಾಬುರವರ ಸಾಮರ್ಥ್ಯದ ಕುರಿತು ಇದ್ದ ಅನುಮಾನದಿಂದಲ್ಲ, ಫಾಸ್ಟ್‌ಫುಡ್ ಶೈಲಿಯ ಚಿತ್ರಗಳ ನಿರ್ದೇಶನ ಅವರಿಗೆ ಒಗ್ಗುವುದೇ ಎಂದು.
ಬಿಂದಾಸ್ ನೋಡಿ ಹೊರಬಂದಾಗ ಈ ಭಾವ ಮನದಾಳದಲ್ಲಿ ದಾಖಲಾಗುತ್ತದೆ. ಈ ಚಿತ್ರದಲ್ಲಿ ಎಲ್ಲ ಇದೆ. ರಮ್ಯ ಹೊರಾಂಗಣವಿದೆ, ಒಳ್ಳೆಯ ಹಾಡು-ನರ್ತನವಿದೆ, ಮೈನವಿರೇಳಿಸುವ ಫೈಟಿಂಗ್ ಇದೆ, ಪುನೀತ್‌ರವರ ಜೋಶ್ ತುಂಬಿದ ಅಭಿನಯವಿದೆ. ಥಿಯೇಟರ್ನಲ್ಲಿರುವಷ್ಟೂ ಹೊತ್ತು ಕಣ್ತುಂಬಿಕೊಳ್ಳಬಹುದಾದ ಚಿತ್ರ, ಅಲ್ಲಿಂದ ಹೊರಬಂದ ಮೇಲೆ ಮನಸ್ಸಿನಲ್ಲಿ ಏನನ್ನೂ ಉಳಿಸುವುದಿಲ್ಲ. ದೀರ್ಘಕಾಲ ಸುಮ್ಮನಿದ್ದ ಡಿ.ರಾಜೇಂದ್ರಬಾಬು ಇದಕ್ಕಿಂತ ಮಿಗಿಲಾದ ಚಿತ್ರವನ್ನು ಕೊಡಬಹುದಿತ್ತೇನೋ ಅನಿಸಿದರೆ ಅದಕ್ಕೆ ಕಾರಣ ನಾವಲ್ಲ, ಬಾಬುರವರಿಗಿರುವ ಅನುಭವ!!
ತೆಲುಗಿನ ಜನಾರ್ಧನ ಮಹರ್ಷಿ ಕಥೆ ಬರೆದಿದ್ದಾರಾದ್ದರಿಂದ ತೆಲುಗು ಚಿತ್ರಗಳ ಛಾಯೆ ಅಲ್ಲಲ್ಲಿ ರಾಚುತ್ತದೆ. ದೃಶ್ಯಗಳನ್ನು ಎಲ್ಲೋ ನೋಡಿದ್ದೀವಲ್ಲ ಎನಿಸಿದರೆ ಅದು ನಿಮ್ಮ ತಪ್ಪಲ್ಲ, ವಿವಿಧ ಭಾಷಾ ಚಿತ್ರಗಳ ತಪ್ಪು!! ಟಪೋರಿಯೊಬ್ಬ ಹುಡುಗಿಯನ್ನು ಒಲಿಸಿಕೊಳ್ಳಲು ಮಾಡುವ ವಿವಿಧ ಸರ್ಕಸ್‌ಗಳು, ನಂತರ ಅವಳು ಪೊಲೀಸ್ ಅಧಿಕಾರಿಯ ಮಗಳು ಎಂದು ಗೊತ್ತಾದ ಮೇಲೆ ಕಥೆ ತೆಗೆದುಕೊಳ್ಳುವ ತಿರುವುಗಳು ಚಿತ್ರದಲ್ಲಿ ಕುತೂಹಲವನ್ನು ಕಾಯ್ದುಕೊಳ್ಳುತ್ತವೆ. ಈ ನಡುವೆ ಹಾಡು-ಫೈಟ್ ಇತ್ಯಾದಿ ಇತ್ಯಾದಿ ನಡೆದುಹೋಗುತ್ತವೆ. ಕೊನೆಗೆ ಏನಾಯ್ತು ಎನ್ನುವುದನ್ನು ನೋಡಲು ಚಿತ್ರಮಂದಿರಕ್ಕೇ ನೀವು ಹೋಗಬೇಕು.
ಮನರಂಜನೆಯೇ ಮೂಲಮಂತ್ರವಾಗಿರುವ ಈ ಚಿತ್ರವನ್ನು ತೂಗಿಸಿಕೊಂಡು ಹೋಗಿರುವುದು ಪುನೀತ್‌ರವರ ಅಭಿನಯ ಹಾಗೂ ಡಿಫರೆಂಟ್ ಡ್ಯಾನಿಯವರ ಫೈಟ್‌ಗಳು. ತಮ್ಮ ಪಾತ್ರ ನಿರ್ವಹಣೆಗೆ ಪುನೀತ್ ಸಾಕಷ್ಟು ಹೋಮ್‌ವರ್ಕ್ ಮಾಡಿರುವುದು ಚಿತ್ರದಲ್ಲಿ ಢಾಳಾಗಿ ಗೋಚರಿಸುತ್ತದೆ. ಒಂದು ಸಾಮಾನ್ಯ ದೃಶ್ಯವನ್ನೂ ನೋಡಬಲ್ ಆಗಿ ಪರಿವರ್ತಿಸಿರುವುದು ಪುನೀತ್ ಸಾಮರ್ಥ್ಯಕ್ಕೆ ಸಾಕ್ಷಿ ಎನ್ನಬಹುದೇನೋ. ಡ್ಯೂಪ್‌ಗಳಿಲ್ಲದೆ ಸ್ಟಂಟ್ ಮಾಡಿರುವ ಪುನೀತ್ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆಗಳಿಗೆ ಭಾಜನರಾಗುತ್ತಾರೆ. ಇದರ ಸಂಪೂರ್ಣ ಕ್ರೆಡಿಟ್ ಡಿಫರೆಂಟ್ ಡ್ಯಾನಿಯವರಿಗೆ ಸಲ್ಲಬೇಕು.
ಆದರೆ ಇದೇ ಮಾತನ್ನು ನಾಯಕಿ ಹನ್ಸಿಕಾ ಬಗೆಗೆ ಹೇಳುವಂತಿಲ್ಲ. ಭಾಷೆ ಅರಿಯದ, ಭಾವ ಅರಿಯದ ಇಂಥ ಗಾಜಿನಗೊಂಬೆಗಳನ್ನು 36 ಲಕ್ಷ ರೂ. ಕೊಟ್ಟು ಕರೆತರುವ ಅಗತ್ಯವೇನಿತ್ತು ಎಂಬುದನ್ನು ಸಾಕ್ಷಾತ್ ಗಾಂಧಿನಗರಿಗರೇ ಹೇಳಬೇಕು.
ಒಟ್ಟಿನಲ್ಲಿ ಇದು ಅಭಿಮಾನಿಗಳನ್ನು ರಂಜಿಸುವ ಚಿತ್ರ. ವೇಣುರವರ ಛಾಯಾಗ್ರಹಣ, ಮಳವಳ್ಳಿ ಸಾಯಿಕೃಷ್ಣರ ಚುರುಕು ಸಂಭಾಷಣೆ, ಪುನೀತ್ ಅಭಿನಯ ಹಾಗೂ ಡಿಫರೆಂಟ್ ಡ್ಯಾನಿಯವರು ಬಿಂದಾಸ್ ಆಗಿ ಕೆಲಸ ಮಾಡಿರುವುದು ಬಿಂದಾಸ್ ಚಿತ್ರವನ್ನು ರಂಜನೀಯವನ್ನಾಗಿಸಿದೆ ಎನ್ನಬಹುದು.