Select Your Language

Notifications

webdunia
webdunia
webdunia
webdunia

ಬಳ್ಳಾರಿಯ ನಾಗನೂ ಸಾಹಸಸಿಂಹನೇ ಸರಿ!

ಬಳ್ಳಾರಿ ನಾಗ
PR
ಚಿತ್ರ: ಬಳ್ಳಾರಿ ನಾಗ
ನಿರ್ದೇಶನ: ದಿನೇಶ್ ಬಾಬು
ತಾರಾಗಣ: ವಿಷ್ಣುವರ್ಧನ್, ಅವಿನಾಶ್. ಚಿತ್ರಾ ಶೆಣೈ, ಶೋಭರಾಜ್

ಚಿತ್ರದ ಹೆಸರೇ ವಿಚಿತ್ರವಾಗಿದೆ, 'ಬಳ್ಳಾರಿ ನಾಗ' ಎಂಬ ಹೆಸರು ವಿಷ್ಣುವರ್ಧನ್ ಇಮೇಜ್‌ಗೆ ಖಂಡಿತಾ ಸೂಟ್ ಆಗಲ್ಲ ಅಂತೆಲ್ಲಾ ವಿಷ್ಣು ಅಭಿಮಾನಿಗಳು ಸೇರಿದಂತೆ ಗಾಂಧಿನಗರವೇ ಮಾತಾಡಿಕೊಳ್ಳುತ್ತಿರುವಾಗಲೇ ಬಳ್ಳಾರಿ ನಾಗ ಬಿಡುಗಡೆ ಕಂಡಿದೆ. ಬಳ್ಳಾರಿ ನಾಗನ ಬಗ್ಗೆ ಹೀಗೆ ಹುಬ್ಬೇರಿಸಿದವರಿಗೆಲ್ಲಾ, ಖಂಡಿತ ಚಿತ್ರ ನೋಡಿ ಹೆಸರಿನ ಬಗ್ಗೆ ಮಾತಾಡಿ ಎಂದಷ್ಟೆ ಚುಟುಕಾಗಿ ಉತ್ತರ ನೀಡುತ್ತಿದ್ದ ವಿಷ್ಣುವರ್ಧನ್ ನಿಜಕ್ಕೂ ಚಿತ್ರ ನೋಡಿದವರಿಗೆ ಸರಿಯಾದ ಉತ್ತರವನ್ನೇ ತಮ್ಮ ಚಿತ್ರದಲ್ಲಿ ನೀಡಿದ್ದಾರೆ ಎಂಬುದು ಅಕ್ಷರಶಃ ಸತ್ಯ.

ದಿನೇಶ್ ಬಾಬು ನಿರ್ದೇಶನದಲ್ಲಿ, ಕೆ. ಮಂಜು ನಿರ್ಮಾಣದ ಬಳ್ಳಾರಿ ನಾಗ ಚಿತ್ರದ ಕಥೆ, ನಿರೂಪಣೆ ಎಲ್ಲವೂ ಮಾಮೂಲು. ಆದರೆ ಒನ್ಸ್ಎಗೈನ್ ವಿಷ್ಣುವರ್ಧನ್ ಅಭಿನಯದ ವಿಷಯಕ್ಕೆ ಬಂದರೆ, ಅಭಿಮಾನಿಗಳು ಹುಚ್ಚೆಬ್ಬುವುದು ಖಂಡಿತ. ವಿಷ್ಣು ಅವರ ಅಭಿನಯ ಮಾತ್ರ ಚಿತ್ರದಲ್ಲಿ ಎಲ್ಲವನ್ನು ಮೀರಿಸಿ ನಿಂತಿದೆ.

ಮಳೆಯಾಳಂನ ಮಮ್ಮುಟಿ ಅಭಿನಯದ ರಾಜ ಮಾಣಿಕ್ಯಂ ಚಿತ್ರದ ರಿಮೇಕ್ ಈ ಬಳ್ಳಾರಿ ನಾಗ. ಹಾಗಾಗಿ ಕಥೆಯ ಬಗ್ಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಅದೇ ಮಲಯಾಳಂನ ರಾಜಾ ಮಾಣಿಕ್ಯಂನ ತದ್ರೂಪ ಇಲ್ಲಿ ಕುಳಿತಿದೆ. ಅದನ್ನು ಇಲ್ಲಿಯ ಭಾಷಾ ಸೊಗಡಿಗೆ ತಕ್ಕಂತೆ ಸಂಭಾಷಣೆ ಹೆಣೆಯಲಾಗಿದೆ ಎಂಬುದನ್ನು ಬಿಟ್ಟರೆ, ಕಥೆಯಲ್ಲಿ ಹೊಸತನವೇನೂ ಇಲ್ಲ.

ವಿಷ್ಣುವರ್ಧನ್ ಪಂಚೆ ಉಟ್ಟು, ಬಣ್ಣ ಬಣ್ಣದ ಅಂಗಿ ತೊಟ್ಟು, ಕಪ್ಪು ಕನ್ನಡಕ ಧರಿಸಿ ಬಳ್ಳಾರಿ ಭಾಷೆ ಮಾಡುತ್ತಾ ನಿಂತರೆ ಮಾಸ್ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಾರೆ. ಈ ಮೂಲಕ ಕೇಶವಾದಿತ್ಯ ಬಳ್ಳಾರಿ ಭಾಷೆಯಲ್ಲಿ ಸಂಭಾಷಣೆ ಬರೆಯಲು ಶ್ರಮಪಟ್ಟಿದ್ದಕ್ಕೂ ವಿಷ್ಣು ನ್ಯಾಯ ಒದಗಿಸಿದ್ದಾರೆ.
webdunia
MOKSHA


ಬಳ್ಳಾರಿ ನೆಲದ ಭಾಷೆ, ವೇಷಭೂಷಣಗಳೊಂದಿಗೆ ನಾಯಕ ವಿಷ್ಣುವರ್ಧನ್ ಊರಿನ ದುಷ್ಟರನ್ನು ಎದುರು ಹಾಕಿಕೊಂಡು ಬಡಿದಾಡುವ ಕಥೆ ಇಲ್ಲಿದೆ. ವಿಷ್ಣುವರ್ಧನ್ ಇದೇ ಮೊದಲ ಬಾರಿಗೆ ನಾಯಕಿ ಇಲ್ಲದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದೇ ಚಿತ್ರದ ವಿಶೇಷ. ಇಲ್ಲಿ ಕಾಮಿಡಿ ದೃಶ್ಯಗಳಿಗೆ ಹೆಚ್ಚಿನ ಮಹತ್ವವಿಲ್ಲ. ಖಳನಾಯಕನ ಪಾತ್ರದಲ್ಲಿ ಶೋಭರಾಜ್ ನಿರ್ದೇಶಕರ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ.

ಪ್ರತಿಯೊಂದು ದೃಶ್ಯದಲ್ಲಿ ಬರುವ ಡೈಲಾಗ್ ಡೆಲಿವರಿ, ಮ್ಯಾನರಿಸಂ ಬಗ್ಗೆ ಎರಡು ಮಾತೇ ಇಲ್ಲ. ಉಳಿದಂತೆ ಅವಿನಾಶ್, ಚಿತ್ರಾ ಶೆಣೈ ಎಲ್ಲರೂ ತಮ್ಮ ಪಾತ್ರಕ್ಕೆ ಜೀವ ನೀಡಿದ್ದಾರೆ. ಒಟ್ಟಿನಲ್ಲಿ ವಿಷ್ಣುವರ್ಧನ್ ಈ ಚಿತ್ರದ ಮೂಲಕ ಯಾವ ಪಾತ್ರ ಕೊಟ್ಟರೂ ಸೈ ಎನಿಸಿಕೊಂಡಿರುವುದು ಸುಳ್ಳಲ್ಲ. ವಿಷ್ಣುವರ್ಧನ್ ಅವರು ಈ ವಯಸ್ಸಿನಲ್ಲೂ ತಮ್ಮ ಸಾಹಸದಲ್ಲಿ ಮತ್ತೊಮ್ಮೆ ಮಿಂಚಿದ್ದಲ್ಲದೆ, ತಮ್ಮ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ಒಟ್ಟಾರೆ ವಿಷ್ಣುವರ್ಧನ್ ಈಗಲೂ ಈ ವಯಸ್ಸಿನಲ್ಲೂ ಸಾಹಸಸಿಂಹನೇ ಸರಿ ಎಂದರೂ ತಪ್ಪಲ್ಲ.

Share this Story:

Follow Webdunia kannada