Select Your Language

Notifications

webdunia
webdunia
webdunia
webdunia

ಪ್ರೇಮ್ ಅಡ್ಡ ಚಿತ್ರವಿಮರ್ಶೆ; ಗೆಲುವಿಗೆ ರಕ್ತಚರಿತ್ರೆ ಮೆಟ್ಟಿಲು

ಪ್ರೇಮ್ ಅಡ್ಡ ಚಿತ್ರವಿಮರ್ಶೆ; ಗೆಲುವಿಗೆ ರಕ್ತಚರಿತ್ರೆ ಮೆಟ್ಟಿಲು
PR
ಚಿತ್ರ: ಪ್ರೇಮ್ ಅಡ್ಡ
ತಾರಾಗಣ: ಪ್ರೇಮ್, ಕೃತಿ ಕರಬಂದ, ಮೇಕಾ ಮುರಳಿಕೃಷ್ಣ, ನಾಗರಾಜ ಮೂರ್ತಿ
ನಿರ್ದೇಶನ: ಮಹೇಶ್ ಬಾಬು
ಸಂಗೀತ: ವಿ. ಹರಿಕೃಷ್ಣ

ರಿಮೇಕ್‌ಗೆ ತೆರೆದುಕೊಂಡಿರುವ ನಿರ್ದೇಶಕ ಮಹೇಶ್ ಬಾಬು ನಿರಾಸೆ ಮಾಡಿಲ್ಲ. 'ಪ್ರೀತಿ ಏಕೆ ಭೂಮಿ ಮೇಲಿದೆ'ಯಲ್ಲಿ ನಾಯಕನಾಗುವ ಮೂಲಕ ಉಗಿಸಿಕೊಂಡಿದ್ದ ನಿರ್ದೇಶಕ ಪ್ರೇಮ್ ಕೂಡ ಇಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ 'ಪ್ರೇಮ್ ಅಡ್ಡ' ಗೆದ್ದಿದೆ.

ಎಲ್ಲರಿಗೂ ಗೊತ್ತೇ ಇರುವಂತೆ ಇದು ತಮಿಳಿನ 'ಸುಬ್ರಮಣ್ಯಪುರಂ' ಚಿತ್ರದ ರಿಮೇಕ್. ಮೂವರು ಹುಟ್ಟಾ ಪೋಲಿಗಳ ಕಥೆ. ಅವರೋ, ಯಾರು ಏನೇ ಅಂದರೂ ಕ್ಯಾರೇ ಅನ್ನದವರು. ಬದುಕಿದಷ್ಟು ದಿನ ಹೇಗಾದರೂ ಬದುಕೋಣ ಎಂದುಕೊಂಡೇ ದಿನ ತಳ್ಳುವವರು. ಅವರ ದ್ವೇಷವೇ ಮೇಳೈಸುವ, ಪ್ರೀತಿಯ ಎಳೆಯಲ್ಲಿ ಸಾಗುವ ಚಿತ್ರವೇ ಪ್ರೇಮ್ ಅಡ್ಡ.

ನಿರ್ದೇಶಕ ಮಹೇಶ್ ಬಾಬು ರಿಮೇಕ್ ಮಾಡುವಾಗ ಗೊಂದಲಕ್ಕೆ ಸಿಲುಕಿರುವುದು ಅಲ್ಲಲ್ಲಿ ಕಂಡು ಬರುತ್ತದೆ. ಕನ್ನಡ ನೆಲಕ್ಕೆ ಹೊಂದಿಸುವ ಪ್ರಯತ್ನದಲ್ಲಿ ಕೆಲವು ಕಡೆ ಹದ ತಪ್ಪಿರುವುದು ಸ್ಪಷ್ಟ. ಮಂಡ್ಯ ಸೊಗಡನ್ನು ರಿಮೇಕ್‌ಗೆ ಅಂಟಿಸುವಲ್ಲಿ ಚಿತ್ರತಂಡ ಯಶಸ್ಸು ಸಾಧಿಸಿದೆ. ಆದರೆ ಎಲ್ಲೂ ಕಾಡುವ ಭಾವನೆ ಸ್ಫುರಿಸುವುದಿಲ್ಲ ಅನ್ನೋದು ಮೂಲ ಚಿತ್ರ ಮತ್ತು ರಿಮೇಕ್‌ಗೆ ಇರುವ ವ್ಯತ್ಯಾಸಗಳು.

80ರ ದಶಕದ ಚಿತ್ರಣವನ್ನು ತುಂಬಾ ಚೆನ್ನಾಗಿ ಕಟ್ಟಿ ಕೊಡಲಾಗಿದೆ. ರುಚಿಗೆ ತಕ್ಕಂತೆ ಉಪ್ಪು ಎಲ್ಲಾ ಕಡೆಯಿದೆ. ಎರಡೆರಡು ಐಟಂ ಸಾಂಗುಗಳು ಪ್ರೇಮ್ ಕಚ್ಚಾ ಅವತಾರಕ್ಕೆ ಮಸಾಲೆ ಅರೆಯುತ್ತವೆ. ಒಟ್ಟಾರೆ ಚಿತ್ರಕ್ಕೆ ನೋಡಿಸಿಕೊಂಡು ಹೋಗುವ ಗುಣವಿದೆ. ಸಾಫ್ಟ್ ಪಾತ್ರದಲ್ಲಿ ಗೆಲ್ಲಲಾಗದ ಪ್ರೇಮ್ ರಕ್ತಚರಿತ್ರೆಯಲ್ಲಿ ಗೆಲುವಿನ ಮೆಟ್ಟಿಲು ಏರಲು ಯತ್ನಿಸಿದ್ದಾರೆ.

ಈ ಹಿಂದೆ ಪ್ರೇಮ್ ನೋಡಿದ್ದವರಿಗೆ ಅವರ ನಟನೆ ಈ ಪರಿಯಲ್ಲಿರುತ್ತದೆ ಎಂದು ಯಾರೂ ನಂಬಲು ಸಾಧ್ಯವಿಲ್ಲ. ನಾಯಕಿ ಕೃತಿ ಕರಬಂದ ತುಂಬಾ ಇಷ್ಟವಾಗುತ್ತಾರೆ. ಎರಡನೇ ನಾಯಕನಾಗಿರುವ ನಿರ್ಮಾಪಕ ಮೇಕಾ ಮುರಳಿಕೃಷ್ಣ ಮುಂದಿನ ದಿನಗಳಲ್ಲಿ ಸ್ವತಂತ್ರ ನಾಯಕನಾಗಿ ಬಣ್ಣ ಹಚ್ಚಿದರೂ ಅಚ್ಚರಿಯಿಲ್ಲ.

ಹರಿಕೃಷ್ಣ ಸಂಗೀತದ ಹಾಡುಗಳು ಚಿತ್ರ ಬಿಡುಗಡೆಗೆ ಮೊದಲೇ ಹಿಟ್ ಆಗಿದ್ದವು. ಚಿತ್ರಮಂದಿರದಲ್ಲೂ ಈ ಹಾಡುಗಳು ಅಲೆಯಲೆ ಎಬ್ಬಿಸುತ್ತವೆ. ಆದರೆ ಆಲಿಸಿದವರಿಗೆ ಇವುಗಳಲ್ಲಿ ಬೇರೆಲ್ಲಿಯದೋ ಕಂಪು ಕಂಡು ಬಂದರೆ ಅದು ಸಂಗೀತ ನಿರ್ದೇಶಕರ ಜಾಣತನ ಎಂದು ಮೆಚ್ಚುಗೆ ಸೂಚಿಸಬಹುದು!

'ಪ್ರೇಮ್ ಅಡ್ಡ' ಖಂಡಿತಾ ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ. ನವಿರು ಪ್ರೇಮದ ನಿರೀಕ್ಷೆ ಇಲ್ಲದೆ, ಒರಟೊರಟು ಇಷ್ಟಪಡುವವರು ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು.

Share this Story:

Follow Webdunia kannada