Select Your Language

Notifications

webdunia
webdunia
webdunia
webdunia

ಪ್ರಸ್ತುತ ರಾಜಕಾರಣದ ವ್ಯಂಗ್ಯ ಈ 'ಕಳ್ಳರ ಸಂತೆ'!

ಕಳ್ಳರ ಸಂತೆ
, ಶನಿವಾರ, 19 ಡಿಸೆಂಬರ್ 2009 (11:57 IST)
MOKSHA
ಚಿತ್ರ: ಕಳ್ಳರ ಸಂತೆ
ತಾರಾಗಣ: ಯಶ್, ಹರಿಪ್ರಿಯಾ, ಕಿಶೋರ್, ರಂಗಾಯಣ ರಘು.
ನಿರ್ದೇಶನ: ಸುಮನಾ ಕಿತ್ತೂರು

ಕಳ್ಳರ ಸಂತೆ ಚಿತ್ರ ಖಂಡಿತವಾಗಿ ಚಿತ್ರರಸಿಕರಿಗೆ ಒಂದು ಹೊಸ ಅನುಭವ. ಒಬ್ಬ ಅಮಾಯಕ, ಬುದ್ದಿವಂತ ಹುಡುಗನ ಬದುಕಿನ ಸತ್ಯವನ್ನು ಈ ಚಿತ್ರದ ಕಥೆ ಬಿಚ್ಚಿಡುತ್ತಾ ಹೋಗುತ್ತದೆ. ಇದರ ನಡುವೆ ರಾಜಕಾರಣಿಗಳು ಮತ್ತವರ ಗರ್ಲ್ ಫ್ರೆಂಡುಗಳು, ರೌಡಿಗಳು, ಲಂಚಕೋರರು, ಸರ್ಕಾರಿ ಅಧಿಕಾರಿಗಳು, ಪೋಲಿಸರು ಹಾಗೂ ಅವರ ಖಾಸಗಿ ಅನಧಿಕೃತ ಬದುಕು ಬಂದು ಹೋಗುತ್ತವೆ. ಚಿತ್ರದ ಸಂಭಾಷಣೆಗಳು ಅರ್ಥಗರ್ಭಿತವಾಗಿವೆ. ಇಂತಹ ಉತ್ತಮ ಚಿತ್ರಕಥೆ ನೀಡಿದ ಅಗ್ನಿ ಶ್ರೀಧರ್ ಅವರಿಗೆ ಮೊದಲು ಧನ್ಯವಾದ ಹೇಳಲೇಬೇಕು.

ಇಲ್ಲಿ ಸಮಾಜದ ಓರೆಕೋರೆಗಳ ವಿಚಾರವಾಗಿ ಚರ್ಚೆಗಳು ನಡೆಯುತ್ತವೆ. ನ್ಯಾಯ- ಅನ್ಯಾಯಗಳು ಬೀದಿಗೆ ಬರುತ್ತವೆ. ಎರಡುವರೆ ತಾಸು ಆರಾಮವಾಗಿ ಕುಳಿತು ಚಿತ್ರ ನೋಡಬಹುದು. ಚಿತ್ರದ ಎಲ್ಲಾ ಅಂಶಗಳನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ನಿರ್ದೇಶಕಿ ಸುಮನಾ ಕಿತ್ತೂರು ಯಶಸ್ವಿಯಾಗಿದ್ದಾರೆ. ನಮ್ಮ ದಿನನಿತ್ಯ ಸುತ್ತಮುತ್ತ ನಡೆಯುವ ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ ಕಥೆ ಇದೆ ಎಂದು ಅನಿಸಿದರೆ ತಪ್ಪಲ್ಲ. ಪ್ರಸ್ತುತ ರಾಜಕಾರಣದ ವ್ಯಂಗ್ಯವೂ ಇಲ್ಲಿದೆ. ಗಣಿಲಾಬಿ, ರಾಜಕೀಯದ ಸರ್ಕಸ್ಸು ಕೂಡಾ ಈ ಚಿತ್ರದಲ್ಲಿ ಸ್ಥಾನ ಪಡೆಯುವುದರಿಂದ ಸಾಕಷ್ಟು ಘಟನೆಗಳ್ನು ಸದ್ಯದ ರಾಜಕಾರಣಕ್ಕೂ ಹೋಲಿಸಬಹುದು. ನಾಯಕ ಯಶ್ ಈ ಚಿತ್ರದ ಪೂರ್ಣ ಸೂತ್ರಧಾರ. ಆತನಿಂದಲೇ ಶುರುವಾಗುವ ಕಥೆ, ಆತನಿಂದಲೇ ಅಂತ್ಯಗೊಳ್ಳುತ್ತದೆ. ಯಶ್ ತಮ್ಮ ಪಾತ್ರಕ್ಕೆ ಜೀವ ತುಂಬುವ ಮೂಲಕ ಭವಿಷ್ಯದ ಭರವಸೆಯ ತಾರೆ ಎಂದು ಖಂಡಿತಾ ಹೇಳಬಹುದು. ಹರಿಪ್ರಿಯಾ ಕ್ಯೂಟ್ ಆಗಿ ಕಾಣಿಸಿಕೊಂಡಿರುವುದಲ್ಲದೆ, ತಾನು ಚೆನ್ನಾಗಿ ಅಭಿನಯಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ.

webdunia
MOKSHA
ಕೆಲವೊಂದು ವ್ಯಂಗ್ಯಗಳು ಅಗತ್ಯವಿಲ್ಲದೆ ತುರುಕಿದ್ದು ಅನಿಸಲೂಬಹುದು. ಸಣ್ಣ ಸಣ್ಣ ಸಂಭಾಷಣೆಗಳೇ ಪ್ರೇಕ್ಷಕರಿಗೆ ಖುಷಿ ಕೊಡುತ್ತವೆ. ಈ ಚಿತ್ರದಲ್ಲಿ ತಾರೆಯರ ಹಿಂಡೇ ಇದೆ. ಶೋಭರಾಜ್ ಶ್ರೀರಾಮಪುರ ಕಿಟ್ಟಿಯ ಪಾತ್ರದಲ್ಲಿ ಹಾಸ್ಯ ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ರಂಗಾಯಣ ರಘು ಕಚಗುಳಿ ಇಡುತ್ತಾರೆ. ಉಳಿದಂತೆ ಜೈ ಜಗದೀಶ್, ದತ್ತಣ್ಣ ತಮ್ಮ ಕೆಲಸವನ್ನು ತಪ್ಪಿಲ್ಲದಂತೆ ಮಾಡಿದ್ದಾರೆ.

ಸುಂದರ್ನಾಥ್ ಸುವರ್ಣ ಕ್ಯಾಮರಾ ಬಳಕೆ ಮತ್ತಷ್ಟು ಚುರುಕಾಗಬಹುದಿತ್ತು. ವಿ.ಮನೋಹರ್ ಸಂಗೀತದ ಎರಡು ಹಾಡು ಇಷ್ಟವಾಗುತ್ತವೆ. ನಾಗೇಂದ್ರ ಅರಸ್ ಅವರ ಸಂಕಲನ ದ್ವಿತೀಯಾರ್ಧದಲ್ಲಿ ಸರಿ ದಾರಿಗೆ ಬಂದಿದೆ. ಮೊದಲರ್ಧಕ್ಕೆ ಕೊಂಚ ಕತ್ತರಿ ಪ್ರಯೋಗ ಮಾಡಿದ್ದರೆ ಚಿತ್ರ ಅದ್ಭುತವಾಗಿ ಮೂಡಿ ಬರುತ್ತಿತ್ತು. ಸುಮನಾ ಅವರ ಹಿಂದಿನ ಚಿತ್ರಕ್ಕಿಂತ ಇದು ಬಹಳಷ್ಟು ಬದಲಾವಣೆಗಳನ್ನು ಕಾಣುವ ಮೂಲಕ ಅವರು ಭರವಸೆ ಮೂಡಿಸಿದ್ದಾರೆ. ಅದೇ ಹಳೇ ಪ್ರೇಮ ಕಥಾನಕ, ಲಾಂಗು ಮಚ್ಚುಗಳನ್ನು ನೋಡಿ ಬೇಸತ್ತಿದ್ದ ಗಾಂಧಿನಗರಕ್ಕೆ ಹೊಸ ಕಥೆಯೊಂದು ವಿಭಿನ್ನ ರೀತಿ ಮೋಡಿ ಮಾಡುವುದಂತೂ ಖಂಡಿತ. ರಾಜಕೀಯದಲ್ಲಿ ಆಸಕ್ತಿಯಿದ್ದರೆ, ಸ್ವಲ್ಪವೂ ಬೋರಾಗದೆ ಎರಡುವರೆ ಗಂಟೆ ಹೋದುದೇ ಗೊತ್ತಾಗದಂತೆ ಈ ಚಿತ್ರ ಎಂಜಾಯ್ ಮಾಡಬಹುದು.

Share this Story:

Follow Webdunia kannada