ಚಿತ್ರ: ಪ್ರಸಾದ್
ತಾರಾಗಣ: ಅರ್ಜುನ್ ಸರ್ಜಾ, ಮಾಧುರಿ ಭಟ್ಟಾಚಾರ್ಯ, ಮಾಸ್ಟರ್ ಸಂಕಲ್ಪ್
ನಿರ್ದೇಶನ: ಮನೋಜ್ ಸತಿ
ಸಂಗೀತ: ಇಳಯರಾಜಾ
ಬರೀ ಪ್ರಶಸ್ತಿಗಾಗಿ ಸಿನಿಮಾಗಳನ್ನು ಮಾಡುವ ಕ್ಯಾಟಗರಿ ಬೇರೆ, ಅದನ್ನು ಹೊರತುಪಡಿಸಿ ಸಮಾಜವನ್ನು ತಿದ್ದುವ ಕಾರ್ಯವನ್ನು ಬೆಂಬಲಿಸುವ ಸಿನಿಮಾಗಳ ವಿಭಾಗ ಬೇರೆ. ಈ ವಾರ ಬಿಡುಗಡೆಯಾಗಿರುವ 'ಪ್ರಸಾದ್' ಎರಡನೇ ಕ್ಯಾಟಗರಿಗೆ ಸೇರಿದೆ. ಬಹುಶಃ ಅದೇ ಕಾರಣದಿಂದ ಲಾಬಿ ಮಾಡಲಾಗದೆ ಈ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಿಂದ 'ವಂಚಿತ'ವಾಗಿದೆ.ಅರ್ಜುನ್ ಸರ್ಜಾ ಮತ್ತು ಮಾಧುರಿ ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಮಾಸ್ಟರ್ ಸಂಕಲ್ಪ್ ಕೇಂದ್ರಿತ ಚಿತ್ರ ಪ್ರಸಾದ್. ಈ ಮೂವರು ಪ್ರತಿ ಫ್ರೇಮಿನಲ್ಲೂ ಪ್ರೇಕ್ಷಕರನ್ನು ಕಾಡುತ್ತಾರೆ. ಪ್ರತಿಯೊಬ್ಬರ ಹೃದಯವನ್ನೂ ಹಿಂಡಿ ಹಿಪ್ಪೆ ಮಾಡುತ್ತಾರೆ. ಕೊನೆಗೊಂದು ಒಳ್ಳೆಯ ಮೆಸೇಜನ್ನು ನೀಡುತ್ತಾರೆ ನಿರ್ದೇಶಕ ಮನೋಜ್ ಸತಿ.ವಿಕಲ ಚೇತನ ಮಕ್ಕಳನ್ನು ಹೇಗೆ ನೋಡಬೇಕು ಅನ್ನೋದನ್ನು ಪ್ರಸಾದ್ ಸಮಾಜಕ್ಕೆ ಸಾರಿ ಸಾರಿ ಹೇಳುತ್ತದೆ.ಶಂಕರ್-ಮಾಲತಿ ದಂಪತಿಯ ಮೂರನೇ ಮಗು ಪ್ರಸಾದ್. ಈ ಮಗುವಿಗಾಗಿ ಶಂಕರ್ ಮಾಡಿದ ಪ್ರಾರ್ಥನೆಗಳು ಅಷ್ಟಿಷ್ಟಲ್ಲ. ಆದರೆ ದೇವರು ಕೊಟ್ಟಿದ್ದೇನು? ಮಗುವಿಗೆ ಕಿವಿಯೂ ಕೇಳೋದಿಲ್ಲ, ಮಾತು ಬರೋದಿಲ್ಲ. ಶಂಕರ್ ಮನಸೋ ಇಚ್ಛೆ ದೇವರನ್ನು ಶಪಿಸುತ್ತಾನೆ.ಮಗು ಬೆಳೆಯುತ್ತಿದ್ದಂತೆ ಶಂಕರ್‌ನಲ್ಲಿ ಗೊಂದಲಗಳೂ ಹುಟ್ಟುತ್ತವೆ. ಈ ಮಗು ಯಾಕಾದರೂ ಬೇಕು? ಮನೆಯಲ್ಲಿ ಯಾಕಿರಬೇಕು ಎಂಬ ಪ್ರಶ್ನೆಗಳು ಕಾಡುತ್ತವೆ. ಆದರೆ ಮಾಲತಿಯದ್ದು ತಾಯಿ ಪ್ರೀತಿ. ಕಷ್ಟಪಟ್ಟು ಬೆಳೆಸುತ್ತಾಳೆ. ಸಾಧನೆಗಳಿಗೆ ಬೆಂಬಲವಾಗುತ್ತಾಳೆ. ಹೀಗಿದ್ದ ಮಗು ಶಂಕರನ ಜೀವನದ ದಿಕ್ಕನ್ನೂ ಬದಲಾಯಿಸುತ್ತದೆ. ಇನ್ನೇನು ಎಲ್ಲವೂ ಸರಿಯಾಯಿತು ಅನ್ನುವಾಗ ಇನ್ನೊಂದು ಆಘಾತ. ಅದರಿಂದ ಹೊರ ಬರುವಷ್ಟರಲ್ಲಿ ಸಮಾಜಕ್ಕೊಂದು ಚೊಕ್ಕದಾದ ಸಂದೇಶ.ಇಡೀ ಚಿತ್ರದುದ್ದಕ್ಕೂ ಅರ್ಜುನ್ ಸರ್ಜಾ ಕಾಡುತ್ತಾರೆ. ಇದು ತನ್ನ ಮೊದಲನೆ ಚಿತ್ರವೋ ಎಂಬಂತೆ ಅವರು ಕಾಣಿಸುತ್ತಾರೆ. ಅವರದ್ದು ಹಠಕ್ಕೆ ಬಿದ್ದ ನಟನೆ. ಒಂದು ರೀತಿಯಲ್ಲಿ ನೋಡಿದರೆ, ಅದು ನಟನೆಯೇ ಅಲ್ಲ; ಅನುಭವ ಎಂಬಂತಿದೆ. ಸ್ಟಾರ್ ನಟನೊಬ್ಬ ಇಂತಹ ಪಾತ್ರವನ್ನು ಒಪ್ಪಿಕೊಂಡಿರುವುದು ನಿಜಕ್ಕೂ ಆಶ್ಚರ್ಯ.ಮಾಸ್ಟರ್ ಸಂಕಲ್ಪ್ ಇಲ್ಲಿ ಇನ್ನೊಂದು ಅಚ್ಚರಿ. ಇಳಯರಾಜಾ ಸಂಗೀತವನ್ನು ಬಿಟ್ಟು ಚಿತ್ರದ ಕಲ್ಪನೆ ಹುಟ್ಟುವುದೇ ಇಲ್ಲ. ಆದರೆ ತಾಯಿಯ ಪಾತ್ರದಲ್ಲಿ ಮಾಧುರಿ ಭಟ್ಟಾಚಾರ್ಯ ಅಷ್ಟಾಗಿ ನಿರೀಕ್ಷೆ ಮುಟ್ಟುವುದಿಲ್ಲ. ಇಷ್ಟೆಲ್ಲ ಧನಾತ್ಮಕ ಅಂಶಗಳಿಗೆ ಅವರು ಹಿನ್ನಡೆಯಾಗುತ್ತಾರೆ. ಕನ್ನಡದ ಬೇರೆ ಯಾರಾದರೂ ಅನುಭವಿ ನಟಿಯರನ್ನೇ ಬಳಸಿಕೊಳ್ಳಬಹುದಿತ್ತು ಅನ್ನೋದು ಚಿತ್ರ ನೋಡಿದ ನಂತರವೂ ಸುಲಭವಾಗಿ ಮರೆಯುವುದಿಲ್ಲ.'
ಪ್ರಸಾದ್' ಚಿತ್ರವನ್ನು ನೋಡಿದವರಲ್ಲಿ ಏನಾದರೂ ಒಂಚೂರು ಬದಲಾವಣೆ ಆಗಲೇಬೇಕು. ಆಗದೇ ಇರಲು ಸಾಧ್ಯವಿಲ್ಲ.