ಚಿತ್ರ: ಜಸ್ಟ್ ಮಾತ್ ಮಾತಲ್ಲಿ
ತಾರಾಗಣ: ಸುದೀಪ್, ರಮ್ಯಾ, ರಾಜೇಶ್, ಕೀರ್ತಿ ಗೌಡ ಮುಂತಾದವರು
ನಿರ್ದೇಶನ: ಸುದೀಪ್
ನಿರ್ಮಾಪಕ: ಶಂಕರೇಗೌಡ
ಉತ್ತಮ ಸ್ವಮೇಕ್ ಚಿತ್ರಗಳ ಕೊರತೆಯಿಂದ ಸೊರಗುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸುದೀಪ್ ಅವರ 'ಜಸ್ಟ್ ಮಾತ್ ಮಾತಲ್ಲಿ' ಹೊಸ ಹುರುಪನ್ನು ತುಂಬಿದೆ ಎಂದು ಒಂದೇ ಸಾಲಿನಲ್ಲಿ ಹೇಳಿ ಮುಗಿಸಬಹುದಾದ ಚಿತ್ರವಿದು. ಇಲ್ಲಿ ನಟ ಮತ್ತು ನಿರ್ದೇಶಕ ಎರಡರಲ್ಲೂ ಅವರು ತನ್ನ ಹಿಂದಿನ ಸೂಕ್ಷ್ಮ ಛಾಪನ್ನೇ ಮುಂದುವರಿಸಿ ಗೆದ್ದಿದ್ದಾರೆ.ಇತ್ತೀಚಿನ ದಿನಗಳಲ್ಲಿ ಸಾಹಸ ಮತ್ತು ಹಾಸ್ಯ ದೃಶ್ಯಗಳಿಲ್ಲದೆ ಕನ್ನಡ ಚಿತ್ರ ಬಿಡುಗಡೆ ಆಗುವುದೇ ಇಲ್ಲ. ಅಂಥದ್ದರಲ್ಲಿ ಸುದೀಪ್ ಸಾಹಸ ಮತ್ತು ಹಾಸ್ಯ ದೃಶ್ಯಗಳಿಲ್ಲದೆ ಕುಟುಂಬ ಸಮೇತರಾಗಿ ಬಂದು ವೀಕ್ಷಿಸಬಹುದಾದ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಮಾತೇ ಆಡದೆ ಆಂಗಿಕ ಅಭಿನಯದ ಸುದೀಪ್ ಅವರ ನಟನೆ ಸೂಪ್ಪರೋ ಸೂಪ್ಪರ್.ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಎರಡರಲ್ಲೂ ಮಿಂಚುತ್ತಿರುವ ಸುದೀಪ್ ಈ ಚಿತ್ರದಲ್ಲಿ ನಿರ್ದೇಶನದ ಜತೆ ಕಥೆ, ಚಿತ್ರಕಥೆ ಹೊಣೆಯನ್ನೂ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ವಿವಾದವೆಬ್ಬಿಸಿದರೂ ಪಾತ್ರಕ್ಕೆ ಮೋಸ ಮಾಡದೆ ಚಿಕ್ಕದಾಗಿ-ಚೊಕ್ಕವಾಗಿ ಅಭಿನಯಿಸಿ ಮನಗೆಲ್ಲುತ್ತಾರೆ ರಮ್ಯಾ.ಚಿತ್ರಕಥೆಯ ನಿರೂಪಣೆಯು ಅದನ್ನು ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ಸುಂದರ ಸ್ಥಳಗಳಲ್ಲಿ ಚಿತ್ರೀಕರಣ, ಪೋಷಾಕುಗಳು ಮತ್ತು ಚಿತ್ರವನ್ನು ಕಟ್ಟಿ ಕೊಟ್ಟ ರೀತಿಯು ಪ್ರೇಕ್ಷಕನನ್ನು ಹಿಡಿದಿಡುತ್ತದೆ. ಆದರೆ ಫೈಟಿಂಗ್ ಮತ್ತು ಹಾಸ್ಯ ತುಣುಕುಗಳ ಕೊರತೆಯು ಒಂದು ವರ್ಗದ ಪ್ರೇಕ್ಷಕರಿಗೆ ನಿರಾಶೆ ಮೂಡಿಸಬಹುದು.ಚಿತ್ರ ನೋಡಿದರೆ, ಸುದೀಪ್ ಅವರು ಚಿತ್ರಕಥೆಯನ್ನು ಹೊಸದಾದ ಶೈಲಿಯಲ್ಲಿ ತೆಗೆದುಕೊಂಡು ಹೋದಂತಿದೆ. ಪ್ರತೀ ಹಂತದಲ್ಲಿಯೂ ಕುತೂಹಲ ಉಳಿಸಿಕೊಳ್ಳುತ್ತಾರಾದರೂ, ಕೆಲವು ಕಡೆ ದಿಢೀರ್ ಸನ್ನಿವೇಶ ಬದಲಾವಣೆಗಳು, ಕಥೆ ತಿರುಗಿಕೊಳ್ಳುವ ರೀತಿಗಳು ಕೆಲವೊಮ್ಮೆ ಪ್ರೇಕ್ಷಕರಿಗೆ ಬೋರ್ ಹೊಡೆಸಬಹುದು.'
ಮುಸ್ಸಂಜೆ ಮಾತು' ಚಿತ್ರದಂತೆಯೇ ಇದು ಕೂಡ ಒಂದು ರೋಮ್ಯಾಂಟಿಕ್ ಕಥೆಯುಳ್ಳ ಚಿತ್ರ. ಚಿತ್ರದಲ್ಲಿ ನಾಯಕ ಸಿದ್ಧಾರ್ಥ ಒಬ್ಬ ಗಾಯಕ. ಆಕಸ್ಮಿಕವಾಗಿ ತನು (ರಮ್ಯಾ) ಪರಿಚಯವಾಗುತ್ತಾಳೆ. ವಿಪರೀತ ವಾಚಾಳಿಯಾಗಿರುವ ಈಕೆಗೆ ನಿಧಾನವಾಗಿ ನಾಯಕನ ಜೊತೆ ಪ್ರೀತಿ ಅಂಕುರಿಸುತ್ತದೆ. ತನ್ನ ಪ್ರೀತಿಯನ್ನು ನಾಯಕನ ಜೊತೆಗೆ ಹೇಳಿಕೊಳ್ಳುತ್ತಾಳೆ. ನಾಯಕ ಆರಂಭದಲ್ಲಿ ಒಪ್ಪಿಕೊಂಡಂತೆ ಕಂಡರೂ ವಿಷಯ ಗಂಭೀರಕ್ಕೆ ತಲುಪುವ ಮೊದಲೇ ನಿರಾಕರಿಸಿಬಿಡುತ್ತಾನೆ. ಇದಾದ ಮೇಲೆ ಮತ್ತೊಬ್ಬಾಕೆಗೂ ನಾಯಕ ಸಿದ್ದಾರ್ಥ್ ಮೇಲೆ ಪ್ರೀತಿ ಮೂಡುತ್ತದೆ. ಆಕೆಯೂ ಮೊದಲಿನಾಕೆಯಂತೆಯೇ ನಾಯಕನ ಬಳಿ ತನ್ನ ಪ್ರೀತಿ ಅರುಹುತ್ತಾಳೆ. ಆದರೆ ಆಕೆಯ ಪ್ರೀತಿಯನ್ನೂ ನಾಯಕ ನಿರಾಕರಿಸುತ್ತಾನೆ. ಅದೇ ಬೇಸರದಲ್ಲಿ ನಾಯಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.ಇದಾದ ನಂತರ ನಾಯಕ ಭಯದಿಂದ ಮತ್ತೆ ಮೊದಲು ಪ್ರೀತಿ ಅರುಹಿದ ತನು ನೆನಪಾಗುತ್ತದೆ. ಆಕೆಯನ್ನು ಹುಡುಕಹೊರಡುತ್ತಾನೆ. ಆದರೆ, ಆಕೆ ಅದಾಗಲೇ ದೇಶ ಬಿಟ್ಟಿರುತ್ತಾಳೆ. ಆಕೆಯಿರುವ ಸಿಂಗಾಪುರಕ್ಕೆ ಹುಡುಕಹೊರಟ ನಾಯಕನಿಗೆ ಮತ್ತೊಬ್ಬ ಪ್ರಯಾಣಿಕನ ಪರಿಚಯವಾಗುತ್ತದೆ. ಆತ ನಾಯಕನ ಕಥೆ ಕೇಳಿ ತಾನು ಸಿಂಗಾಪುರದಲ್ಲಿ ಆಕೆಯನ್ನು ಹುಡುಕಲು ಸಹಾಯ ಮಾಡುವುದಾಗಿ ಹೇಳುತ್ತಾನೆ. ಆ ಸಹ ಪ್ರಯಾಣಿಕನ ಮದುವೆಗೆ ನಾಯಕ ಹೋಗುತ್ತಾನೆ. ಆದರೆ ಮದುವೆಯಲ್ಲಿ ನಾಯಕನಿಗೆ ಆಘಾತ ಕಾದಿರುತ್ತದೆ. ಅದೇನು? ನಾಯಕ ಯಾಕೆ ಹೀಗೆ ಪ್ರೀತಿಯನ್ನು ನಿರಾಕರಿಸುತ್ತಾನೆ, ಆಮೇಲೇನೇನಾಗುತ್ತದೆ, ತಿರುವುಗಳು ಮುಗಿದು ಕ್ಲೈಮ್ಯಾಕ್ಸಿನಲ್ಲಿ ಏನಾಗುತ್ತದೆ ಎಂಬುದನ್ನು ತಿಳಿಯಬೇಕಾದರೆ ನೀವು ಚಿತ್ರಮಂದಿರಕ್ಕೆ ಹೋಗಲೇಬೇಕು.ಚಿತ್ರದ ಕ್ಲೈಮಾಕ್ಸ್ ನೋಡಿದರೆ ಎಲ್ಲೋ ಒಂದು ಕಡೆ ಮುಂಗಾರು ಮಳೆ ಚಿತ್ರದ ವಾಸನೆ ಇದೆ ಎಂಬಂತಾಗುತ್ತದೆಯಾದರೂ, ಇದೊಂದು ಅತ್ಯುತ್ತಮ ಚಿತ್ರ ಕಥೆಯುಳ್ಳ ಸ್ವಮೇಕ್ ಚಿತ್ರ ಎಂಬುದು ಹೆಮ್ಮೆಯ ವಿಷಯ.ಚಿತ್ರದ ಸಂಗೀತವು ಈ ಚಿತ್ರದ ಸೊಗಸಿಗೆ ತನ್ನ ಭರ್ಜರಿ ಕಾಣಿಕೆ ಸಲ್ಲಿಸಿ, ಪ್ರೇಕ್ಷಕರನ್ನು ಹಿಡಿದಿಡುತ್ತದೆ. ರಘು ದೀಕ್ಷಿತ್ ಅವರ ಸಂಗೀತ ಮತ್ತೆ ಮತ್ತೆ ಕೇಳುವಂತಿದೆ. 'ಸೈಕೋ' ನಂತರ ಅವರು ಮತ್ತೊಮ್ಮೆ ಸಂಗೀತ ಪ್ರೇಮಿಗಳ ಹೃದಯಕ್ಕಿಲ್ಲಿ ಲಗ್ಗೆ ಹಾಕಿದ್ದಾರೆ.ವೆಂಕಟ್ ಛಾಯಾಗ್ರಹಣ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್. 'ಮುಸ್ಸಂಜೆ ಮಾತು' ಚಿತ್ರದ ನಂತರ ಜತೆಯಾಗಿರುವ ಸುದೀಪ್ ಮತ್ತು ರಮ್ಯಾ ಜೋಡಿಯ ಚಿತ್ರ ಶಂಕರ್ ಅವರ ನಿರ್ಮಾಣದಲ್ಲಿದೆ. ಕೆಂಪರಾಜ್ ಸಂಕಲನ, ಕೆ.ನಂಜುಂಡ ಸಂಭಾಷಣೆ, ರವಿವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.ಆದಿ ಪಾತ್ರ ನಿರ್ವಹಿಸಿದ್ದ ರಾಜೇಶ್ ಕೂಡ ತಮ್ಮ ಪ್ರತಿಭೆ ತೋರಿಸಿದ್ದರೆ, ಉಳಿದ ಪಾತ್ರಗಳಿಂದಲೂ ಉತ್ತಮ ಅಭಿನಯ ಮೂಡಿಬಂದಿದೆ.ನಮ್ಮ ಕಿಚ್ಚ ಸುದೀಪ್ ಏನಾದರೂ ಈ ಚಿತ್ರದಲ್ಲಿ ಒಂದಿಷ್ಟು ಹಾಸ್ಯದ ಭಾಗಗಳನ್ನು ಸೇರಿಸಿದ್ದಿದ್ದರೆ, ಬಹುಶಃ ಪ್ರೇಕ್ಷಕನಿಗೆ ಇದೊಂದು ಪರ್ಫೆಕ್ಟ್ ಹಿಟ್ ಆಗಬಹುದಿತ್ತು. ರಂಗ ಎಸ್ಸೆಸ್ಸೆಲ್ಸಿ, ಮುಸ್ಸಂಜೆ ಮಾತು ಚಿತ್ರಗಳಂತೆಯೇ ಈ ಚಿತ್ರದಲ್ಲಿಯೂ ಸುದೀಪ್-ರಮ್ಯಾ ಜೋಡಿ ಅದ್ಭುತ ಯಶಸ್ಸು ಕಂಡಿದೆ.ಹಿಂದಿಯ ರಣ್ ಚಿತ್ರದಲ್ಲಿ ಅಭಿನಯಿಸಿ ಅಮಿತಾಭ್ ಅವರಿಂದ ಸೈ ಎನಿಸಿಕೊಂಡಿರುವ ಸುದೀಪ್ ಅವರ ಚಿತ್ರವನ್ನು ಕನ್ನಡದ ಪ್ರೇಕ್ಷಕರು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.