ಕೆಲವೊಮ್ಮೆ ಹೀಗಾಗುತ್ತೆ. ಉತ್ಪನ್ನವೊಂದರ ಪ್ಯಾಕಿಂಗ್, ಅದರ ರ‌್ಯಾಪರ್, ರ‌್ಯಾಪರ್‌ನ ಬಣ್ಣ, ಅದರಲ್ಲಿ ಮಿಳಿತವಾಗಿರುವ ವಿನ್ಯಾಸಗಳು, ವಿಶಿಷ್ಟ ವಿನ್ಯಾಸದ ಅಕ್ಷರಗಳು ಇವನ್ನೆಲ್ಲಾ ನೋಡಿ ಮರುಳಾಗಿ ಅದನ್ನು ಖರೀದಿಸಿಬಿಡುತ್ತೇವೆ. ಅದನ್ನು ಬಳಸಿದಾಗಲೇ ಗೊತ್ತಾಗೋದು ಅದರ ಗುಣಮಟ್ಟ ಎಂಥಾದ್ದು ಅಂತ!!.
'
ಯೋಗಿ' ಚಿತ್ರದ ವಿಮರ್ಶೆಯನ್ನು ಬರೆಯುವಾಗಲೂ ಇದೇ ಹೋಲಿಕೆ ನೆನಪಿಗೆ ಬಂದರೆ ಅದು ನಮ್ಮ ತಪ್ಪಲ್ಲ, ಚಿತ್ರವಿರುವುದೇ ಹಾಗೆ. ಚಿತ್ರದ ಬಿಡಗಡೆಗೆ ಪೂರ್ವ ಪ್ರಚಾರದಲ್ಲಿ ಅಥವಾ ಸ್ಟುಡಿಯೋ ಮೂಲದ ವರದಿಗಳಲ್ಲಿ ಇದನ್ನು ಭಾರೀಯಾಗಿ ಬಿಂಬಿಸಲಾಗಿತ್ತು. ದಾಖಲೆಯ ಪ್ರಮಾಣದ ಚಿತ್ರಮಂದಿರಗಳಲ್ಲಿ, ಅದರಲ್ಲೂ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿಕ್ಕೆ ಸಿದ್ಧವಾಗಿರುವುದನ್ನೇ ಒಂದು ಎಂಟನೇ ಅದ್ಭುತ ಎಂಬಂತೆ ಬಿಂಬಿಸಲಾಗಿತ್ತು. ಸಂಗೀತ ನಿರ್ದೇಶಕ ಎಮಿಲ್ ಅವರ ರಾಗ ಸಂಯೋಜನೆಯ ಹಾಡುಗಳೇ ಈ ಚಿತ್ರದ ಬಹುದೊಡ್ಡ ಆಸ್ತಿಯಾಗಿದ್ದು, ಅದು ಚಿತ್ರವನ್ನು ಸೂಪರ್ ಹಿಟ್ ಮಾಡುತ್ತೆ ಎಂತೆಲ್ಲಾ ಪ್ರಚಾರ ಮಾಡಲಾಗಿತ್ತು.ಇದರಲ್ಲಿ ಕೊನೆಯ ವಾಕ್ಯಮಾತ್ರ ನಿಜ ಎಂಬುದು ಚಿತ್ರ ನೋಡಿದಾಗ ವೇದ್ಯವಾಗುತ್ತದೆ. ಸಾಮಾನ್ಯ ಕಥೆಯನ್ನುಳ್ಳ ಅಥವಾ ಸಾಮಾನ್ಯ ನಿರೂಪಣೆಯುಳ್ಳ ಇಂಥಾ ಚಿತ್ರಕ್ಕೆ ಈ ಪರಿಯ ದುಬಾರಿ ಚೌಕಟ್ಟು ಹಾಕಬೇಕಿತ್ತಾ ಅನಿಸುತ್ತೆ ಚಿತ್ರ ನೋಡಿ ಹೊರಬಂದಾಗ.
ತನ್ನ ಬಾಲ್ಯದ ಗೆಳತಿಯನ್ನು ಅರಸುತ್ತಿರುವ ಕಥಾನಾಯಕ ಯೋಗಿ ಮಾಂಸಾಹಾರಿ ಹೊಟೇಲೊಂದರಲ್ಲಿ ಸಪ್ಲೈಯರ್ ಆಗಿರುತ್ತಾನೆ. ಅಲ್ಲಿಗೆ ಅಟಕಾಯಿಸಿಕೊಳ್ಳುವ ರೌಡಿಪಡೆಯೊಂದಿಗೆ ಆಕಸ್ಮಿಕವಾಗಿ ಜಗಳಕ್ಕೆ ಇಳಿಯಬೇಕಾಗುತ್ತೆ ಯೋಗಿಗೆ. ಇದರ ಪರಿಣಾಮವಾಗಿ ಅನಿವಾರ್ಯವಾಗಿ ಮತ್ತೊಂದು ರೌಡಿ ತಂಡದೊಂದಿಗೆ ಆತ ಗುರುತಿಸಿಕೊಳ್ಳಬೇಕಾಗುತ್ತೆ. ಇಷ್ಟೇ ಕಥೆ!! ಮುಂದಿನದು ಏನೆಂದು ಯಾರು ಬೇಕಾದರೂ ಊಹಿಸಬಹುದು. ಕಥೆ-ಚಿತ್ರಕಥೆ ಹೀಗೆ ಸಾಗುತ್ತಿರುವಾಗ ಪ್ರೇಕ್ಷಕ ಮೈಮುರಿಯುತ್ತಾನೆ-ಆಕಳಿಸುತ್ತಾನೆ. ಚಿತ್ರದಲ್ಲಿರುವ ಕಸುವು ಎಂದರೆ, ಅದು ಯೋಗಿಯ 'ಹೆಣಗಾಟಾತ್ಮಕ' ಅಭಿನಯ ಮತ್ತು ಎಮಿಲ್ ಅವರ ಸಂಗೀತ. ಚಿತ್ರಕ್ಕೆ ತನ್ನ ಕೈಲಿ ಸಾಧ್ಯವಿದ್ದಷ್ಟು ಜೀವ ತುಂಬಲು ಯೋಗೀಶ್ ಶ್ರಮವಹಿಸಿದ್ದರೆ, ಸರ್ಕಸ್ ಸೋಲಿನಿಂದ ಸುಧಾರಿಸಿಕೊಂಡಿರುವ ಎಮಿಲ್ ಹೊಚ್ಚ ಹೊಸ ಟ್ಯೂನುಗಳನ್ನು ಕೊಟ್ಟಿದ್ದಾರೆ. ಚಿತ್ರವೇನಾದರೂ ಥಿಯೇಟರ್ ಕಚ್ಚಿಕೊಂಡರೆ ಅದು ಎಮಿಲ್ ಅವರ ಸಂಗೀತದಿಂದ ಮಾತ್ರ ಎನ್ನಬಹುದು.