Select Your Language

Notifications

webdunia
webdunia
webdunia
webdunia

ಪೇಲವ ಚಿತ್ರ ಉಡ ಕೊನೆಗೂ ಬಿಡುಗಡೆ

ಉಡ
ರವಿಪ್ರಕಾಶ್ ರ

MOKSHENDRA
ಚಿತ್ರ: ಉಡ
ನಿರ್ದೇಶನ: ಶಶಾಂಕ್ ರಾಜ್
ತಾರಾಗಣ:ಯುವರಾಜ್, ಸಂಚಿತಾ, ನಿಶಾ ಶೆಟ್ಟಿ, ಸ್ವಾತಿ, ಹರೀಶ್ ರೈ, ಪದ್ಮಾ ವಾಸಂತಿ

ವಿಚಿತ್ರ ಸನ್ನಿವೇಶವೊಂದರಲ್ಲಿ ಹಳ್ಳಿಯಿಂದ ನಗರಕ್ಕೆ ಬರುವ ಪ್ರೇಮಿಗಳು ಭೂಗತ ಜಗತ್ತಿನಲ್ಲಿ ಸಿಲುಕುತ್ತಾರೆ. ಭೂಗತ ಪಾತಕಿಗಳಿಂದ ತನ್ನ ಪ್ರೀತಿಯನ್ನು, ಪ್ರಿಯತಮೆಯನ್ನು ಉಳಿಸಿಕೊಳ್ಳಲು ನಾಯಕ ಯಾವ ರೀತಿ ಹೊರಾಡುತ್ತಾನೆ ಎನ್ನುವುದು ಉಡ ಚಿತ್ರದ ಕಥಾವಸ್ತು.

ನಿರ್ದೇಶಕರು ಕಥೆಯ ಆಯ್ಕೆಯಲ್ಲಿ ಎಡವಿದ್ದಾರೆ. ಕನ್ನಡದಲ್ಲಿ ಈ ಹಿಂದೆ ಭೂಗತ ಜಗತ್ತಿಗೆ ಸಂಬಂಧಪಟ್ಟ ಅನೇಕ ಚಿತ್ರಗಳು ಬಂದು ವಾರದೊಳಗೆ ಎತ್ತಂಗಡಿಯಾಗಿವೆ. ಆದರೆ ನಿರ್ದೇಶಕರು ಮಾತ್ರ ಅಪ್ಡೇಟ್ ಆದಂತಿಲ್ಲ. ಮತ್ತೆ ಅಂತಹ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ. ಬಹುಶಃ ಅವರಿಗೆ ಇದು ವಿಭಿನ್ನ ಕಥೆ ಎಂದೆನಿಸಿರಬೇಕು. ಆದರೆ ಮಾಡಿದ ಚಿತ್ರದ ಮೇಲೂ ಹಿಡಿತ ಸಾಧಿಸುವಲ್ಲಿ ಅವರು ವಿಫಲರಾಗಿದ್ದಾರೆ.

ಚಿತ್ರದ ಒಂದು ದೃಶ್ಯಕ್ಕೂ ಇನ್ನೊಂದು ದೃಶ್ಯಕ್ಕೂ ಸಂಬಂಧವಿಲ್ಲ. ಧುತ್ತನೆ ಬರುವ ಇಂತಹ ದೃಶ್ಯಗಳನ್ನು ಪ್ರೇಕ್ಷಕರು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು. ಇಲ್ಲಿನ ಕೆಲವು ದೃಶ್ಯಗಳು ಹಾಗೂ ಡೈಲಾಗ್‌ಗಳು ತೀರಾ ನಾಟಕೀಯವಾಗಿವೆ. ಹಳ್ಳಿಯಲ್ಲಿರುವ ನಾಯಕ-ನಾಯಕಿಯ ಪ್ರೇಮ ಪ್ರಸಂಗ ಬಾಲಿಶವಾಗಿ ಮೂಡಿ ಬಂದಿದೆ.

webdunia
MOKSHENDRA
ಉಳಿದಂತೆ, ನಿರ್ದೇಶಕರು ಗಾಂಧಿನಗರದ ಸಿದ್ಧ ಸೂತ್ರಗಳಾದ ಐಟಂ ಸಾಂಗ್, ಒಂದಷ್ಟು ಹಾಸ್ಯಕ್ಕೆ ಮೊರೆ ಹೋಗಿದ್ದಾರೆ. ಆದರೆ ಹಾಸ್ಯ ದೃಶ್ಯ ಯಾವುದೋ ಒಂದು ಟೆಂಟ್ ನಾಟಕದ ದೃಶ್ಯದಂತೆ ಮೂಡಿ ಬಂದಿದೆ.

ಚಿತ್ರದ ನಾಯಕನಿಗೂ ನಟನೆಗೂ ಕೂಡಿ ಬರುವುದಿಲ್ಲ. ನಟನೆಯಿಂದ ಅವರು ಮಾರು ದೂರ ಇದ್ದಾರೆ. ಇನ್ನಷ್ಟು ಪಳಗಬೇಕಿದೆ. ಇಲ್ಲಿ ನಾಯಕನಿಗಿಂತ ಸ್ವಲ್ಪ ಹೆಚ್ಚೆ ಎನ್ನುವಷ್ಟು ಪ್ರಾಮುಖ್ಯತೆ ಗಿಟ್ಟಿಸಿದವರೆಂದರೆ ಖಳನಟ ಹರೀಶ್ ರೈ. ಪ್ರತಿ ದೃಶ್ಯದಲ್ಲೂ ಅವರು ಬಂದು ಹೋಗುತ್ತಾರೆ. ಇದರಿಂದ ಪ್ರೇಕ್ಷಕರಿಗೆ ಕನ್ಪ್ಯೂಸ್ ಆದರೆ ಅದು ನಿರ್ದೇಶಕರ ತಪ್ಪು.

ತಾಂತ್ರಿಕವಾಗಿಯೂ ಚಿತ್ರ ತುಂಬಾ ಬಡವಾಗಿದೆ. ರೀರೆಕಾರ್ಡಿಂಗ್, ಕ್ಯಾಮರಾ, ಯಾವುದರ ಬಗ್ಗೆಯೂ ಇಲ್ಲಿ ಹೆಚ್ಚು ಮಾತನಾಡುವಂತಿಲ್ಲ. ಚಿತ್ರದ ಹಾಡುಗಳಲ್ಲಿ ಉಡುಗೊರೆಯಾಗಿ ಹುಡುಗಿ.. ಒಂದು ಕೇಳುವಂತಿದೆ. ಉಳಿದಂತೆ ಹಾಡಿರಬೇಕೆಂಬ ಕಾರಣಕ್ಕಾಗಿ ಹಾಡನ್ನು ತುರುಕಿಸಿದ್ದಾರೆ ಎಂಬಂತಿದೆ. ಚಿತ್ರದ ಮೂವರು ನಾಯಕಿಯರಲ್ಲಿ ಸ್ವಲ್ಪ ಗಮನಸೆಳೆಯುವವರೆಂದರೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡ ಸ್ವಾತಿ. ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಉಳಿದಂತೆ ಸತ್ಯಜಿತ್, ಪದ್ಮಾವಾಸಂತಿ ತಮ್ಮ ಎಂದಿನ ಅಭಿನಯದ ಮೂಲಕ ಗಮನಸೆಳೆಯುತ್ತಾರೆ. ಒಟ್ಟಾರೆ ಚಿತ್ರವನ್ನು ಎರಡೂವರೆ ಗಂಟೆ ಸಹಿಸಿಕೊಳ್ಳುವುದು ಪ್ರೇಕ್ಷಕರಿಗೆ ಬಿಟ್ಟ ವಿಷಯ.
webdunia
MOKSHENDRA

Share this Story:

Follow Webdunia kannada