ಪಾರಿಜಾತ ಚಿತ್ರವಿಮರ್ಶೆ; ಜೋಡಿ ಮೋಡಿ ನೋಡಿ
ಚಿತ್ರ: ಪಾರಿಜಾತತಾರಾಗಣ: ದಿಗಂತ್, ಐಂದ್ರಿತಾ ರೇ, ಶರಣ್, ರಘು ಮುಖರ್ಜಿನಿರ್ದೇಶನ: ಪ್ರಭು ಶ್ರೀನಿವಾಸ್ಸಂಗೀತ: ಮನೋ ಮೂರ್ತಿಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಸುಂದರ ಪ್ರೇಮಕತೆಯೊಂದು ಬೆಳ್ಳಿ ತೆರೆಯನ್ನು ಆವರಿಸಿಕೊಂಡಿದೆ. ಅವರು ನಿಜಜೀವನದಲ್ಲೂ ಪ್ರೇಮಿಗಳೆಂದು ಕರೆಸಿಕೊಳ್ಳುತ್ತಿರುವವರು. ತೆರೆಯ ಮೇಲಂತೂ ಸಿಕ್ಕಿದ್ದೇ ಅವಕಾಶ ಎಂಬಂತೆ ಚಿಂದಿ ಉಡಾಯಿಸಿದ್ದಾರೆ.
ಆತ ಭಾಸ್ಕರ್ (ದಿಗಂತ್). ಉಂಡಾಡಿ ಗುಂಡನಾದರೂ ಬಾಸ್ ಎಂದೇ ಕರೆಸಿಕೊಳ್ಳುವವನು. ಕೆಲಸ ಒಂದು ಬಿಟ್ಟು ಬೇರೆ ಯಾವುದಕ್ಕೂ ಭಾಸ್ಕರ್ ಸೈ. ಆತನಿಗೊಬ್ಬ ಕ್ಷೌರಿಕ ಗೆಳೆಯ ಸುಂದರ್ (ಶರಣ್). ಸುಂದರನ ಸಲೂನ್‌ನಲ್ಲೇ ದಿನಗಳೆಯುವ ಭಾಸ್ಕರ್, ಆತನ ದುಡ್ಡಲ್ಲೇ ಮಜಾ ಉಡಾಯಿಸುತ್ತಾನೆ. ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಹಾಗೆ. ಆದರೂ ಪ್ರೀತಿಗೆ ಹುಡುಗಿಯೊಬ್ಬಳು ಸಿಕ್ಕಿರುತ್ತಾಳೆ.ಆದರೂ ದುರಾದೃಷ್ಟ. ಭಾಸ್ಕರ್ ಪಿಯುಸಿ ಪಾಸ್ ಮಾಡಲೂ ಒದ್ದಾಡುತ್ತಿರುತ್ತಾನೆ. ಹೇಗಾದರೂ ಪಾಸ್ ಆಗಲೇ ಬೇಕೆಂದು ಅಡ್ಡದಾರಿಯಲ್ಲಿ ಹೋದವನು ಸಿಕ್ಕಿ ಬೀಳುತ್ತಾನೆ. ಅದೂ ತನ್ನ ಹುಡುಗಿ ಚಂದ್ರಿಕಾ (ಐಂದ್ರಿತಾ ರೇ) ಕೈಯಲ್ಲಿ.