Select Your Language

Notifications

webdunia
webdunia
webdunia
webdunia

ಪರಮೇಶನ ಪಾನ್ ತಲೆ ತಿರುಗುವಂತಿದೆ

ಮಹೇಶ್ ಬಾಬು ಪರಮೇಶ  ಪಾನ್ವಾಲಾ ಶಿವರಾಜ್ ಕುಮಾರ್
MOKSHENDRA
ಅದೇ ತಂಗಿ ಸೆಂಟಿಮೆಂಟ್ ಅದೇ ಫೈಟ್, ಅದೇ ಡ್ಯಾನ್ಸ್. ಇದನ್ನು ನೋಡಿ ನೋಡಿ ಬೇಸತ್ತ ಪ್ರೇಕ್ಷಕರಿಗೆ ನಿರ್ದೇಶಕ ಮಹೇಶ್ ಬಾಬು ತಮ್ಮ ಪರಮೇಶ ಪಾನ್ವಾಲಾದ ಮೂಲಕ ಮತ್ತೊಮ್ಮೆ ಬೋರ್ ಹೊಡೆಸಿದ್ದಾರೆ. ಆಕಾಶ್, ಅರಸ್‌ದಂತಹ ಉತ್ತಮ ಚಿತ್ರಗಳನ್ನು ನೀಡಿದ ಮಹೇಶ್ ಬಾಬು ಈ ಬಾರಿ ಯಾಕೋ ಸಂಪೂರ್ಣ ಎಡವಿದ್ದಾರೆ. ಹಳೆಯ ಕಥೆಗೆ ಹೊಸ ಬಣ್ಣ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಚಿತ್ರದಲ್ಲಿ ಎಲ್ಲೂ ಹೊಸತನವಿಲ್ಲ.

ಈ ಹಿಂದೆ ಶಿವಣ್ಣ ಇಂತಹ ತಂಗಿ ಸೆಂಟಿಮೆಂಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ತಂಗಿಯ ತಂಟೆಗೆ ಬರುವವರನ್ನು ಥಳಿಸುವ, ಪ್ರೀತಿಯಿಂದ ಬರುವವರಿಗೆ ಸಹಾಯ ಮಾಡುವ, ತನಗಾಗಿ ಕಾದಿರುವ ನಲ್ಲೆಯೊಡನೆ ಹೆಜ್ಜೆ ಹಾಕುವ ಚಿತ್ರಗಳಲ್ಲಿ ಶಿವಣ್ಣ ಈ ಹಿಂದೆ ಅದೆಷ್ಟೋ ಬಾರಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಜನಾರ್ದನ ಮಹರ್ಷಿಯಿಂದ ಕಥೆ ಪಡೆದು ಬೊಂಬಾಟ್ ಚಿತ್ರ ಮಾಡುತ್ತೇನೆ ಎಂದು ಮಹೇಶ್ ಬಾಬು ಭಾವಿಸಿದ್ದರು. ಆದರೆ ಅನ್ನವನ್ನು ಮರುದಿನ ಚಿತ್ರಾನ್ನ ಮಾಡಿ ಕೊಡುವ ಜನಾರ್ದನ ಮಹರ್ಷಿ ಒಂದೇ ಕಥೆಯಲ್ಲಿ ಮೂರ್ನಾಲ್ಕು ಚಿತ್ರಗಳನ್ನು ಮಾಡಿಸುವ 'ಜಾಣ್ಮೆ' ಉಳ್ಳವರು.

ಚಿತ್ರದಲ್ಲಿ ಬರುವ ಕಿತ್ತೋದ ಡೈಲಾಗ್‌ಗಳು, ಲಯ ತಪ್ಪಿದ ಸಂಗೀತ ಪ್ರೇಕ್ಷಕರನ್ನು ಕುಳಿತಲ್ಲಿಯೇ ಸುಖನಿದ್ದೆಗೆ ಜಾರಿಸುತ್ತದೆ. ಶಿವಣ್ಣ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕರು ಚಿತ್ರದಲ್ಲಿ ಹಾಸ್ಯ ದೃಶ್ಯಕ್ಕೆ ಗಮನ ಕೊಟ್ಟಷ್ಟು ಕಥೆಯ ನಿರೂಪಣೆಯ ಕಡೆಗೆ ಗಮನ ಕೊಟ್ಟಿಲ್ಲ. ಸಾಧುಕೋಕಿಲ ಹಾಗೂ ಓಂಪ್ರಕಾಶ್ ರಾವ್ ಕಾಂಬಿನೇಶನ್‌ನಲ್ಲಿ ಹಾಸ್ಯ ಚೆನ್ನಾಗಿ ಮೂಡಿಬಂದಿದೆ. ಆಶಿಶ್ ವಿದ್ಯಾರ್ಥಿ ಎಂದಿನಂತೆ ಆರ್ಭಟಿಸಿದ್ದಾರೆ. ಸೋನುಗೆ ತಂಗಿಯ ಪಾತ್ರಕ್ಕಿಂತ ಗ್ಲ್ಯಾಮರ್ ಪಾತ್ರವೇ ಹೆಚ್ಚು ಒಪ್ಪುತ್ತದೆ. ನಟಿ ಸುರ್ವಿನ್ ಚಾವ್ಲಾ ನಟನೆಯಲ್ಲಿ ಪಳಗಬೇಕು. ಒಟ್ಟಾಗಿ ಚಿತ್ರ ಚಿತ್ರಾನ್ನವಾಗಿದೆ. ಪರಮೇಶನ ಪಾನ್ ತಲೆ ತಿರುಗಿಸುತ್ತದೆ.

webdunia
MOKSHENDRA

Share this Story:

Follow Webdunia kannada