Select Your Language

Notifications

webdunia
webdunia
webdunia
webdunia

ಪರಮಾತ್ಮ ವಿಮರ್ಶೆ; ಸಕಲ ಕಲಾ ವಲ್ಲಭರ ಸೂಪರ್ ಶೋ

ಪರಮಾತ್ಮ ಚಿತ್ರ ವಿಮರ್ಶೆ
ಚಿತ್ರ : ಪರಮಾತ್ಮ
ತಾರಾಗಣ : ಪುನೀತ್ ರಾಜ್‌ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರೇ, ರಮ್ಯಾ ಬಾರ್ನೆ, ಅನಂತ್‌ನಾಗ್, ರಂಗಾಯಣ ರಘು
ನಿರ್ದೇಶನ : ಯೋಗರಾಜ್ ಭಟ್
ಸಂಗೀತ : ಹರಿಕೃಷ್ಣ ವಿ.

WD
ಕಥೆಯೇ ಇಲ್ಲದ ಸಿನಿಮಾವೊಂದನ್ನು ಭರ್ತಿ ಎರಡೂಕಾಲು ಗಂಟೆಗಳ ಕಾಲ ಪ್ರೇಕ್ಷಕರು ಕಣ್ಣೆವೆ ಮುಚ್ಚದೆ ನೋಡುವಂತೆ ಮಾಡುವುದು ಹೇಗೆ? ಈ ಪ್ರಶ್ನೆಗೆ ನಿರ್ದೇಶಕ ಯೋಗರಾಜ್ ಭಟ್ ಇನ್ನೊಮ್ಮೆ ಉತ್ತರಿಸಿದ್ದಾರೆ. ತಾನು ಆರಿಸುವ ವಿಷಯ ಗಂಭೀರವಾಗಿದ್ದರೂ, ಸಿನಿಮಾ ಮಾತ್ರ ಜಾಲಿ ಜಾಲಿ. ಇದು ತನ್ನಿಂದ ಮಾತ್ರ ಸಾಧ್ಯ ಎಂಬ ಸಂದೇಶವೂ ತಲುಪಬೇಕಾದವರಿಗೆ ತಲುಪುತ್ತದೆ. ಇದು ಅರ್ಥವಾಗದ ಪ್ರೇಕ್ಷಕರದ್ದು ಗೊಣಗಾಟ.

ಈ ಹಿಂದೆ 'ಪಂಚರಂಗಿ'ಯಲ್ಲಿ ಬಿಡಿ ಬಿಡಿ ವಿಚಾರಗಳನ್ನು ಇಡಿಯನ್ನಾಗಿಸಿದ್ದ ಭಟ್ಟರು 'ಪರಮಾತ್ಮ'ದಲ್ಲಿ ಒರಿಜಿನಲ್ ವೇದಾಂತಿ. ಸಭ್ಯತೆಗೆ ಸಭ್ಯತೆ, ಸಂದೇಶಕ್ಕೆ ಸಂದೇಶ, ಮನರಂಜನೆಗೆ ಮನರಂಜನೆ -- ಹೀಗೆ ಎಲ್ಲಾ ವಿಭಾಗಗಳಿಗೂ ಸಿನಿಮಾವನ್ನು ಹರಿದು ಹಂಚಿರುವ ಅವರು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಮೇಜನ್ನೇ ಬದಲಿಸಿದ್ದಾರೆ. ಅವರದ್ದಿಲ್ಲಿ ವಿಭಿನ್ನ ಮತ್ತು ವಿಸ್ಮಯದ ಪಾತ್ರ.

webdunia
WD
ಬಿಡುಗಡೆಗೂ ಮೊದಲೇ ಭಟ್ಟರು ಕಥೆ ಹೇಳಿದಂತೆ, ಪುನೀತ್ ಇಲ್ಲಿ ಬಿಎಸ್ಸಿ ಗೋಲ್ಡ್ ಮೆಡಲಿಸ್ಟ್. ಹೆಸರು ಪರಮ ಆಲಿಯಾಸ್ ಪರಮಾತ್ಮ. ಆತನ ತಂದೆ (ಅನಂತ್‌ನಾಗ್) ಹೃದ್ರೋಗ ತಜ್ಞ. ಅವರ ಪ್ರಕಾರ, ಹೃದಯ ಅಂದ್ರೆ ದೇವರು. ಅದು ಹೇಳಿದಂತೆ ನಾವು ಕೇಳಬೇಕು. ಅದೇ ಮನಸ್ಥಿತಿ ಪರಮನದ್ದು. ಆತ ಸಕಲ ಕಲಾವಲ್ಲಭ. ಆತನಿಗೇನು ಗೊತ್ತು ಅನ್ನೋದೇ ದೊಡ್ಡ ಪಟ್ಟಿ.

ಸಾನ್ವಿ (ಐಂದ್ರಿತಾ ರೇ) ಮತ್ತು ಪವಿತ್ರ (ರಮ್ಯಾ ಬಾರ್ನೆ) ಆತನ ಫ್ರೆಂಡ್ಸು. ಅವರವರ ಭಾವಕ್ಕೆ ಲವ್ವರ್ಸು. ಆದರೆ ಅದೇ ಭಾವ ಪರಮನದ್ದಲ್ಲ. ತನ್ನ ಸ್ಥಿತಿ ಪತಂಗದಂತಾಗಬಹುದು ಎಂಬುದನ್ನೂ ಊಹಿಸದೆ ದೀಪದ ಸುತ್ತ ಸುತ್ತುತ್ತಾನೆ. ವೈರುಧ್ಯಗಳ ನಡುವೆಯೇ ದೀಪಾ (ದೀಪಾ ಸನ್ನಿಧಿ) ಹಿಂದೆ ಬಿದ್ದು, ಮದುವೆಯಾಗುತ್ತಾನೆ.

webdunia
WD
ಮದುವೆಯಾಗುವಷ್ಟರಲ್ಲಿ ಸಿನಿಮಾ ಮುಗಿಯುತ್ತದೆ ಅಂತ ತಿಳಿದುಕೊಳ್ಳಬೇಕಿಲ್ಲ. ವಾಸ್ತವದಲ್ಲಿ ಸಿನಿಮಾದ ಆರಂಭವೇ ಇಲ್ಲಿಂದ. ಮುಂದೇನಾಗುತ್ತದೆ, ಪರಮನ ಜೀವನ ಚಕ್ರ ಎತ್ತ ಹೊರಳುತ್ತದೆ ಅನ್ನೋದು ತುಂಬಾ ಇಂಟರೆಸ್ಟಿಂಗ್. ಅದೇನು ಅನ್ನೋದನ್ನು ಚಿತ್ರಮಂದಿರದಲ್ಲೇ ನೋಡಬೇಕು.

'ಪರಮಾತ್ಮ'ನ ಸಕಲ ಲೀಲೆಗಳ ರೂವಾರಿ ಯೋಗರಾಜ್ ಭಟ್ಟರು ಮತ್ತೊಮ್ಮೆ ಸಿನಿ ಮಾಂತ್ರಿಕರಾಗಿದ್ದಾರೆ. ಅದ್ಭುತ ನಿರೂಪಣೆ, ಕಚಗುಳಿ ಇಡುವ ಸಂಭಾಷಣೆ, ಅಶ್ಲೀಲವಲ್ಲದ ಫಿಲಾಸಫಿ ಡಬ್ಬಲ್ ಮೀನಿಂಗ್ ಮಾತುಗಳು, ಹಾಡುಗಳ ಸಾಹಿತ್ಯ -- ಹೀಗೆ ಎಲ್ಲದರಲ್ಲೂ ಭಟ್ಟರಿಗೆ ಭಟ್ಟರೇ ಸಾಟಿ.

ಎಲ್ಲವನ್ನೂ ತಮಾಷೆಯಿಂದಲೇ, ಹಗುರವಾಗಿಯೇ ಪರಿಗಣಿಸುವುದನ್ನು ಯೋಚಿಸುವುದು ಭಟ್ಟರಿಗೆ ಮಾತ್ರ ಸಾಧ್ಯ. ಗಂಭೀರ ಸನ್ನಿವೇಶಗಳು ನಗು ತರಿಸುವುದು ಪ್ರೇಕ್ಷಕರ ಪಾಲಿಗೆ ಹಾಸ್ಯಾಸ್ಪದ. ಇದು ಸಿನಿಮಾದಲ್ಲಿ ಹುಡುಕಬಹುದಾದ ಮೊದಲ ಹುಳುಕು ಮತ್ತು ಅಸ್ವೀಕಾರಾರ್ಹ ಅಂಶ.

webdunia
WD
ಪುನೀತ್ ನಾಯಕನಾದರೂ, ಚಿತ್ರಪೂರ್ತಿ ಆವರಿಸಿಕೊಂಡಿಲ್ಲ. ಇಬ್ಬರು ನಾಯಕಿಯರು ಅಷ್ಟೇ ಅವಕಾಶ ಪಡೆದಿದ್ದಾರೆ. ಆದರೂ ಪುನೀತ್‌ರದ್ದು ಇಲ್ಲಿ ಹೊಸ ಅವತಾರ. ಅವರಿಲ್ಲಿ ಬರೀ ಆಕ್ಷನ್ ಹೀರೋ ಅಥವಾ ರೊಮ್ಯಾಂಟಿಕ್‌ಗೆ ಸೀಮಿತರಲ್ಲ. ಒಂಥರಾ ಇಲ್ಲಿ ಅವರದ್ದು ಕ್ರೇಜಿ ಬಾಯ್ ಪಾತ್ರ. ಕೆಲವೊಮ್ಮೆ ಮುಂಗಾರು ಮಳೆಯ ಗಣೇಶ್‌ ನೆನಪಾದರೂ ಅಚ್ಚರಿಯಿಲ್ಲ. ಇಷ್ಟೆಲ್ಲದರ ಹೊರತಾಗಿಯೂ, ಕೆಲವು ದೃಶ್ಯಗಳಲ್ಲಿ, ಇದು ಪುನೀತ್‌ ಚಿತ್ರವಲ್ಲ ಎಂಬ ಭಾವನೆ ಬರದೇ ಇರದು.

ಬಿಡುಗಡೆಗೆ ಮೊದಲು ದೀಪಾ ಸನ್ನಿಧಿಯನ್ನೇ ನಾಯಕಿ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಚಿತ್ರದಲ್ಲಿ ಇಬ್ಬರಿಗೂ ಸಮಪಾಲು. ಐಂದ್ರಿತಾ ರೇ ಅವರಿಗಂತೂ ಮಜಬೂತಾದ ಪಾತ್ರ ಸಿಕ್ಕಿದೆ. ಅದಕ್ಕೆ ನ್ಯಾಯವನ್ನೂ ಸಲ್ಲಿಸಿದ್ದಾರೆ. ಅವರ ಭಾವ ತುಮುಲತೆ ಕಾಡುತ್ತದೆ. ದೀಪಾ ಸನ್ನಿಧಿ ಇನ್ನೊಂದು ಅಚ್ಚರಿ. ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಹೊಸ ಆಸ್ತಿ.

ವಿ. ಹರಿಕೃಷ್ಣ ಸಂಗೀತದ ಹಾಡುಗಳ ಬಗ್ಗೆ ಮತ್ತೆ ಹೇಳುವ ಅಗತ್ಯವಿಲ್ಲ. ಇದಕ್ಕೆ ನ್ಯಾಯ ಸಲ್ಲಿಸುವಲ್ಲಿ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಯಶಸ್ವಿಯಾಗಿದ್ದಾರೆ. ಎಂದಿನಂತೆ ತನ್ನ ಅದ್ಭುತ ಕೈ ಚಳಕ ಮೆರೆದಿದ್ದಾರೆ. ಸದಾ ಫಾರಿನ್ ಶೂಟಿಂಗ್ ಜಪದಲ್ಲಿರುವ ಇತರ ನಿರ್ಮಾಪಕ-ನಿರ್ದೇಶಕರಿಗೆ, ಇದು ಕರ್ನಾಟಕದೊಳಗೆ ಚಿತ್ರೀಕರಣ ನಡೆಸಿರುವ ಸಿನಿಮಾ ಎಂದು ಭಟ್ಟರು ಇನ್ನೊಮ್ಮೆ ತೋರಿಸಿದ್ದಾರೆ.

ಸಿನಿಮಾ ನೋಡಿ, ಆದರೆ ಭಟ್ಟರಂತೆ ಸೀರಿಯಸ್‌ನೆಸ್ ಕಳೆದುಕೊಳ್ಳಬೇಡಿ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada