Select Your Language

Notifications

webdunia
webdunia
webdunia
webdunia

ನೀವು 'ಅಣ್ಣಾ ಬಾಂಡ್' ನೋಡಿದ್ರಾ?; ಇಲ್ಲಿದೆ ಚಿತ್ರವಿಮರ್ಶೆ

ನೀವು 'ಅಣ್ಣಾ ಬಾಂಡ್' ನೋಡಿದ್ರಾ?; ಇಲ್ಲಿದೆ ಚಿತ್ರವಿಮರ್ಶೆ
ಚಿತ್ರ: ಅಣ್ಣಾ ಬಾಂಡ್
ತಾರಾಗಣ: ಪುನೀತ್ ರಾಜ್‌ಕುಮಾರ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ, ರಂಗಾಯಣ ರಘು
ನಿರ್ದೇಶನ: ದುನಿಯಾ ಸೂರಿ
ಸಂಗೀತ: ವಿ. ಹರಿಕೃಷ್ಣ
SUJENDRA

ಹೈವೋಲ್ಟೇಜ್ ಹೊಡೆದಾಟಗಳು, ಒಳ್ಳೆಯ ಹಾಡುಗಳು, ಅದಕ್ಕೆ ತಕ್ಕ ದೃಶ್ಯಗಳು, ಎಲ್ಲಾ ವರ್ಗವನ್ನೂ ತಟ್ಟುವ ಹಾಡುಗಳು, ಸ್ಟೈಲಿಶ್ ಮೇಕಿಂಗ್, ಇವೆಲ್ಲದಕ್ಕಿಂತ ಹೆಚ್ಚಾಗಿ ಹಿಡಿದಿಡುವ ಸಂಭಾಷಣೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಬೇಕೆನ್ನುವುದು ನಿರ್ದೇಶಕ ಸೂರಿಗೆ 'ಜಾಕಿ'ಯಲ್ಲಿ ಚೆನ್ನಾಗಿ ಅರ್ಥವಾಗಿತ್ತು. ಅದರ ಪ್ರತಿಫಲವೇ 'ಅಣ್ಣಾ ಬಾಂಡ್'!

ಕೂಗು ಕೇಳಿದ ಕಡೆಯೆಲ್ಲ ಓಡುವವನೇ ಬಾಂಡ್ ರವಿ (ಪುನೀತ್ ರಾಜ್‌ಕುಮಾರ್). ಆತ ಸಹಾಯ ಮಾಡುತ್ತಲೇ ಇರುತ್ತಾನೆ. ಆತನಿಗೆ ಅವೆಲ್ಲ ತುಂಬಾ ಸುಲಭ. ಹೀಗಿದ್ದವನಿಗೆ ಹುಡುಗಿಯೊಬ್ಬಳು ಸಿಗದೇ ಇದ್ದರೆ ಹೇಗೆ? ಹಾಗೆ ಸಿಕ್ಕವಳೇ ಡಾಕ್ಯುಮೆಂಟರಿಗಾಗಿ ಬರುವ ಮೀರಾ (ಪ್ರಿಯಾಮಣಿ). ಆಕೆ ಇಷ್ಟವಾಗುತ್ತಾಳೆ. ಬೆನ್ನಿಗಿದ್ದವರೂ ಬಿಡಬೇಡ ಎನ್ನುತ್ತಾರೆ.

ಬೇಕೆಂದು ಹೊರಟವನು ಡ್ರಗ್ ಮಾಫಿಯಾ ದೊರೆ ಚಾರ್ಲಿಯನ್ನು (ಜಾಕಿ ಶ್ರಾಫ್) ಸುಖಾಸುಮ್ಮನೆ ಎದುರು ಹಾಕಿಕೊಳ್ಳುತ್ತಾನೆ. ಮಗಳನ್ನು ಹುಡುಕಲೆಂದು ಬಂದವನ ಟಾರ್ಗೆಟ್ ಬದಲಾಗುತ್ತದೆ. ಮೀರಾಳನ್ನೇ ಎತ್ತಿ ಹಾಕಿಕೊಂಡು ಹೋಗುವ ಚಾರ್ಲಿಗೀಗ ಬಾಂಡ್ ರವಿಯೇ ಟಾರ್ಗೆಟ್. ಹೀಗಾದರೆ ಏನಾಗುತ್ತದೆ ಅನ್ನೋದನ್ನು 'ಜಾಕಿ'ಯಲ್ಲಿ ನೋಡಿದ್ದೀರಿ. ಅಲ್ಲಿ ನಡೆದಂತೆ ಇಲ್ಲೂ ನಡೆಯುತ್ತದೆ.

ಇಂತಹ ಕಥೆ ಮುಂದಿದ್ದರೆ, ಪುನೀತ್‌ರಂತಹ ನಾಯಕ ಸಿಕ್ಕಿದರೆ ಸೂರಿ ಅದೆಂತಹಾ ಅದ್ಭುತ ಪ್ರೊಡಕ್ಟ್ ಹೊರಗೆ ತರುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಅದಕ್ಕೆ ಸೂರಿ ಮೋಸವನ್ನೂ ಮಾಡಿಲ್ಲ. ಪುನೀತ್ ಅಭಿಮಾನಿಗಳಿಗೆ ಏನೆಲ್ಲ ಬೇಕೋ, ಅದನ್ನೆಲ್ಲ ಕಟ್ಟಿಕೊಟ್ಟಿದ್ದಾರೆ.

ಹಾಗೆಂದು ಸೂರಿ ನಿರೀಕ್ಷೆ ಮುಟ್ಟುತ್ತಾರಾ ಎಂದು ಕೇಳಿದರೆ, ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. ಬಿಡಿಬಿಡಿಯಾಗಿ ದೃಶ್ಯಗಳು ರೋಮಾಂಚನಗೊಳಿಸಿದರೂ, ಅದಕ್ಕಿಂತ ಹೆಚ್ಚು ದೃಶ್ಯಗಳು ಬೋರ್ ಹೊಡೆಸುತ್ತವೆ. ಅದೇ ಜಂಗ್ಲಿ, ಅದೇ ಜಾಕಿಯ ದಾರಿಯಲ್ಲೇ ಚಿತ್ರ ಸಾಗುತ್ತದೆ. ಜಾಕಿಯ ಮುಂದುವರಿದ ಭಾಗವೇನೋ ಎಂಬಂತೆ ಭಾಸವಾಗುತ್ತದೆ. ಎಲ್ಲೋ 'ಚಿಂಗಾರಿ'ಯನ್ನು ನೆನಪಿಸುತ್ತಾರೆ. ಇನ್ನೆಲ್ಲೋ ನೋಡಿದ ದೃಶ್ಯಗಳು ನೆನಪಾಗುತ್ತವೆ. ಪ್ರೇಕ್ಷಕನ ಹೊಸತನದ ಹಸಿವು ಇಂಗುವುದೇ ಇಲ್ಲ. ಇವುಗಳಿಂದಾಗಿ, ಸೂರಿಯನ್ನು ಈ ಬಾರಿ ಹೊಗಳಲು ವಿಶೇಷ ಕಾರಣಗಳೇ ಸಿಗುವುದಿಲ್ಲ.

ಸನ್ನಿವೇಶಗಳು ಬೋರಾಗದಂತೆ ಚಿತ್ರಕಥೆಗೆ ಇನ್ನಷ್ಟು ಚುರುಕುತನ ಮುಟ್ಟಿಸುವ ಕೆಲಸ ಸೂರಿ ಮಾಡಬೇಕಿತ್ತು. ಹಾಗಿದ್ದರೂ ತಾಂತ್ರಿಕತೆ ಒತ್ತು ಕೊಟ್ಟಿರುವುದರಿಂದ 'ಅಣ್ಣಾ ಬಾಂಡ್' ಕೆಟ್ಟದೆನಿಸುವುದಿಲ್ಲ.

ಪುನೀತ್ ಎಲ್ಲೂ ತನ್ನ ಅಭಿಮಾನಿಗಳಿಗೆ ಬೋರ್ ಹೊಡೆಸುವುದಿಲ್ಲ. ಹೊಡೆದಾಟ, ಡ್ಯಾನ್ಸ್, ಸಂಭಾಷಣೆ ಹೇಳುವ ಶೈಲಿ ಎಲ್ಲದರಲ್ಲೂ ಅವರು ಟಾಪ್. ಇಡೀ ಸಿನಿಮಾ ಅವರ ಜನಪ್ರಿಯತೆಯಲ್ಲಿಯೇ ಸಾಗುತ್ತದೆ. ಪ್ರಿಯಾಮಣಿ ನೀಟು ನೀಟಾಗಿ, ಕನ್ನಡದಲ್ಲಿ ಇದುವರೆಗಿನ ಬೆಸ್ಟ್ ಎನ್ನುವಷ್ಟು ಉತ್ತಮವಾಗಿ ನಟಿಸಿದ್ದಾರೆ.

ಆದರೆ ನಿಧಿ ಸುಬ್ಬಯ್ಯ ಅವರದ್ದು 'ಸಾಯುವ' ಪಾತ್ರ. ರಂಗಾಯಣ ರಘು ಮತ್ತೆ ಮತ್ತೆ ನಗಿಸುತ್ತಾರೆ. ಜಾಕಿ ಶ್ರಾಫ್ ಮತ್ತೆ ಕನ್ನಡದಲ್ಲಿ ನಟಿಸುವ ಮೊದಲು ಪಾತ್ರದ ಬಗ್ಗೆ ವಿವರ ಪಡೆದುಕೊಳ್ಳುವುದು ಉತ್ತಮ. ಅವಿನಾಶ್ 'ಮೇಜರ್'. 'ಜಾಕಿ' ಹಾದಿಯಲ್ಲೇ ಸಾಗಿರುವ ವಿ. ಹರಿಕೃಷ್ಣ ಸಂಗೀತದ ಬಗ್ಗೆ ಎರಡನೇ ಮಾತಿಲ್ಲ. ಅದಕ್ಕೆ ತಕ್ಕಂತೆ ಸತ್ಯಾ ಹೆಗಡೆ ಕ್ಯಾಮರಾ.

'ಬಾಂಡ್' ಟೀಮ್ ಮೊದಲೇ ಹೇಳಿದಂತೆ, ನಿಮ್ಮಲ್ಲಿ ಹೆಚ್ಚು ನಿರೀಕ್ಷೆಗಳು ಇಲ್ಲದೇ ಇದ್ದರೆ, ಇದು ಸೂರಿ ಚಿತ್ರವೇ ಅಲ್ಲ ಎಂದು ಭಾವಿಸಿ ಚಿತ್ರಮಂದಿರಕ್ಕೆ ಹೋದರೆ 'ಅಣ್ಣಾ ಬಾಂಡ್' ಮೋಸ ಮಾಡುವುದಿಲ್ಲ!

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada